ಹೊಸದಿಲ್ಲಿ, ಜುಲೈ 23: ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ನೇತೃತ್ವದಲ್ಲಿ ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆ ಮುಂದುವರಿದಿದೆ. ಪೊಲೀಸ್ ಬಲಪ್ರಯೋಗ, ಬಂಧನಗಳು ಹಾಗೂ ಸರ್ಕಾರದ ಮನವಿಗಳ ನಡುವೆಯೂ ಯುವ ಸಮೂಹ ಧರಣಿಯನ್ನು ಮುಂದುವರಿಸಿದ್ದು, ಪ್ರತಿಭಟನೆಯ ವಿಭಿನ್ನ ಶೈಲಿಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿವೆ.
ಪ್ರತಿಭಟನೆಯ ವೇಳೆ ಪೊಲೀಸರು ಲಾಠಿಚಾರ್ಜ್ ನಡೆಸಿದರೂ ಹಾಗೂ ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದರೂ ಪ್ರತಿಭಟನಾಕಾರರು ಹಿಂತಿರುಗದೆ ವಿವಿಧ ರೀತಿಯ ಸಾಂಕೇತಿಕ ಪ್ರತಿಭಟನೆಗಳನ್ನು ನಡೆಸಿದರು. ವಿಶೇಷವಾಗಿ ಜೆನ್ ಝೀ ಪೀಳಿಗೆಯ ವಿದ್ಯಾರ್ಥಿಗಳು ವಿಭಿನ್ನ ರೀತಿಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿರುವ ದೃಶ್ಯಗಳು ವೈರಲ್ ಆಗಿವೆ.
ವೈರಲ್ ಆಗಿರುವ ವಿಡಿಯೊವೊಂದರಲ್ಲಿ ಲಖನೌ ಮೂಲದ ಯುವಕ ಜಿರಳೆ (ಕಾಕ್ರೋಚ್) ವೇಷ ಧರಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವುದು ಕಂಡುಬಂದಿದೆ. ಮಾಧ್ಯಮಗಳೊಂದಿಗೆ ಮಾತನಾಡಿದ ಆತ, ತಾನು ವೈದ್ಯಕೀಯ ವಿದ್ಯಾರ್ಥಿಯಾಗಿದ್ದು, ಕಾಕ್ರೋಚ್ ಜನತಾ ಪಕ್ಷದ ಬೆಂಬಲಕ್ಕಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾಗಿ ಹೇಳಿದ್ದಾನೆ.
ಮತ್ತೊಂದು ವಿಡಿಯೊದಲ್ಲಿ ಯುವಕನೊಬ್ಬ ರಸ್ತೆ ಮಧ್ಯೆಯೇ ಸೊಳ್ಳೆ ಪರದೆ ಹಾಕಿಕೊಂಡು ಅದರೊಳಗೆ ಕುಳಿತು ಮೊಬೈಲ್‌ನಲ್ಲಿ ಸಾಮಾಜಿಕ ಜಾಲತಾಣ ವೀಕ್ಷಿಸುತ್ತಿರುವ ದೃಶ್ಯ ಕಂಡುಬಂದಿದೆ. ಕೆಲ ವಿದ್ಯಾರ್ಥಿಗಳು ರಸ್ತೆ ಮಧ್ಯೆಯೇ ರೀಲ್ಸ್ ವಿಡಿಯೊಗಳನ್ನು ಚಿತ್ರೀಕರಿಸಿರುವ ದೃಶ್ಯಗಳೂ ಹರಿದಾಡುತ್ತಿವೆ.
ಇನ್ನೊಂದು ವೈರಲ್ ವಿಡಿಯೊದಲ್ಲಿ ಪೊಲೀಸರು ಪ್ರತಿಭಟನಾಕಾರರತ್ತ ಮುನ್ನಡೆಯುತ್ತಿದ್ದಂತೆ ವಿದ್ಯಾರ್ಥಿಗಳು ರಾಷ್ಟ್ರಗೀತೆಯನ್ನು ಹಾಡಲು ಆರಂಭಿಸಿರುವುದು ಕಂಡುಬಂದಿದೆ. ಈ ದೃಶ್ಯವನ್ನು ಉಲ್ಲೇಖಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಕೆಲವರು ವ್ಯಂಗ್ಯಾತ್ಮಕವಾಗಿ ಕಾಮೆಂಟ್‌ಗಳನ್ನೂ ಮಾಡಿದ್ದಾರೆ.
ಇದರ ಜೊತೆಗೆ, ಪೊಲೀಸರು ಅಳವಡಿಸಿದ್ದ ಬ್ಯಾರಿಕೇಡ್‌ಗಳ ಮೇಲೆ ಹತ್ತಿ ಆಟವಾಡುವುದು, ಬ್ಯಾರಿಕೇಡ್‌ಗಳನ್ನು ನೆಟ್‌ನಂತೆ ಬಳಸಿಕೊಂಡು ಶೆಟಲ್‌ಕಾಕ್ ಆಡುವುದು ಸೇರಿದಂತೆ ವಿವಿಧ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗುತ್ತಿವೆ.