ಬೆಳಗಾವಿ, ಸೆ 3 : (ಸಮದರ್ಶಿ ಸುದ್ದಿ) - ಹಿಂಡಲಗಾ ಜೈಲಿನಲ್ಲಿದ್ದ ವಿಚಾರಣಾಧೀನ ಕೈದಿಯೊಂದಿಗೆ ಅಕ್ರಮ ಸಂಪರ್ಕ ಹೊಂದಿದ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯ ಮಹಿಳಾ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಜಯಶ್ರೀ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಆಂತರಿಕ ಭದ್ರತಾ ವಿಭಾಗದ ಐಜಿಪಿ ಕೆ. ತ್ಯಾಗರಾಜನ್ ಅವರು ಅಮಾನತು ಆದೇಶ ಹೊರಡಿಸಿದ್ದಾರೆ.

ತುಮಕೂರಿನ ಕುಣಿಗಲ್ ಮೂಲದ ಸಾಯಿಕುಮಾರ್ ಅಲಿಯಾಸ್ ಸುರೇಶ್ ಎಂಬಾತ ಹಿಂಡಲಗಾ ಜೈಲಿನಲ್ಲಿದ್ದ ವಿಚಾರಣಾಧೀನ ಕೈದಿ ಹಾಗೂ ರೌಡಿಶೀಟರ್ ಎಂದು ತಿಳಿದುಬಂದಿದೆ. ಆತನೊಂದಿಗೆ ಜಯಶ್ರೀ ಅವರು ವೀಡಿಯೊ ಕರೆ ಹಾಗೂ ಅಕ್ರಮ ಸಂಪರ್ಕ ಹೊಂದಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿತ್ತು.
ಜೈಲಿನಲ್ಲಿದ್ದ ಕೈದಿಗೆ ಮೊಬೈಲ್ ಒದಗಿಸಿ, ಆತನೊಂದಿಗೆ ವೀಡಿಯೊ ಕರೆ ಮೂಲಕ ಅಶ್ಲೀಲವಾಗಿ ವರ್ತಿಸಿರುವ ದೃಶ್ಯಗಳು ಹಾಗೂ ಧ್ವನಿ ತುಣುಕುಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದವು. ಇದರಿಂದ ಪ್ರಕರಣ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು.
ಕೈದಿಯ ಬ್ಯಾಂಕ್ ಖಾತೆ ಹಾಗೂ ಆತನ ತಾಯಿಯ ಮೂಲಕ ಹಂತ ಹಂತವಾಗಿ ಹಣ ವರ್ಗಾವಣೆ ಮಾಡಿಸಿಕೊಂಡಿರುವುದು ಮತ್ತು ಕೈದಿಗೆ ಸೇರಿದ ಸ್ಕೂಟರ್ ಹಾಗೂ ಸ್ವಿಫ್ಟ್ ಕಾರನ್ನು ತಮ್ಮ ಹೆಸರಿಗೆ ಮಾಡಿಸಿಕೊಂಡಿರುವುದಕ್ಕೆ ಸಂಬಂಧಿಸಿದ ಸಂಭಾಷಣೆಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.
ವೀಡಿಯೊಗಳು ವೈರಲ್ ಆದ ಬೆನ್ನಲ್ಲೇ, ಕೈದಿ ಸಾಯಿಕುಮಾರ್‌ನನ್ನು ಎನ್‌ಕೌಂಟರ್ ಮಾಡಿಸುವ ಕುರಿತು ಜಯಶ್ರೀ ಅವರು ನಡೆಸಿದ್ದಾರೆ ಎನ್ನಲಾದ ಧ್ವನಿ ಸಂಭಾಷಣೆಯೂ ಬಹಿರಂಗಗೊಂಡಿತ್ತು.
ಕರ್ತವ್ಯ ಲೋಪ, ಅಶಿಸ್ತು ಆರೋಪ
ಪ್ರಕರಣದ ಕುರಿತು ಇಲಾಖೆಯಿಂದ ಆಂತರಿಕ ತನಿಖೆ ನಡೆಸಲಾಗಿದೆ. ಮೇಲ್ನೋಟಕ್ಕೆ ಕರ್ತವ್ಯ ಲೋಪ, ಅಶಿಸ್ತು ಹಾಗೂ ಅಧಿಕಾರ ದುರುಪಯೋಗದ ಆರೋಪಗಳು ಕಂಡುಬಂದ ಹಿನ್ನೆಲೆಯಲ್ಲಿ ಜಯಶ್ರೀ ವಿರುದ್ಧ ಅಮಾನತು ಕ್ರಮ ಕೈಗೊಳ್ಳಲಾಗಿದೆ ಎಂದು ಇಲಾಖಾ ಮೂಲಗಳು ತಿಳಿಸಿವೆ.