ಲಖನೌ, ನ. 25: ಉತ್ತರ ಪ್ರದೇಶದ 2027ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ನಡುವೆ ಸೀಟು ಹಂಚಿಕೆ ಮಾತುಕತೆ ನಡೆಯುತ್ತಿರುವಾಗಲೇ, ಸಮಾಜವಾದಿ ಪಕ್ಷವು 5 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸುವ ಮೂಲಕ ಮೈತ್ರಿ ಪಕ್ಷದ ಮೇಲೆ ಒತ್ತಡ ಹೆಚ್ಚಿಸಿದೆ.
ಮಂಗಳವಾರ ರಾತ್ರಿ ಸಮಾಜವಾದಿ ಪಕ್ಷ ಬಿಡುಗಡೆ ಮಾಡಿರುವ ಮೊದಲ ಪಟ್ಟಿಯಲ್ಲಿ ನಾಲ್ವರು ಹಾಲಿ ಶಾಸಕರಿಗೆ ಮತ್ತೆ ಅವಕಾಶ ಕಲ್ಪಿಸಲಾಗಿದೆ. ಬೆಹತ್‌ನಿಂದ ಉಮರ್ ಅಲಿ ಖಾನ್, ಸಹರಾನ್‌ಪುರದಿಂದ ಆಶು ಮಲಿಕ್, ಕೈರಾನಾದಿಂದ ನಾಹಿದ್ ಹಸನ್ ಹಾಗೂ ಅಮ್ರೋಹಾದಿಂದ ಮೆಹಬೂಬ್ ಅಲಿ ಅವರನ್ನು ಕಣಕ್ಕಿಳಿಸಲಾಗಿದೆ. ಲಲಿತ್‌ಪುರ ಕ್ಷೇತ್ರದಲ್ಲಿ ಹೊಸ ಮುಖ ಜ್ಯೋತಿ ಲೋಧಿ ಅವರಿಗೆ ಟಿಕೆಟ್ ನೀಡಲಾಗಿದೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ ಯಾದವ್ ಅವರು ಈ ಹಿಂದೆಯೇ ಅಯೋಧ್ಯೆಯಿಂದ ಪವನ್ ಪಾಂಡೆ ಹಾಗೂ ಚಿಲ್ಲುಪರ್‌ನಿಂದ ವಿನಯ್ ಶಂಕರ ತಿವಾರಿ ಅವರ ಉಮೇದುವಾರಿಕೆಯನ್ನು ಘೋಷಿಸಿದ್ದರು. ಇದರೊಂದಿಗೆ ಸಮಾಜವಾದಿ ಪಕ್ಷದಿಂದ ಕಣಕ್ಕಿಳಿಯಲಿರುವ 7 ಅಭ್ಯರ್ಥಿಗಳ ಹೆಸರು ಬಹಿರಂಗಗೊಂಡಂತಾಗಿದೆ.
ಸೀಟು ಹಂಚಿಕೆ ಕುರಿತು ಅಂತಿಮ ಒಪ್ಪಂದಕ್ಕೆ ಬರುವ ಮೊದಲೇ ಅಭ್ಯರ್ಥಿಗಳನ್ನು ಘೋಷಿಸಿರುವುದು ಕಾಂಗ್ರೆಸ್‌ನೊಂದಿಗಿನ ಚೌಕಾಸಿಯಲ್ಲಿ ತನ್ನ ನಿಲುವನ್ನು ಗಟ್ಟಿಗೊಳಿಸುವ ಸಮಾಜವಾದಿ ಪಕ್ಷದ ತಂತ್ರವೆಂದು ವಿಶ್ಲೇಷಿಸಲಾಗುತ್ತಿದೆ. ಹಾಲಿ ಶಾಸಕರಿರುವ ಕ್ಷೇತ್ರಗಳನ್ನು ಬಿಟ್ಟುಕೊಡಲು ಪಕ್ಷ ಸಿದ್ಧವಿಲ್ಲ ಎಂಬ ಸಂದೇಶವನ್ನೂ ಈ ಮೂಲಕ ರವಾನಿಸಲಾಗಿದೆ.
ಸಹರಾನ್‌ಪುರ ಕ್ಷೇತ್ರಗಳಿಗಾಗಿ ಪೈಪೋಟಿ
ಸಮಾಜವಾದಿ ಪಕ್ಷ ಅಭ್ಯರ್ಥಿಗಳನ್ನು ಘೋಷಿಸಿರುವ ಬೆಹತ್ ಮತ್ತು ಸಹರಾನ್‌ಪುರ ಕ್ಷೇತ್ರಗಳ ಮೇಲೆ ಕಾಂಗ್ರೆಸ್ ಕೂಡ ಹಕ್ಕು ಮಂಡಿಸಿದೆ. ಮೈತ್ರಿ ಏನೇ ಇರಲಿ, ಸಹರಾನ್‌ಪುರ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ ಸ್ಪರ್ಧಿಸಲಿದ್ದಾರೆ ಎಂದು ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಈ ಹಿಂದೆ ಹೇಳಿದ್ದರು.
ಈ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷದ ನಿರ್ಧಾರ ಉಭಯ ಪಕ್ಷಗಳ ನಡುವಿನ ಸೀಟು ಹಂಚಿಕೆ ಮಾತುಕತೆಯನ್ನು ಮತ್ತಷ್ಟು ಸಂಕೀರ್ಣಗೊಳಿಸುವ ಸಾಧ್ಯತೆ ಇದೆ.
ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅಖಿಲೇಶ ಯಾದವ್, ಇಂಡಿಯಾ ಮೈತ್ರಿಕೂಟದ ಒಗ್ಗಟ್ಟನ್ನು ಕಾಪಾಡಿಕೊಂಡು ಬಿಜೆಪಿಯನ್ನು ಸೋಲಿಸುವುದೇ ನಮ್ಮ ಉದ್ದೇಶವಾಗಬೇಕು. ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ ಮೈತ್ರಿ ಮಾಡಿಕೊಳ್ಳಲಾಗುತ್ತದೆ. ಇದಕ್ಕಾಗಿ ರಾಜಕೀಯ ಪಕ್ಷಗಳು ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಮುನ್ನಡೆಯಬೇಕು. ಕ್ಷೇತ್ರಗಳ ಹಂಚಿಕೆಗಿಂತ ಗೆಲುವಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದ್ದಾರೆ.
ಗೆಲ್ಲುವ ಸಾಧ್ಯತೆ ಇರುವ ಅಭ್ಯರ್ಥಿಗಳನ್ನು ಗುರುತಿಸಿ ಒಮ್ಮತದಿಂದ ಕಣಕ್ಕಿಳಿಸುವುದು ಎರಡೂ ಪಕ್ಷಗಳ ಜವಾಬ್ದಾರಿಯಾಗಿದೆ ಎಂಬ ಸಂದೇಶವನ್ನೂ ಅಖಿಲೇಶ ಕಾಂಗ್ರೆಸ್‌ಗೆ ನೀಡಿದ್ದಾರೆ.
ಮೈತ್ರಿ ಮುಂದುವರಿಸುವ ಇಂಗಿತವನ್ನು ಉಭಯ ಪಕ್ಷಗಳು ವ್ಯಕ್ತಪಡಿಸಿದ್ದರೂ, ಸೀಟು ಹಂಚಿಕೆ ಕುರಿತ ಭಿನ್ನಾಭಿಪ್ರಾಯಗಳು ಇನ್ನೂ ಬಗೆಹರಿದಿಲ್ಲ.