LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News

ಸ್ವಪಕ್ಷದವರಿಂದಲೇ ಸತೀಶ ಜಾರಕಿಹೊಳಿ ವಿರುದ್ಧ ಇಡಿಗೆ ದೂರು?

ಬೆಂಗಳೂರು, ಸೆ 12 : - ಜಾರಿ ನಿರ್ದೇಶನಾಲಯ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿನ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ತನಿಖಾ ಸಂಸ್ಥೆಯ ಬಳಿ ದಾಖಲೆಗಳಿದ್ದರೆ ಆರೋಪಗಳನ್ನು ಸಾಬೀತುಪಡಿಸಲಿ. ನೋಟಿಸ್ ನೀಡಿದರೆ ವಿಚಾರಣೆಗೆ ಹಾಜರಾಗಿ ಎಲ್ಲದಕ್ಕೂ ಸ್ಪಷ್ಟನೆ ನೀಡುತ್ತೇನೆ ಎಂದು ಹೇಳಿದ್ದಾರೆ.

ಇಡಿ ತನ್ನ ಪ್ರಕಟಣೆಯಲ್ಲಿ ಹಲವು ವಿಚಾರಗಳನ್ನು ‘ಶಂಕಿಸಲಾಗಿದೆ’ ಎಂದು ಉಲ್ಲೇಖಿಸಿದೆ. ಹೀಗಾಗಿ ಯಾವುದೂ ಅಂತಿಮವಾಗಿಲ್ಲ. ತನಿಖಾ ಸಂಸ್ಥೆ ನೋಟಿಸ್ ನೀಡಿದರೆ ಅಗತ್ಯ ದಾಖಲೆಗಳನ್ನು ಒದಗಿಸಿ, ಅವರ ಪ್ರಶ್ನೆಗಳಿಗೆ ಉತ್ತರ ನೀಡಲಾಗುವುದು ಎಂದು ತಿಳಿಸಿದರು.

ಲೋಕೋಪಯೋಗಿ ಇಲಾಖೆಯ ಗುತ್ತಿಗೆಗಳಲ್ಲಿ ಲಂಚ ಪಡೆದಿರುವ ಆರೋಪದ ಕುರಿತು ಕೇಳಿದ ಪ್ರಶ್ನೆಗೆ, ಅದನ್ನೂ ಶಂಕೆಯ ರೂಪದಲ್ಲಿಯೇ ಹೇಳಲಾಗಿದೆ. ಮೊದಲು ತನಿಖೆ ನಡೆಸಲಿ. ವಿಚಾರಣೆಗೆ ಕರೆದರೆ ಹೋಗಿ ಸ್ಪಷ್ಟನೆ ನೀಡುತ್ತೇವೆ ಎಂದು ಹೇಳಿದರು. ಇಡಿ ತನ್ನ ಪ್ರಕಟಣೆಯಲ್ಲಿ ಗುತ್ತಿಗೆದಾರರಿಂದ ಲಂಚ ಸಂಗ್ರಹಿಸಿರುವುದಕ್ಕೆ ಸಂಬಂಧಿಸಿದ ದಾಖಲೆಗಳು ದೊರೆತಿವೆ ಎಂದು ಆರೋಪಿಸಿದೆ.

ಆಫ್ರಿಕಾದ ಗಣಿ ಕಂಪನಿಗಳಲ್ಲಿ ಪಾಲು ಹೊಂದಿರುವ ಆರೋಪಕ್ಕೂ ಪ್ರತಿಕ್ರಿಯಿಸಿದ ಅವರು, ಇಡಿ ಈ ಬಗ್ಗೆ ಹೇಳಿದೆ. ಅವರ ಬಳಿ ದಾಖಲೆಗಳಿದ್ದರೆ ಅದನ್ನು ಸಾಬೀತುಪಡಿಸಲಿ. ಆದರೆ ಇಂತಹ ಪತ್ರಿಕಾ ಪ್ರಕಟಣೆ ತಮ್ಮ ವರ್ಚಸ್ಸಿಗೆ ಹಾನಿ ಉಂಟುಮಾಡಬಹುದು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇಡಿ ಪ್ರಕಾರ, ಕಾಂಗೊದ ಚಿನ್ನದ ಗಣಿ ಉದ್ಯಮದಲ್ಲಿ ತೊಡಗಿರುವ ಮ್ಯಾಗ್ನಿಟ್ಯೂಡ್ ಸ್ಟಾರ್ ಕಂಪನಿಯಲ್ಲಿ ಸತೀಶ ಜಾರಕಿಹೊಳಿ ಸುಮಾರು ಶೇ 40ರಷ್ಟು ಪಾಲು ಹೊಂದಿದ್ದಾರೆ. ಅವರ ಕುಟುಂಬದ ಸದಸ್ಯರು ಕಾಂಗೊ ಮತ್ತು ಜಾಂಬಿಯಾದ ಇತರ ಕಂಪನಿಗಳಲ್ಲಿಯೂ ಪಾಲು ಹೊಂದಿದ್ದಾರೆ ಎಂದು ತನಿಖಾ ಸಂಸ್ಥೆ ಆರೋಪಿಸಿದೆ. ಶೋಧದ ವೇಳೆ ₹3.3 ಕೋಟಿ ನಗದು ಹಾಗೂ ಸುಮಾರು ₹15 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿ ವಶಪಡಿಸಿಕೊಂಡಿರುವುದಾಗಿಯೂ ಇಡಿ ತಿಳಿಸಿದೆ.

ತಮಗೆ ಸಾರ್ವಜನಿಕರೇ ಮೊದಲ ನ್ಯಾಯಾಲಯ ಎಂದ ಸತೀಶ ಜಾರಕಿಹೊಳಿ, ದೂರು ನೀಡಿರುವವರು ಯಾರು ಎಂಬ ಬಗ್ಗೆ ತಮಗೆ ಸ್ಪಷ್ಟತೆ ಇದೆ. ಈ ಕುರಿತು ಮುಖ್ಯಮಂತ್ರಿಯವರೊಂದಿಗೂ ಚರ್ಚಿಸಿದ್ದೇನೆ ಎಂದರು. ತಮ್ಮ ಪಕ್ಷದವರೇ ದೂರು ನೀಡಿದ್ದಾರೆಯೇ ಎಂಬ ಪ್ರಶ್ನೆಗೆ, ಅದನ್ನು ಮುಖ್ಯಮಂತ್ರಿಗಳು ನೋಡಿಕೊಳ್ಳುತ್ತಾರೆ ಎಂದು ಪ್ರತಿಕ್ರಿಯಿಸಿದರು.

ಇದೇ ವೇಳೆ ಇಡಿ ಶೋಧಕ್ಕೆ ರಾಜಕೀಯ ಬಣ್ಣ ನೀಡುವ ಅಗತ್ಯವಿಲ್ಲ ಎಂದು ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ. ದೂರು ಅಥವಾ ಆರೋಪಗಳು ಬಂದಾಗ ತನಿಖಾ ಸಂಸ್ಥೆಗಳು ತಮ್ಮ ಕೆಲಸ ಮಾಡುತ್ತವೆ. ಕಾನೂನು ಹೋರಾಟದ ಮೂಲಕ ಸತೀಶ ಆರೋಪಮುಕ್ತರಾಗಿ ಹೊರಬರಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಸತೀಶ ಅವರ ನಿವಾಸಕ್ಕೆ ತಾವು ಬಿಜೆಪಿ ಶಾಸಕನಾಗಿ ಹೋಗಿರಲಿಲ್ಲ, ತಮ್ಮನಾಗಿ ಭೇಟಿ ನೀಡಿದ್ದೆ. ಕುಟುಂಬದವರಿಗೆ ಧೈರ್ಯ ತುಂಬಿದ್ದು, ಕಾನೂನು ಮಾರ್ಗದಲ್ಲಿ ಹೋರಾಟ ನಡೆಸುವಂತೆ ಸಲಹೆ ನೀಡಿದ್ದೇನೆ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST