ಹೊಸದಿಲ್ಲಿ, ಜುಲೈ 29: ಪ್ರತಿಭಟನಾ ನಿರತ ವಿದ್ಯಾರ್ಥಿಗಳು “ಅಂಧಭಕ್ತರು” ಆಗಲು ನಿರಾಕರಿಸಿದ್ದು, ತಮ್ಮ ಭವಿಷ್ಯ ಮತ್ತು ವೃತ್ತಿಗೆ ಧಕ್ಕೆಯಾಗುವ ಭಯದ ನಡುವೆಯೂ ಬಿಜೆಪಿ ಹಾಗೂ ಆರ್‌ಎಸ್‌ಎಸ್ ವಿರುದ್ಧ ಧೈರ್ಯದಿಂದ ನಿಂತಿದ್ದಾರೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದರು.
ಲೋಕಸಭೆಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಬೆದರಿಕೆಗಳಿಗೆ ಮಣಿಯದೆ ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಿರುವುದು ಶ್ಲಾಘನೀಯ. ದೇಶದಲ್ಲಿ ವಿವಿಧ ಧರ್ಮಗಳ ಜನರನ್ನು ಏಕೆ ಗುರಿಯಾಗಿಸಲಾಗುತ್ತಿದೆ ಹಾಗೂ ಜನರು ತಮ್ಮ ಇಚ್ಛೆಯ ವ್ಯಕ್ತಿಯನ್ನು ಪ್ರೀತಿಸುವುದನ್ನು ಏಕೆ ತಡೆಯಲಾಗುತ್ತಿದೆ ಎಂಬ ಪ್ರಶ್ನೆಗಳಿಗೆ ಸರ್ಕಾರ ಉತ್ತರಿಸಬೇಕು ಎಂದು ಆಗ್ರಹಿಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧವೂ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, “ಗೃಹ ಸಚಿವ ಎಂದು ಕರೆಯಲ್ಪಡುವವರಿಗೆ ಲೋಕಸಭೆಗೆ ಬಂದು ಕುಳಿತುಕೊಳ್ಳುವ ಧೈರ್ಯವೂ ಇಲ್ಲ. ಅದನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆ” ಎಂದು ಹೇಳಿದರು.
ಮುಂದುವರಿದು, ಪ್ರತಿಭಟನೆಗಳ ವೇಳೆ ಪೊಲೀಸರಿಗೆ ಗುಂಡು ಹಾರಿಸಲು ಗೃಹ ಸಚಿವರು ಆದೇಶ ನೀಡಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.
ಈ ಆರೋಪಕ್ಕೆ ತಕ್ಷಣ ಆಕ್ಷೇಪ ವ್ಯಕ್ತಪಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, “ಆ ಆದೇಶವನ್ನು ನಮಗೆ ತೋರಿಸಿ” ಎಂದು ಸವಾಲು ಹಾಕಿದರು. ಆರೋಪಕ್ಕೆ ಪೂರಕವಾದ ದಾಖಲೆಗಳನ್ನು ಮಂಡಿಸುವಂತೆ ಅವರು ಆಗ್ರಹಿಸಿದರು.
ರಾಹುಲ್ ಗಾಂಧಿ ಅವರ ಹೇಳಿಕೆಗಳ ನಂತರ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆದು, ಕೆಲಕಾಲ ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು.
