ಅಳ್ನಾವರ, ಅ. 5 : (ಸಮದರ್ಶಿ ಸುದ್ದಿ) - ಸಮೀಪದ ಡೋರಿ ಗ್ರಾಮದಲ್ಲಿ ಮನೆಯ ಎದುರು ಕಟ್ಟಿದ್ದ ಎರಡು ಹಸುಗಳು ಸಿಡಿಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.
ಡೋರಿ ಗ್ರಾಮದ ಸಂಜು ಸಹದೇವ ಹರಿಜನ ಅವರು ತಮ್ಮ ಮನೆಯ ಮುಂದೆ ಎರಡು ಹಸುಗಳನ್ನು ಕಟ್ಟಿದ್ದರು. ಈ ವೇಳೆ ಪಕ್ಕದಲ್ಲಿದ್ದ ತೆಂಗಿನ ಮರಕ್ಕೆ ಸಿಡಿಲು ಬಡಿದ ಪರಿಣಾಮ ಹಸುಗಳು ಸ್ಥಳದಲ್ಲೇ ಮೃತಪಟ್ಟಿವೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಗ್ರಾಮ ಆಡಳಿತಾಧಿಕಾರಿ ಬಸವರಾಜ ಐನಾಪೂರ ಹಾಗೂ ಕಂದಾಯ ನಿರೀಕ್ಷಕ ಸಂಪತಕುಮಾರ ಒಡೆಯರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲೂಕಿನ ಹಲವೆಡೆ ಉತ್ತಮ ಮಳೆ: ಸೋಮವಾರ ಮಧ್ಯಾಹ್ನ ಸುಮಾರು 20 ನಿಮಿಷಗಳ ಕಾಲ ಅಳ್ನಾವರ ಪಟ್ಟಣ ಸೇರಿದಂತೆ ತಾಲೂಕಿನ ಕಾಶೇನಟ್ಟಿ, ಕಂಬಾರಗಣವಿ, ಕೋಗಿಲಗೇರಿ ಹಾಗೂ ಡೋರಿ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಜೋರಾದ ಗಾಳಿಯಿಂದಾಗಿ ಅಲ್ಲಲ್ಲಿ ಕಬ್ಬಿನ ಬೆಳೆ ನೆಲಕ್ಕುರುಳಿದೆ. ಸಮೀಪದ ಗೋದಳ್ಳಿ ಗ್ರಾಮದಲ್ಲಿ ರಸ್ತೆಯ ಮೇಲೆ ಮರವೊಂದು ಬಿದ್ದಿದ್ದು, ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.