ಬೆಂಗಳೂರು, ನ. 25: ಹಾಸನ ಜಿಲ್ಲೆಯ ಕಾಡಾನೆಗಳನ್ನು ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಅಭಯಾರಣ್ಯಕ್ಕೆ ಸ್ಥಳಾಂತರಿಸುವ ‘ಆಪರೇಷನ್ ಗಜ’ ಕಾರ್ಯಾಚರಣೆ ಆಡಳಿತಾರೂಢ ಕಾಂಗ್ರೆಸ್ನಲ್ಲೇ ಸಂಘರ್ಷಕ್ಕೆ ಕಾರಣವಾಗಿದೆ.
ಕಾಡಾನೆಗಳ ಸ್ಥಳಾಂತರವನ್ನು ವಿರೋಧಿಸಿ ಕಾಂಗ್ರೆಸ್ ಶಾಸಕರಾದ ನಯನಾ ಮೋಟಮ್ಮ, ರಾಜೇಗೌಡ ಹಾಗೂ ತಮ್ಮಯ್ಯ ರಾಜೀನಾಮೆಗೆ ಮುಂದಾಗಿರುವ ಹಿನ್ನೆಲೆಯಲ್ಲಿ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅರಣ್ಯದಲ್ಲೇ ಹುಟ್ಟಿ ಬೆಳೆದವರು ಯಾರಾದರೂ ಇದ್ದರೆ ಅವರಿಗೆ ಅರಣ್ಯ ಖಾತೆ ನೀಡಲಿ. ನಾನು ಖಾತೆಗೆ ಅಂಟಿಕೊಂಡು ಕುಳಿತಿಲ್ಲ. ಅಗತ್ಯವಿದ್ದರೆ ಅರಣ್ಯ ಖಾತೆಯನ್ನೇ ಬಿಟ್ಟುಕೊಡುತ್ತೇನೆ ಎಂದು ಅವರು ಸ್ವಪಕ್ಷದ ಶಾಸಕರಿಗೆ ತಿರುಗೇಟು ನೀಡಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಣ್ಯ ಸಚಿವರಿಗೆ ಕಾಡಿನ ಬಗ್ಗೆ ಏನೂ ಗೊತ್ತಿಲ್ಲ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದ್ದಾರೆ. ನಮ್ಮ ಊರು ಆನೇಕಲ್. ಅಲ್ಲಿ ಬನ್ನೇರುಘಟ್ಟ ಅರಣ್ಯ ಪ್ರದೇಶವಿದೆ. ಅಲ್ಲಿರುವ ನಮ್ಮ ತೋಟಕ್ಕೂ ಕಾಡಾನೆಗಳು ಬರುತ್ತವೆ. ಅರಣ್ಯದಲ್ಲೇ ಹುಟ್ಟಿ ಬೆಳೆದವರು ಸಚಿವರಾಗುವುದಾದರೆ ನನ್ನ ಅಭ್ಯಂತರವಿಲ್ಲ ಎಂದರು.
ಅರಣ್ಯ ಸಚಿವನಾಗಿ ಜನರಿಗೆ ತೊಂದರೆಯಾಗದಂತೆ ಕ್ರಮ ಕೈಗೊಂಡಿದ್ದೇನೆ. ವನ್ಯಜೀವಿಗಳ ದಾಳಿಯಿಂದ ಸಂಭವಿಸುತ್ತಿರುವ ಸಾವು-ನೋವುಗಳನ್ನು ಕಡಿಮೆ ಮಾಡುವುದೇ ನಮ್ಮ ಗುರಿಯಾಗಿದೆ ಎಂದು ಸಮರ್ಥಿಸಿಕೊಂಡರು.
1978ರಲ್ಲಿ ರಾಜ್ಯದಲ್ಲಿ 1,950 ಆನೆಗಳಿದ್ದವು. ಈಗ ಅವುಗಳ ಸಂಖ್ಯೆ 6,500ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ 653 ಹುಲಿಗಳಿವೆ. ಚಿರತೆ, ಕರಡಿಗಳ ದಾಳಿಯೂ ನಡೆಯುತ್ತಿದ್ದು, ಕಾಡಾನೆಗಳ ದಾಳಿಯಿಂದ ಸಂಭವಿಸುತ್ತಿರುವ ಸಾವಿನ ಸಂಖ್ಯೆ ಹೆಚ್ಚಾಗಿದೆ ಎಂದು ತಿಳಿಸಿದರು.
ಬೇಲೂರಿನಲ್ಲಿ ಕಾಡಾನೆಗಳ ದಾಳಿಯಿಂದ ಇಬ್ಬರು ಮೃತಪಟ್ಟಿದ್ದಾರೆ. ಅಲ್ಲಿ ಕೇವಲ 13,000 ಎಕರೆ ಅರಣ್ಯವಿದ್ದು, ಅದೂ ಒಂದೇ ಕಡೆ ಇಲ್ಲದೆ 9 ಭಾಗಗಳಲ್ಲಿ ಹಂಚಿಹೋಗಿದೆ. ಹೀಗಾಗಿ ಆನೆಗಳು ವಿವಿಧ ಪ್ರದೇಶಗಳಲ್ಲಿ ಸಂಚರಿಸುತ್ತಿವೆ ಎಂದು ರಾಮಲಿಂಗಾರೆಡ್ಡಿ ವಿವರಿ