LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News

ದೇಶದಲ್ಲಿ ಪ್ರಶ್ನೆಗಳು ಉದ್ಭವಿಸಿದಾಗ ಪ್ರಧಾನಿ ಮೋದಿ ವಿದೇಶಕ್ಕೆ ಹೋಗುತ್ತಾರೆ: ಪ್ರಿಯಾಂಕ್ ಖರ್ಗೆ

ಬೆಂಗಳೂರು: ಸಾರ್ವಜನಿಕರ ಎದುರು ಉತ್ತರಿಸಬೇಕಾದ ಪ್ರಮುಖ ಪ್ರಶ್ನೆಗಳು ಉದ್ಭವಿಸಿದಾಗಲೆಲ್ಲ ಪ್ರಧಾನಮಂತ್ರಿಯವರು ವಿದೇಶ ಪ್ರವಾಸ ಕೈಗೊಳ್ಳುತ್ತಾರೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದರು.

ಬುಧವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದ ದೇಣಿಗೆ ದುರ್ಬಳಕೆಯ ಆರೋಪಗಳ ಕುರಿತು ಕಾಂಗ್ರೆಸ್ ಪಕ್ಷವನ್ನು ಪ್ರಶ್ನಿಸುವ ಬದಲು, ಆ ವಿಚಾರದಲ್ಲಿ ಶ್ರೇಯಸ್ಸು ಪಡೆದಿರುವ ಬಿಜೆಪಿ, ಆರ್‌ಎಸ್‌ಎಸ್‌, ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಹಾಗೂ ಸಂಬಂಧಿತ ಟ್ರಸ್ಟ್‌ನವರು ಸಾರ್ವಜನಿಕರಿಗೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.

ರಾಮಮಂದಿರ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನಿಂದ ಹಿಡಿದು ಶಿಲಾನ್ಯಾಸ, ಧ್ವಜಾರೋಹಣ, ಪ್ರಾಣ ಪ್ರತಿಷ್ಠೆ ಹಾಗೂ ಉದ್ಘಾಟನೆವರೆಗೆ ಎಲ್ಲದರ ಶ್ರೇಯಸ್ಸನ್ನೂ ಬಿಜೆಪಿಯವರೇ ಪಡೆದುಕೊಂಡಿದ್ದಾರೆ. ಹೀಗಿರುವಾಗ ಆರೋಪಿತ ದೇಣಿಗೆ ದುರ್ಬಳಕೆಯ ಹೊಣೆಯನ್ನೂ ಅವರೇ ಹೊರಬೇಕು. ಈ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಏಕೆ ಉತ್ತರ ನೀಡಬೇಕು ಎಂದು ಪ್ರಶ್ನಿಸಿದರು.

ಆರ್‌ಎಸ್‌ಎಸ್‌, ವಿಎಚ್‌ಪಿ ಹಾಗೂ ಟ್ರಸ್ಟ್‌ಗೆ ಸಂಬಂಧಿಸಿದವರ ವಿರುದ್ಧ ದೇಣಿಗೆ ದುರ್ಬಳಕೆಯ ಆರೋಪಗಳು ಕೇಳಿಬಂದಿವೆ. ಈ ಹಣ ಎಲ್ಲಿಗೆ ಹೋಗಿದೆ ಎಂಬುದನ್ನು ಸಾರ್ವಜನಿಕರ ಮುಂದೆ ಸ್ಪಷ್ಟಪಡಿಸಬೇಕು. ಟ್ರಸ್ಟ್‌ನ ಕೆಲವರು ರಾಜೀನಾಮೆ ನೀಡಿರುವ ಬಗ್ಗೆ ವರದಿಗಳು ಬಂದಿವೆ. ರಾಜೀನಾಮೆ ನೀಡಿದ್ದರೆ ಅದರ ಕಾರಣವೇನು ಎಂಬುದನ್ನು ಸಂಬಂಧಪಟ್ಟವರೇ ವಿವರಿಸಬೇಕು ಎಂದು ಒತ್ತಾಯಿಸಿದರು.

ಬಿಜೆಪಿಯವರಿಗೆ 'ನೇಷನ್ ಫಸ್ಟ್' ಅಲ್ಲ, 'ಡೊನೇಷನ್ ಫಸ್ಟ್' ಎಂಬ ಮನೋಭಾವವಿದೆ ಎಂದು ಟೀಕಿಸಿದ ಅವರು, ಭಕ್ತರು ನೀಡಿರುವ ದೇಣಿಗೆಯ ಬಳಕೆಯ ಬಗ್ಗೆ ಸಂಪೂರ್ಣ ಪಾರದರ್ಶಕತೆ ಇರಬೇಕು ಎಂದು ಹೇಳಿದರು.

ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯ ಸರ್ಕಾರ ತನ್ನ ಸಲಹೆಗಳನ್ನು ಪ್ರಾದೇಶಿಕ ಆಯುಕ್ತರ ಮೂಲಕ ಚುನಾವಣಾ ಆಯೋಗಕ್ಕೆ ಅಧಿಕೃತವಾಗಿ ಸಲ್ಲಿಸಿದ್ದರೂ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ಅಥವಾ ಜೆಡಿಎಸ್‌ ಯಾವುದೇ ವಿಷಯವನ್ನು ಪ್ರಸ್ತಾಪಿಸಿದರೆ ಚುನಾವಣಾ ಆಯೋಗ ತಕ್ಷಣ ಸ್ಪಂದಿಸುತ್ತದೆ. ಆದರೆ ರಾಜ್ಯ ಸರ್ಕಾರ ಸಲ್ಲಿಸಿರುವ ಸಲಹೆಗಳ ವಿಷಯದಲ್ಲಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ಚುನಾವಣಾ ಆಯೋಗವು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ಅನುಮಾನ ಮೂಡುತ್ತಿದೆ. ಮುಂದಿನ ದಿನಗಳಲ್ಲಿ ಅವರು ಏನು ಮಾಡುತ್ತಾರೆ ಎಂಬುದನ್ನು ಕಾದು ನೋಡೋಣ ಎಂದು ಹೇಳಿದರು.

ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ ಆರಂಭವಾದಾಗ ಬಿಜೆಪಿ ಅಲ್ಲಿನ ಬೂತ್ ಮಟ್ಟದ ಅಧಿಕಾರಿಗಳು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಪ್ರಭಾವದಲ್ಲಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿತ್ತು. ಬಳಿಕ 'ಲಾಜಿಕಲ್ ಡಿಸ್ಕ್ರೆಪೆನ್ಸಿ' ಎಂಬ ನಿಯಮದ ಆಧಾರದ ಮೇಲೆ ಅನೇಕ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಯಿತು. ಇದೇ ಬಿಜೆಪಿಯ ನಿಗದಿತ ಕಾರ್ಯವಿಧಾನವಾಗಿದ್ದು, ಒಬ್ಬರು ಒಂದು ಪಾತ್ರ, ಮತ್ತೊಬ್ಬರು ಮತ್ತೊಂದು ಪಾತ್ರ ನಿರ್ವಹಿಸುವ ಮೂಲಕ ಈ ಪ್ರಕ್ರಿಯೆ ನಡೆಯುತ್ತಿದೆ ಎಂದು ಆರೋಪಿಸಿದರು.

ರಾಮಮಂದಿರವು ಬಿಜೆಪಿ ಹಾಗೂ ಆರ್‌ಎಸ್‌ಎಸ್‌ಗೆ ಎಂದಿಗೂ ಭಕ್ತಿಯ ಸಂಕೇತವಾಗಿರಲಿಲ್ಲ. ಅದು ಅಧಿಕಾರ ಮತ್ತು ಹಣ ಗಳಿಸುವ ಸಾಧನವಾಗಿತ್ತು ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದರು.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಾಡುಹಂದಿಗಳ ದಾಳಿಗೆ ಕಬ್ಬು ಬೆಳೆ ನಾಶಗದ್ದಲದ ನಡುವೆಯೇ ಮುಕ್ತಾಯ ಕಂಡ ಸಂಸತ್ ಅಧಿವೇಶನ: ಚರ್ಚೆಯಿಲ್ಲದೆ 11 ಮಸೂದೆಗಳ ಅಂಗೀಕಾರ300 ಅಡಿ ಕುಸಿದ ವಿಮಾನ, ಪೈಲಟ್ ಗಾಂಜಾ ಸೇವನೆ ಪತ್ತೆ!ಮಾನವ ಹಕ್ಕುಗಳ ಪಾಠ ನಿಲ್ಲಿಸಿ; ಫ್ರಾನ್ಸ್ ವಿರುದ್ಧ ಇರಾನ್ ಕಿಡಿ25 ಬಿಜೆಪಿ ನಾಯಕರು, ಹಿಂದುತ್ವ ಕಾರ್ಯಕರ್ತರ ವಿರುದ್ಧದ ಪ್ರಕರಣ ಹಿಂಪಡೆಯಲು ನ್ಯಾಯಾಲಯದ ಅನುಮತಿ!ದೇಶಕ್ಕೇ ಮಾದರಿಯಾಗುವಂತೆ ಗಣೇಶೋತ್ಸವ ಆಚರಿಸೋಣಪರಪ್ಪನ ಅಗ್ರಹಾರದಲ್ಲಿ ಪ್ರಜ್ವಲ್‌ ರೇವಣ್ಣ ಬಳಿ ಮೊಬೈಲ್‌, ಪೆನ್‌ಡ್ರೈವನಲ್ಲಿ ಅಶ್ಲೀಲ ವಿಡಿಯೋ ಪತ್ತೆ ; ವಿಐಪಿ ಸೆಲ್‌ನಿಂದ ಸಾಮಾನ್ಯ ಬ್ಯಾರಕ್‌ಗೆ ಸ್ಥಳಾಂತರಲಡಾಖ್‌ನ ಲೇಹ್‌ನಲ್ಲಿ 5.5 ತೀವ್ರತೆಯ ಭೂಕಂಪದೇಶಭಕ್ತಿಯ ಸರ್ಟಿಫಿಕೇಟ್ ನೀಡುವ ಮುನ್ನ ಆರ್‌ಎಸ್‌ಎಸ್‌ ತ್ರಿವರ್ಣ ಧ್ವಜದ ಇತಿಹಾಸ ಹೇಳಲಿ: ಪ್ರಿಯಾಂಕ್ ಖರ್ಗೆಖರ್ಗೆ ರ‍್ಯಾಲಿ ನಡೆದ ಸ್ಥಳದಲ್ಲಿ ‘ಶುದ್ಧೀಕರಣ’ ಹವನ; ಬಿಜೆಪಿ–ಕಾಂಗ್ರೆಸ್ ನಡುವೆ ವಾಕ್ಸಮರ