ಹೊಸದಿಲ್ಲಿ, ಜುಲೈ 18: ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ವೇಳೆ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ ದಿಪ್ಕೆ ಅವರ ಮೇಲೆ ಮಹಿಳೆಯೊಬ್ಬರು ನೀಲಿ ಶಾಯಿ ಎರಚಿದ ಘಟನೆ ಶನಿವಾರ ನಡೆದಿದೆ. ಘಟನೆಯಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಶಿಕ್ಷಣ ತಜ್ಞ ಹಾಗೂ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ ಅವರನ್ನು ದೆಹಲಿ ಪೊಲೀಸರು ಬಲವಂತವಾಗಿ ಸಫ್ದರಜಂಗ್ ಆಸ್ಪತ್ರೆಗೆ ದಾಖಲಿಸಿದ ಕೆಲವೇ ಗಂಟೆಗಳ ಬಳಿಕ ಈ ಘಟನೆ ನಡೆದಿದೆ. ವಾಂಗ್ಚುಕ ಅವರನ್ನು ಆಸ್ಪತ್ರೆಗೆ ಕರೆದೊಯ್ದ ನಂತರ ಅಭಿಜೀತ ಜಂತರ್ ಮಂತರ್‌ನಲ್ಲೇ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಮಹಿಳೆಯೊಬ್ಬರು ಏಕಾಏಕಿ ವೇದಿಕೆಯ ಸಮೀಪ ಬಂದು ಅವರ ಮೇಲೆ ನೀಲಿ ಶಾಯಿ ಎರಚಿದರು.
ಈ ಘಟನೆಯಿಂದ ವೇದಿಕೆ ಬಳಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಸಿಜೆಪಿ ಕಾರ್ಯಕರ್ತರು ಮತ್ತು ಬೆಂಬಲಿಗರು ವೇದಿಕೆಯತ್ತ ಧಾವಿಸಿದ ಪರಿಣಾಮ ಕೆಲಕಾಲ ತಳ್ಳಾಟ–ನೂಕಾಟವೂ ನಡೆಯಿತು. ಬಳಿಕ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದು ಕಾರ್ಯಕ್ರಮವನ್ನು ಪುನರಾರಂಭಿಸಿದರು.
ಘಟನೆಯ ಬಳಿಕ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪ್ರತಿಕ್ರಿಯಿಸಿರುವ ಅಭಿಜೀತ, ತಮ್ಮ ಮೇಲೆ ಶಾಯಿ ಎರಚಿರುವ ಚಿತ್ರವನ್ನು ಹಂಚಿಕೊಂಡು, "ನೀಲಿ ಬಣ್ಣ ನನ್ನ ಬಣ್ಣ... ಜೈ ಭೀಮ್" ಎಂದು ಬರೆದುಕೊಂಡಿದ್ದಾರೆ.
ಶಾಯಿ ಎರಚಿದ ಮಹಿಳೆಯ ಗುರುತು ಹಾಗೂ ಆಕೆಯ ಕೃತ್ಯದ ಹಿಂದಿನ ಉದ್ದೇಶ ತಕ್ಷಣಕ್ಕೆ ತಿಳಿದುಬಂದಿಲ್ಲ. ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ಪ್ರಕರಣದ ಎಲ್ಲ ಆಯಾಮಗಳ ಕುರಿತು ತನಿಖೆ ಮುಂದುವರಿದಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಇದೇ ವೇಳೆ, ಸೋನಮ್ ವಾಂಗ್ಚುಕ ಅವರನ್ನು ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ವೈದ್ಯಕೀಯ ಸಲಹೆಯ ಮೇರೆಗೆ ಸಫ್ದರಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಪುನರುಚ್ಚರಿಸಿದ್ದಾರೆ. ಆದರೆ, ವಾಂಗ್ಚುಕ ಅವರನ್ನು ಪೊಲೀಸರು ಬಲವಂತವಾಗಿ ಕರೆದೊಯ್ದಿದ್ದಾರೆ ಹಾಗೂ ಪ್ರತಿಭಟನಾಕಾರರ ಮೇಲೆ ಒತ್ತಡ ಹೇರಿದ್ದಾರೆ ಎಂದು ಅಭಿಜೀತ ಆರೋಪಿಸಿದ್ದಾರೆ.