ಹೊಸದಿಲ್ಲಿ, ಸೆ 12 : (ಸಮದರ್ಶಿ ಸುದ್ದಿ) - ಜಾಗತಿಕ ದಕ್ಷಿಣದ ರಾಷ್ಟ್ರಗಳು ಕೇವಲ ಅಂತರರಾಷ್ಟ್ರೀಯ ನಿಯಮಗಳನ್ನು ಪಾಲಿಸುವ ರಾಷ್ಟ್ರಗಳಾಗಿ ಉಳಿಯದೆ, ನಿಯಮಗಳನ್ನು ರೂಪಿಸುವ ಶಕ್ತಿಯಾಗಿ ಹೊರಹೊಮ್ಮಬೇಕು. ಈ ಬದಲಾವಣೆಗೆ ನೇತೃತ್ವ ನೀಡಲು ಭಾರತ ಸಿದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಹೊಸದಿಲ್ಲಿಯಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯ ಉದ್ಘಾಟನಾ ಅಧಿವೇಶನದಲ್ಲಿ ಮಾತನಾಡಿದ ಅವರು, ಪ್ರಸ್ತುತ ಜಾಗತಿಕ ಆಡಳಿತ ವ್ಯವಸ್ಥೆಯಲ್ಲಿ ಅಧಿಕಾರ ಹಾಗೂ ನಿರ್ಧಾರ ಕೈಗೊಳ್ಳುವ ಶಕ್ತಿ ಕೆಲವೇ ಪ್ರಬಲ ರಾಷ್ಟ್ರಗಳು ಮತ್ತು ಸಂಸ್ಥೆಗಳ ಬಳಿ ಕೇಂದ್ರೀಕೃತವಾಗಿದೆ ಎಂದು ಹೇಳಿದರು. ನಿರ್ಧಾರಗಳಿಂದ ಹೆಚ್ಚು ಪರಿಣಾಮ ಎದುರಿಸುವ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ನಿರ್ಧಾರ ಪ್ರಕ್ರಿಯೆಯಲ್ಲಿ ಸೂಕ್ತ ಪ್ರಾತಿನಿಧ್ಯ ಸಿಗುತ್ತಿಲ್ಲ ಎಂದು ಅಭಿಪ್ರಾಯಪಟ್ಟರು.
ಜಾಗತಿಕ ಆಡಳಿತದ ಈ ಅಸಮಾನ ವ್ಯವಸ್ಥೆಯನ್ನು ಬದಲಿಸಿ ಎಲ್ಲ ರಾಷ್ಟ್ರಗಳಿಗೂ ಸಮಾನ ಅವಕಾಶ ಕಲ್ಪಿಸುವ ಸಹಭಾಗಿತ್ವದ ವ್ಯವಸ್ಥೆ ರೂಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ಬ್ರಿಕ್ಸ್ ಮಹತ್ವದ ಪಾತ್ರ ವಹಿಸಬೇಕು ಎಂದು ಮೋದಿ ಕರೆ ನೀಡಿದರು.
ಜಾಗತಿಕ ದಕ್ಷಿಣದ ಯುವ ರಾಜತಾಂತ್ರಿಕರು ಹಾಗೂ ನೀತಿ ನಿರೂಪಕರಿಗೆ ಮಾತುಕತೆ ಕೌಶಲ, ಪ್ರಾಯೋಗಿಕ ತರಬೇತಿ ಮತ್ತು ಕಾನೂನು ವಿಷಯಗಳಲ್ಲಿ ಪರಿಣತಿ ನೀಡಲು ಬ್ರಿಕ್ಸ್ ವೇದಿಕೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು ಎಂದು ಅವರು ಸಲಹೆ ನೀಡಿದರು.
ಭಾರತದ ಬ್ರಿಕ್ಸ್ ಅಧ್ಯಕ್ಷತೆಯು ಜನಕೇಂದ್ರಿತ ಮತ್ತು ಮಾನವೀಯತೆಗೆ ಮೊದಲ ಆದ್ಯತೆ ನೀಡುವ ಆಶಯವನ್ನು ಹೊಂದಿದೆ. ಚೇತರಿಕೆ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆಯನ್ನು ಪ್ರಮುಖ ಆದ್ಯತೆಗಳನ್ನಾಗಿ ಮಾಡಿಕೊಂಡು ಬ್ರಿಕ್ಸ್ ಚಟುವಟಿಕೆಗಳನ್ನು ಸಾಮಾನ್ಯ ಜನರಿಗೆ ಇನ್ನಷ್ಟು ಹತ್ತಿರ ತರುವ ಉದ್ದೇಶವಿದೆ ಎಂದು ಪ್ರಧಾನಿ ತಿಳಿಸಿದರು.
ಬ್ರಿಕ್ಸ್ ತನ್ನ 20 ವರ್ಷಗಳ ಪಯಣದಲ್ಲಿ ಜಾಗತಿಕ ಮಟ್ಟದಲ್ಲಿ ವಿಶಿಷ್ಟ ಸ್ಥಾನ ಗಳಿಸಿದೆ. ಈಗ ಸದಸ್ಯ ರಾಷ್ಟ್ರಗಳ ನಡುವಿನ ಒಗ್ಗಟ್ಟು ಮತ್ತು ಒಮ್ಮತವನ್ನು ಸ್ಪಷ್ಟ ಫಲಿತಾಂಶಗಳಾಗಿ ಪರಿವರ್ತಿಸುವ ಸಮಯ ಬಂದಿದೆ ಎಂದು ಮೋದಿ ಹೇಳಿದರು.
ಬ್ರಿಕ್ಸ್ ಯಾವುದೇ ದೇಶ ಅಥವಾ ಒಕ್ಕೂಟದ ವಿರುದ್ಧ ರೂಪುಗೊಂಡ ವೇದಿಕೆಯಲ್ಲ ಎಂಬುದನ್ನೂ ಅವರು ಸ್ಪಷ್ಟಪಡಿಸಿದರು. ಸದಸ್ಯ ರಾಷ್ಟ್ರಗಳು ಪರಸ್ಪರರ ಅಭಿಪ್ರಾಯಗಳನ್ನು ಗೌರವಿಸಿ ಸರ್ವಸಮ್ಮತಿಯೊಂದಿಗೆ ಮುನ್ನಡೆಯುತ್ತಿವೆ. ಎಲ್ಲರನ್ನೂ ಜೊತೆಯಲ್ಲಿ ಕರೆದೊಯ್ಯುವುದು ಬ್ರಿಕ್ಸ್‌ನ ಉದ್ದೇಶ ಎಂದು ಹೇಳಿದರು.