ಆಗ್ರಾ, ಸೆ. 30 : ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ ಕುಮಾರ ಅವರ ಆಗ್ರಾದಲ್ಲಿರುವ ಪೈತೃಕ ನಿವಾಸದ ಎದುರು ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಆರು ಕಾಂಗ್ರೆಸ್ ಮುಖಂಡರನ್ನು ಪೊಲೀಸರು ಬಂಧಿಸಿದ್ದು, ಸುಮಾರು 20 ಕಾರ್ಯಕರ್ತರ ವಿರುದ್ಧ ಕೊಲೆ ಯತ್ನ, ಗಲಭೆ, ಅಕ್ರಮ ಪ್ರವೇಶ ಸೇರಿದಂತೆ ವಿವಿಧ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ.
ಆಗ್ರಾದ ವಿಜಯನಗರ ಪ್ರದೇಶದಲ್ಲಿರುವ ಗ್ಯಾನೇಶ ಕುಮಾರ ಅವರ ಪೋಷಕರು ವಾಸಿಸುವ ಮನೆಯ ಎದುರು ಸೋಮವಾರ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಎಸ್‌ಐಆರ್ ಹಾಗೂ ಮತದಾರರ ಪಟ್ಟಿಯ ಪರಿಷ್ಕರಣೆ ವಿಚಾರದಲ್ಲಿ ಚುನಾವಣಾ ಆಯೋಗದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ ಭಾಗವಾಗಿ ಈ ಪ್ರದರ್ಶನ ನಡೆದಿತ್ತು.
ಪ್ರತಿಭಟನೆ ವೇಳೆ ಮನೆಯ ಮುಖ್ಯ ಗೇಟ್ ಮತ್ತು ಗೋಡೆಯ ಮೇಲೆ ಕಪ್ಪು ಬಣ್ಣದಲ್ಲಿ ‘ಗದ್ದಾರ್ ಗ್ಯಾನೇಶ’ ಸೇರಿದಂತೆ ಘೋಷಣೆಗಳನ್ನು ಬರೆಯಲಾಗಿದೆ ಎಂದು ಪೊಲೀಸರು ಆರೋಪಿಸಿದ್ದಾರೆ. ಪ್ರತಿಭಟನಾಕಾರರು ಮನೆಯೊಳಗೆ ನುಗ್ಗಲು ಯತ್ನಿಸಿದ್ದು, ಅವರನ್ನು ತಡೆಯಲು ಮುಂದಾದ ಭದ್ರತಾ ಸಿಬ್ಬಂದಿಯೊಂದಿಗೆ ಘರ್ಷಣೆ ನಡೆದಿದೆ ಎಂದೂ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಗುಂಪನ್ನು ತಡೆಯಲು ಮುಂದಾದ ಹೋಮ್‌ಗಾರ್ಡ್ ದಿನೇಶ ಕುಮಾರ ಅವರ ಮೇಲೆ ಹಲ್ಲೆ ನಡೆಸಲಾಗಿದ್ದು, ಅವರು ಗಾಯಗೊಂಡು ಪ್ರಜ್ಞೆ ತಪ್ಪಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ. ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯ ಕಾರ್ಯಕ್ಕೆ ಅಡ್ಡಿಪಡಿಸಿ ಸ್ಥಳದಲ್ಲಿ ಗಲಭೆ ಸೃಷ್ಟಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೊಲೆ ಯತ್ನ ಸೇರಿದಂತೆ ಹಲವು ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ.
ಹರಿಪರ್ವತ ಪೊಲೀಸ್ ಠಾಣೆಯಲ್ಲಿ ಸಬ್‌ಇನ್ಸ್‌ಪೆಕ್ಟರ್ ಗೌರವ ಗುಪ್ತಾ ನೀಡಿದ ದೂರಿನ ಆಧಾರದಲ್ಲಿ ಎಫ್‌ಐಆರ್ ದಾಖಲಾಗಿದೆ. ಎಂಟು ಮಂದಿಯನ್ನು ಹೆಸರಿಸಲಾಗಿದ್ದು, ಇನ್ನೂ 15ರಿಂದ 20 ಗುರುತಿಸಲಾಗದ ಕಾಂಗ್ರೆಸ್ ಕಾರ್ಯಕರ್ತರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ.
ಕಾಂಗ್ರೆಸ್ ಮುಖಂಡರಾದ ಅನಿಲ್ ಯಾದವ್, ಮುಖೇಶ ಧಂಗರ್, ಮನೋಜ ಗೌರ್, ರಾಜೇಶ ಕುಮಾರ, ರಾಜಾ ಗೌತಮ್ ಮತ್ತು ಪಂಕಜ ಚೌಧರಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅ.3ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ವರದಿಯಾಗಿದೆ.
ಪ್ರಕರಣದಲ್ಲಿ ಭಾರತೀಯ ನ್ಯಾಯ ಸಂಹಿತೆಯ ಕೊಲೆ ಯತ್ನಕ್ಕೆ ಸಂಬಂಧಿಸಿದ ಕಲಂ 109(2), ಸಾರ್ವಜನಿಕ ಸೇವಕನನ್ನು ಕರ್ತವ್ಯದಿಂದ ತಡೆಯಲು ಗಾಯಗೊಳಿಸಿದ ಆರೋಪದ ಕಲಂ 121(2), ತಪ್ಪು ಸಂಯಮದ ಕಲಂ 126(2), ಸಾರ್ವಜನಿಕ ಸೇವಕನ ಮೇಲೆ ಹಲ್ಲೆ ಅಥವಾ ಬಲಪ್ರಯೋಗಕ್ಕೆ ಸಂಬಂಧಿಸಿದ ಕಲಂ 132, ಗಲಭೆಗೆ ಸಂಬಂಧಿಸಿದ ಕಲಂ 191(1), ಅಕ್ರಮವಾಗಿ ಮನೆ ಪ್ರವೇಶಿಸಿದ ಆರೋಪದ ಕಲಂ 333, ಕ್ರಿಮಿನಲ್ ಬೆದರಿಕೆಯ ಕಲಂ 351(2) ಹಾಗೂ ಶಾಂತಿ ಭಂಗಕ್ಕೆ ಪ್ರಚೋದಿಸುವ ಉದ್ದೇಶದ ಅವಮಾನಕ್ಕೆ ಸಂಬಂಧಿಸಿದ ಕಲಂ 352 ಸೇರಿದಂತೆ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ.
ಪೊಲೀಸರ ಕ್ರಮಕ್ಕೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಆಗ್ರಾ ನಗರ ಕಾಂಗ್ರೆಸ್ ಅಧ್ಯಕ್ಷ ಅಮಿತ್ ಸಿಂಗ್, ಪ್ರತಿಭಟನೆಗೆ ಸಂಬಂಧಿಸಿದಂತೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಕ್ಕೆ ಪಕ್ಷದ ವಿರೋಧವಿಲ್ಲ. ಆದರೆ ಕೊಲೆ ಯತ್ನದಂತಹ ಗಂಭೀರ ಆರೋಪಗಳನ್ನು ಸೇರಿಸಿರುವುದು ಅತಿರೇಕ ಎಂದು ಹೇಳಿದ್ದಾರೆ.
ಕಾರ್ಯಕರ್ತರ ವಿರುದ್ಧ ‘ಸುಳ್ಳು ಪ್ರಕರಣ’ ದಾಖಲಿಸಲಾಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ಗಂಭೀರ ಆರೋಪಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಪೊಲೀಸ್ ಆಯುಕ್ತರನ್ನು ಭೇಟಿ ಮಾಡುವುದಾಗಿ ತಿಳಿಸಿದೆ.
ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಇತರರನ್ನು ಗುರುತಿಸಲು ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದು, ತನಿಖೆ ಮುಂದುವರಿದಿದೆ. ಪ್ರಕರಣದಲ್ಲಿ ದಾಖಲಿಸಲಾದ ಆರೋಪಗಳು ತನಿಖೆ ಮತ್ತು ನ್ಯಾಯಾಂಗ ಪರಿಶೀಲನೆಗೆ ಒಳಪಟ್ಟಿವೆ.