ಹೊಸದಿಲ್ಲಿ, ಜೂನ್ 1 : 19 ಕೆಜಿ ತೂಕದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ 42 ರೂ. ಹೆಚ್ಚಳ ಮಾಡಲಾಗಿದೆ.
ದರ ಏರಿಕೆಯ ಬಳಿಕ ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 3,113.50 ರೂ.ಗೆ ತಲುಪಿದೆ. ಸ್ಥಳೀಯ ತೆರಿಗೆಗಳ ಪರಿಣಾಮವಾಗಿ ಕೋಲ್ಕತ್ತಾದಲ್ಲಿ ವಾಣಿಜ್ಯ ಸಿಲಿಂಡರ್ ದರ 53.50 ರೂ. ಹೆಚ್ಚಳಗೊಂಡಿದ್ದು, ಒಟ್ಟು ಬೆಲೆ 3,255.50 ರೂ. ಆಗಿದೆ.
ಇದರ ಜೊತೆಗೆ 5 ಕೆಜಿ ಎಫ್‌ಟಿಎಲ್ ಸಿಲಿಂಡರ್ ದರವನ್ನೂ 11 ರೂ. ಹೆಚ್ಚಳ ಮಾಡಲಾಗಿದ್ದು, ಹೊಸದಿಲ್ಲಿಯಲ್ಲಿ ಅದರ ಬೆಲೆ 821.50 ರೂ.ಗೆ ಏರಿಕೆಯಾಗಿದೆ. ಈ ವರ್ಷದ ಜನವರಿಯಲ್ಲಿ ಹೊಸದಿಲ್ಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 1,691.50 ರೂ. ಇತ್ತು. ನಂತರ ವಿವಿಧ ಹಂತಗಳಲ್ಲಿ ನಡೆದ ದರ ಪರಿಷ್ಕರಣೆಯಿಂದ ಅದರ ಬೆಲೆ ಈಗ 3,113.50 ರೂ.ಗೆ ಏರಿಕೆಯಾಗಿದೆ.
ವಾಣಿಜ್ಯ ಸಿಲಿಂಡರ್ ದರ ಏರಿಕೆಯಿಂದ ಹೊಟೇಲ್, ಉಪಾಹಾರ ಗೃಹ, ಸಣ್ಣ ವ್ಯಾಪಾರ ಸಂಸ್ಥೆಗಳು ಸೇರಿದಂತೆ ವಾಣಿಜ್ಯ ಬಳಕೆದಾರರ ಮೇಲೆ ಹೆಚ್ಚುವರಿ ಹೊರೆ ಬೀಳುವ ಸಾಧ್ಯತೆ ಇದೆ.