LIVE TV LocalCrimeNationalInternationalPoliticsBusinessFinancialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಕಾಂಗ್ರೆಸ್ ವಿರುದ್ಧ ಅಲ್ಪಸಂಖ್ಯಾತರು, ಶೋಷಿತರ ಆಕ್ರೋಶ: ಬೆಳಗಾವಿ ಅಧಿವೇಶನದಲ್ಲಿ ಭರವಸೆ ಈಡೇರಿಸಲು ಗಡುವು

ಬೆಂಗಳೂರು, ನ. 12: ವಿಧಾನಸಭೆ ಚುನಾವಣೆ ವೇಳೆ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಅಲ್ಪಸಂಖ್ಯಾತರು, ದಲಿತರು, ರೈತರು ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಗುರುವಾರ ನಗರದ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಸಮಾವೇಶ ನಡೆಸಿದರು. ಮುಂಬರುವ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಪ್ರಮುಖ ಬೇಡಿಕೆಗಳನ್ನು ಈಡೇರಿಸದಿದ್ದರೆ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.

‘ಕರ್ನಾಟಕದ ಅಲ್ಪಸಂಖ್ಯಾತರು ಹಾಗೂ ಶೋಷಿತರ ಧ್ವನಿ’ ವೇದಿಕೆಯ ನೇತೃತ್ವದಲ್ಲಿ ನಡೆದ ಸಮಾವೇಶದಲ್ಲಿ ಮುಸ್ಲಿಂ, ಕ್ರೈಸ್ತ ಧರ್ಮಗುರುಗಳು, ದಲಿತ, ರೈತ ಹಾಗೂ ಕಾರ್ಮಿಕ ಸಂಘಟನೆಗಳ ಮುಖಂಡರು ಭಾಗವಹಿಸಿ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಮತಾಂತರ ನಿಷೇಧ ಕಾಯ್ದೆ ಹಾಗೂ ಜಾನುವಾರು ಹತ್ಯೆ ನಿಷೇಧ ಕಾಯ್ದೆ ರದ್ದುಪಡಿಸುವುದು, ಮುಸ್ಲಿಮರ 2ಬಿ ಮೀಸಲಾತಿ ಮರುಸ್ಥಾಪಿಸುವುದು ಮತ್ತು ದ್ವೇಷ ಭಾಷಣ ತಡೆಗೆ ಕಠಿಣ ಕ್ರಮ ಕೈಗೊಳ್ಳುವುದು ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟು ಐದು ನಿರ್ಣಯಗಳನ್ನು ಅಂಗೀಕರಿಸಲಾಯಿತು.

ಸಮಾವೇಶ ಉದ್ಘಾಟಿಸಿದ ಬೆಂಗಳೂರು ಮಹಾಧರ್ಮಕ್ಷೇತ್ರದ ಆರ್ಚ್‌ಬಿಷಪ್ ಡಾ. ಪೀಟರ್ ಮಚಾದೊ, ಇದು ರಾಜಕೀಯ ಅಥವಾ ಧಾರ್ಮಿಕ ಸಭೆಯಲ್ಲ, ಸಾಮಾಜಿಕವಾಗಿ ಶೋಷಣೆಗೊಳಗಾದ ಜನರ ಹಕ್ಕುಗಳಿಗಾಗಿ ನಡೆಯುತ್ತಿರುವ ಸಮಾವೇಶವಾಗಿದೆ ಎಂದರು.

ಮತಾಂತರ ನಿಷೇಧ ಕಾಯ್ದೆಯು ಸಂವಿಧಾನದ 25ನೇ ವಿಧಿಯ ಆಶಯಗಳಿಗೆ ವಿರುದ್ಧವಾಗಿದೆ. ಧಾರ್ಮಿಕ ಅಲ್ಪಸಂಖ್ಯಾತರನ್ನು ಎರಡನೇ ದರ್ಜೆಯ ಪ್ರಜೆಗಳಂತೆ ಕಾಣಬಾರದು. ಕ್ರೈಸ್ತ ಸಮುದಾಯ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳ ಮೂಲಕ ಸಮಾಜದ ಎಲ್ಲ ವರ್ಗಗಳಿಗೂ ಸೇವೆ ಸಲ್ಲಿಸುತ್ತಿದೆ. ಚುನಾವಣೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಿದರೆ ಮಾತ್ರ ಜನರು ಮುಂದಿನ ಚುನಾವಣೆಯಲ್ಲಿ ಸರ್ಕಾರವನ್ನು ನಂಬುತ್ತಾರೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ಮುಸ್ಲಿಂ ಒಕ್ಕೂಟದ ಸಂಚಾಲಕ ಯಾಸೀನ್ ಮಲ್ಪೆ ಮಾತನಾಡಿ, ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿರುವ ಸರ್ಕಾರ ಅಲ್ಪಸಂಖ್ಯಾತರು, ದಲಿತರು ಹಾಗೂ ರೈತರಿಗೆ ನೀಡಿದ ಭರವಸೆಗಳ ವಿಚಾರದಲ್ಲಿ ನಿರ್ಲಕ್ಷ್ಯ ತೋರುತ್ತಿದೆ ಎಂದು ಆರೋಪಿಸಿದರು.

ಸಂವಿಧಾನದ ಆಶಯಗಳ ಕುರಿತು ಭಾಷಣ ಮಾಡುವುದಷ್ಟೇ ಸಾಲದು. ಅಧಿಕಾರವನ್ನು ಬಳಸಿಕೊಂಡು ಸಾಮಾಜಿಕ ನ್ಯಾಯ ಒದಗಿಸಬೇಕು. ಅಲ್ಪಸಂಖ್ಯಾತರ ಬೆಂಬಲವನ್ನು ಶಾಶ್ವತವೆಂದು ಭಾವಿಸಿದರೆ ಕಾಂಗ್ರೆಸ್ ರಾಜಕೀಯ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

‘ಮೂರೂವರೆ ವರ್ಷಗಳ ಆಡಳಿತ ವಿಶ್ವಾಸದ್ರೋಹ’

ಪ್ರಗತಿಪರ ಚಿಂತಕ ಶಿವಸುಂದರ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಮೂರೂವರೆ ವರ್ಷಗಳ ಆಡಳಿತವು ವಿಶ್ವಾಸದ್ರೋಹದ ಕಥೆಯಾಗಿದೆ ಎಂದು ಟೀಕಿಸಿದರು.

ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ ಮುಂಚಿನ ಪಟ್ಟಿಯನ್ನು ಬಳಸುವುದಾಗಿ ಹೇಳಿದ್ದ ಸರ್ಕಾರ, ಇದೀಗ ಪರಿಷ್ಕೃತ ಪಟ್ಟಿಯನ್ನೇ ಬಳಸಲು ಮುಂದಾಗಿದೆ. ಇದರಿಂದ ರಾಜ್ಯದ ಒಂದು ಕೋಟಿ ಹಾಗೂ ಬೆಂಗಳೂರಿನ 53 ಲಕ್ಷ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗುವ ಆತಂಕವಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರವೂ ಜಾನುವಾರು ಹತ್ಯೆ ನಿಷೇಧ ಕಾಯ್ದೆಯಡಿ 1,950 ಪ್ರಕರಣಗಳು ದಾಖಲಾಗಿವೆ. ಅನುಪಯುಕ್ತ ಜಾನುವಾರುಗಳನ್ನು ಮಾರಾಟ ಮಾಡಲು ಸಾಧ್ಯವಾಗದೆ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ದೂರಿದರು.

ಸಿಪಿಐಎಂ ರಾಜ್ಯ ಸಮಿತಿ ಸದಸ್ಯೆ ಕೆ. ನೀಲಾ ಮಾತನಾಡಿ, ಮುಸ್ಲಿಮರ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿ ಕುರಿತು ಸಾಚಾರ್ ಸಮಿತಿ ವರದಿ ಸಲ್ಲಿಕೆಯಾಗಿ 19 ವರ್ಷ ಕಳೆದರೂ ಪರಿಸ್ಥಿತಿಯಲ್ಲಿ ನಿರೀಕ್ಷಿತ ಸುಧಾರಣೆಯಾಗಿಲ್ಲ. ಸಾಮಾಜಿಕ ನ್ಯಾಯದ ಕುರಿತು ಮಾತನಾಡುವ ಕಾಂಗ್ರೆಸ್ ಸರ್ಕಾರ ತನ್ನ ಭರವಸೆಗಳನ್ನು ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.

ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ ಮಾತನಾಡಿ, ಚುನಾವಣೆಯಲ್ಲಿ ನೀಡಿದ ಮಾತನ್ನು ಉಳಿಸಿಕೊಳ್ಳದವರನ್ನು ವಚನಭ್ರಷ್ಟರು ಎನ್ನಬೇಕಾಗುತ್ತದೆ. ದಲಿತರ ಮೇಲಿನ ದೌರ್ಜನ್ಯ ಹಾಗೂ ಸಾಮಾಜಿಕ ತಾರತಮ್ಯ ತಡೆಯಲು ಸರ್ಕಾರ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದರು.

ಕರ್ನಾಟಕ ರಾಜ್ಯ ರೈತ ಸಂಘದ ಸಂಚಾಲಕ ವೀರಸಂಗಯ್ಯ ಮಾತನಾಡಿ, ರಾಜ್ಯದ 87 ಲಕ್ಷ ರೈತ ಕುಟುಂಬಗಳ ಪೈಕಿ 69 ಲಕ್ಷ ಸಣ್ಣ ರೈತ ಕುಟುಂಬಗಳು ಹೈನುಗಾರಿಕೆಯನ್ನು ಅವಲಂಬಿಸಿವೆ. ಜಾನುವಾರು ಹತ್ಯೆ ನಿಷೇಧ ಕಾಯ್ದೆಯಿಂದ ಅನುಪಯುಕ್ತ ರಾಸುಗಳನ್ನು ಮಾರಾಟ ಮಾಡಲು ಸಾಧ್ಯವಾಗದೆ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆರೋಪಿಸಿದರು.

2ಬಿ ಮೀಸಲಾತಿ ಮರುಸ್ಥಾಪನೆಗೆ ಒತ್ತಾಯ

ಹಿರಿಯ ಪತ್ರಕರ್ತ ಬಿ.ಎಂ. ಹನೀಫ್ ಮಾತನಾಡಿ, ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಕುರಿತು ವಿವಿಧ ಆಯೋಗಗಳು ನಡೆಸಿದ ಅಧ್ಯಯನದ ಆಧಾರದಲ್ಲಿ ಮುಸ್ಲಿಮರಿಗೆ 2ಬಿ ಪ್ರವರ್ಗದಡಿ ಶೇ.4ರಷ್ಟು ಮೀಸಲಾತಿ ನೀಡಲಾಗಿತ್ತು. ಇದು ಕೇವಲ ಧರ್ಮಾಧಾರಿತ ಮೀಸಲಾತಿಯಲ್ಲ ಎಂದು ಪ್ರತಿಪಾದಿಸಿದರು.

ಹಿಂದಿನ ಬಿಜೆಪಿ ಸರ್ಕಾರ ಹೊರಡಿಸಿದ್ದ ಮೀಸಲಾತಿ ಸಂಬಂಧಿತ ಆದೇಶವನ್ನು ರದ್ದುಗೊಳಿಸುವುದಾಗಿ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಸಚಿವ ಸಂಪುಟ ಸಭೆಯಲ್ಲಿ ಸೂಕ್ತ ನಿರ್ಣಯ ಕೈಗೊಂಡು ಆ ಭರವಸೆಯನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.

ಸಿಪಿಐಎಂಎಲ್ ಲಿಬರೇಷನ್ ರಾಜ್ಯ ಕಾರ್ಯದರ್ಶಿ ನ್ಯಾಯವಾದಿ ಕ್ಲಿಫ್ಟನ್ ರೊಝಾರಿಯೊ ಮಾತನಾಡಿ, ಅಲ್ಪಸಂಖ್ಯಾತರು ಬೇರೆ ಪಕ್ಷಗಳತ್ತ ಹೋಗುವುದಿಲ್ಲ ಎಂಬ ಮನೋಭಾವದಿಂದ ಕಾಂಗ್ರೆಸ್ ಹೊರಬರಬೇಕು. ಕಾರ್ಮಿಕರ ಕನಿಷ್ಠ ವೇತನ ಪರಿಷ್ಕರಣೆ ಆದೇಶವನ್ನೂ ಸಮರ್ಪಕವಾಗಿ ಜಾರಿಗೊಳಿಸಿಲ್ಲ ಎಂದು ಆರೋಪಿಸಿದರು.

ಜನಶಕ್ತಿ ಸಂಚಾಲಕಿ ಮಲ್ಲಿಗೆ ಮಾತನಾಡಿ, ಸರ್ಕಾರ ಭರವಸೆಗಳನ್ನು ಮರೆತಿಲ್ಲ. ರಾಜಕೀಯ ಲೆಕ್ಕಾಚಾರದಿಂದ ಅವುಗಳ ಅನುಷ್ಠಾನಕ್ಕೆ ಮುಂದಾಗುತ್ತಿಲ್ಲ. ದ್ವೇಷ ಭಾಷಣ ಹಾಗೂ ಅದರಿಂದ ಉಂಟಾಗುವ ಸಂಘರ್ಷಗಳಿಗೆ ಬಡವರ ಮಕ್ಕಳು ಬಲಿಯಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಜಮೀಯತ್ ಉಲಮಾ-ಎ-ಹಿಂದ್ ರಾಜ್ಯ ಉಪಾಧ್ಯಕ್ಷ ಮುಫ್ತಿ ಆರ್. ಮುಹಮ್ಮದ್ ಹುಸೇನ್ ಸಾಬ್, ದಲಿತ ಮುಖಂಡ ಬಸವರಾಜ ಕೌತಾಳ್ ಸೇರಿದಂತೆ ಹಲವರು ಮಾತನಾಡಿ, ಸರ್ಕಾರ ತಕ್ಷಣ ತನ್ನ ನಿಲುವು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

ಐದು ನಿರ್ಣಯಗಳ ಅಂಗೀಕಾರ

ಸಮಾವೇಶದ ಅಂತ್ಯದಲ್ಲಿ ಕೆ.ಆರ್. ಸುಹೈಲ್ ಅಹ್ಮದ್ ಮಂಡಿಸಿದ ಐದು ನಿರ್ಣಯಗಳನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು. ಮತಾಂತರ ನಿಷೇಧ ಕಾಯ್ದೆ ರದ್ದುಪಡಿಸಿ ಅದರಡಿ ದಾಖಲಾದ ಪ್ರಕರಣಗಳನ್ನು ಹಿಂಪಡೆಯುವುದು, ದ್ವೇಷ ಭಾಷಣಗಳ ವಿರುದ್ಧ ಸುಪ್ರೀಂ ಕೋರ್ಟ ನಿರ್ದೇಶನದಂತೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸುವುದು, ಜಾನುವಾರು ಹತ್ಯೆ ನಿಷೇಧ ಕಾಯ್ದೆ ರದ್ದುಗೊಳಿಸಿ ಗುಂಪು ಹಲ್ಲೆ ತಡೆಗೆ ನ್ಯಾಯಾಲಯದ ಮಾರ್ಗಸೂಚಿಗಳನ್ನು ಜಾರಿಗೊಳಿಸುವುದು, ಅರ್ಹ ಮುಸ್ಲಿಮರಿಗೆ 2ಬಿ ಮೀಸಲಾತಿ ಮರುಸ್ಥಾಪಿಸಿ ಕ್ರೈಸ್ತ ಸಮುದಾಯಕ್ಕೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಶೇ.1ರಷ್ಟು ಪ್ರತ್ಯೇಕ ಮೀಸಲಾತಿ ಕಲ್ಪಿಸುವುದು ಹಾಗೂ ಈ ಎಲ್ಲ ಬೇಡಿಕೆಗಳ ಅನುಷ್ಠಾನಕ್ಕೆ ಮುಖ್ಯಮಂತ್ರಿ ಕಾಲಮಿತಿ ನಿಗದಿಪಡಿಸಬೇಕು ಎಂಬ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿಯೇ ಸರ್ಕಾರ ಈ ಬೇಡಿಕೆಗಳ ಕುರಿತು ಸ್ಪಷ್ಟ ನಿರ್ಧಾರ ಪ್ರಕಟಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಸಂಘಟನೆಗಳ ಮುಖಂಡರು ಎಚ್ಚರಿಸಿದರು.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೋದಿ ಭೇಟಿ : ಮಾಂಸ ಮಾರಾಟ ನಿಷೇಧಕಾಂಗ್ರೆಸ್ ವಿರುದ್ಧ ಅಲ್ಪಸಂಖ್ಯಾತರು, ಶೋಷಿತರ ಆಕ್ರೋಶ: ಬೆಳಗಾವಿ ಅಧಿವೇಶನದಲ್ಲಿ ಭರವಸೆ ಈಡೇರಿಸಲು ಗಡುವುಕೆಪಿಎಸ್‌ಸಿ ಪರೀಕ್ಷೆ: ಚುನಾವಣೆಯಂತೆ ಕಟ್ಟುನಿಟ್ಟಿನ ವ್ಯವಸ್ಥೆಮೋದಿಗೆ ಪ್ರಶ್ನೆ ಕೇಳಿದ್ದ ನಾರ್ವೆ ಪತ್ರಕರ್ತೆಯ ಭಾರತ ಪ್ರವಾಸಕ್ಕೆ ಕೊನೇ ಕ್ಷಣದಲ್ಲಿ ತಡೆಉತ್ತರ ಪ್ರದೇಶದಲ್ಲಿ ಹೊಸ ರಾಜಕೀಯ ಸಮೀಕರಣ: ಒವೈಸಿ–ಆಜಾದ ಮೈತ್ರಿಮೆಟ್ರೊ ಉದ್ಘಾಟನೆಯಲ್ಲಿ ಭಾಷಣಕ್ಕೆ ಅವಕಾಶ ನಿರಾಕರಣೆ: ಕೃಷ್ಣಬೈರೇಗೌಡ ಕಿಡಿದೇಶದ ಯಶೋಗಾಥೆಗಳಿಗೆ ಮಾಧ್ಯಮಗಳು ಆದ್ಯತೆ ನೀಡಲಿ: ಪ್ರಧಾನಿ ಮೋದಿ₹7 ಕೋಟಿ ನೀಡದಿದ್ದರೆ ಕೇಜ್ರಿವಾಲ್, ಪುತ್ರಿಯ ಹತ್ಯೆ: ಬಿಷ್ಣೋಯಿ ಗ್ಯಾಂಗ್ ಬೆದರಿಕೆಹಾಲು, ಬಸ್ ಪ್ರಯಾಣ ದರ ಏರಿಕೆ ಖಂಡಿಸಿ ಜೆಡಿಎಸ್ ಪ್ರತಿಭಟನೆ18ರಿಂದ ಅನುದಾನಿತ ಶಾಲಾ-ಕಾಲೇಜು ಬಂದ್‌ಗೆ ನಿರ್ಧಾರ