ಬೆಳಗಾವಿ, ಅ. 9 (ಸಮದರ್ಶಿ ಸುದ್ದಿ): ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸುವ ಸಾಧ್ಯತೆ ವ್ಯಕ್ತವಾಗಿದ್ದು, ಈ ಸಂಬಂಧ ಜೈಲು ಅಧಿಕಾರಿಗಳಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.
ಪ್ರಜ್ವಲ್ ರೇವಣ್ಣ ಅವರ ಸ್ಥಳಾಂತರದ ಕುರಿತು ಹಿಂಡಲಗಾ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಿಗೆ ಅಧಿಕೃತ ಇ-ಮೇಲ್ ಮೂಲಕ ಮಾಹಿತಿ ರವಾನಿಸಲಾಗಿದೆ ಎನ್ನಲಾಗಿದೆ. ಸ್ಥಳಾಂತರ ಪ್ರಕ್ರಿಯೆಗೆ ಸಂಬಂಧಿಸಿದ ಅಗತ್ಯ ವ್ಯವಸ್ಥೆಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಹಿನ್ನೆಲೆಯಲ್ಲಿ ಹಿಂಡಲಗಾ ಕಾರಾಗೃಹದ ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ. ಸೂಕ್ತ ಪೊಲೀಸ್ ಬೆಂಗಾವಲು ಹಾಗೂ ಭದ್ರತಾ ವ್ಯವಸ್ಥೆಯೊಂದಿಗೆ ಪ್ರಜ್ವಲ್ ರೇವಣ್ಣ ಅವರನ್ನು ಬೆಳಗಾವಿಗೆ ಕರೆತರುವ ಸಾಧ್ಯತೆ ಕುರಿತು ಜೈಲು ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮೊಬೈಲ್ ಫೋನ್ ಪತ್ತೆಯಾದ ಪ್ರಕರಣದ ಬೆನ್ನಲ್ಲೇ ಪ್ರಜ್ವಲ್ ರೇವಣ್ಣ ಅವರ ಸ್ಥಳಾಂತರದ ವಿಚಾರ ಮುನ್ನೆಲೆಗೆ ಬಂದಿರುವುದು ಗಮನಾರ್ಹವಾಗಿದೆ. ಆದರೆ, ಈ ಪ್ರಕರಣಕ್ಕೂ ಅವರ ಸ್ಥಳಾಂತರದ ಪ್ರಸ್ತಾವಕ್ಕೂ ನೇರ ಸಂಬಂಧವಿದೆಯೇ ಎಂಬುದು ಸ್ಪಷ್ಟವಾಗಿಲ್ಲ.
ಪ್ರಜ್ವಲ್ ರೇವಣ್ಣ ಅವರನ್ನು ಹಿಂಡಲಗಾ ಜೈಲಿಗೆ ಸ್ಥಳಾಂತರಿಸುವ ಕುರಿತು ಅಧಿಕೃತ ಆದೇಶದ ವಿವರಗಳು ಇನ್ನೂ ಬಹಿರಂಗವಾಗಿಲ್ಲ. ಅವರನ್ನು ಯಾವ ದಿನ ಹಾಗೂ ಯಾವ ಸಮಯದಲ್ಲಿ ಬೆಳಗಾವಿಗೆ ಕರೆತರಲಾಗುತ್ತದೆ ಎಂಬುದರ ಬಗ್ಗೆಯೂ ಖಚಿತ ಮಾಹಿತಿ ಲಭ್ಯವಾಗಿಲ್ಲ.
ಸ್ಥಳಾಂತರದ ಕುರಿತು ಕಾರಾಗೃಹ ಇಲಾಖೆಯಿಂದ ಅಧಿಕೃತ ದೃಢೀಕರಣ ದೊರೆಯಬೇಕಿದ್ದು, ಮುಂದಿನ ಬೆಳವಣಿಗೆಗಳ ಬಗ್ಗೆ ನಿರೀಕ್ಷೆ ಮೂಡಿದೆ.