ಹೊಸದಿಲ್ಲಿ, ಅ. 7: ದೂರದೃಷ್ಟಿಯ ನೀತಿಗಳು ಮತ್ತು ಕಠಿಣ ಪರಿಶ್ರಮದ ಮೂಲಕ 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಸಂಕಲ್ಪವನ್ನು ಸಾಕಾರಗೊಳಿಸಿಯೇ ತೀರುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ‘ವಿ ವಿಲ್ ಡು ಇಟ್’ ಎಂಬುದು ಈ ಗುರಿ ಸಾಧನೆಯ ಮಂತ್ರವಾಗಬೇಕು ಎಂದು ಅವರು ಕರೆ ನೀಡಿದ್ದಾರೆ.
ಸರ್ಕಾರದ ಮುಖ್ಯಸ್ಥರಾಗಿ ಸತತ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಹೊಸದಿಲ್ಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ‘ವಿಕಸಿತ ಭಾರತ ಸಂಕಲ್ಪ ಸಭಾ’ದಲ್ಲಿ ಮಾತನಾಡಿದ ಅವರು, ವೋಟ್‌ಬ್ಯಾಂಕ್ ರಾಜಕಾರಣಕ್ಕಾಗಿ ಸಮಾಜವನ್ನು ವಿಭಜಿಸುವುದು ದೇಶ ಎದುರಿಸುತ್ತಿರುವ ದೊಡ್ಡ ಸವಾಲುಗಳಲ್ಲಿ ಒಂದಾಗಿದೆ ಎಂದರು.
‘ರೈತನ ಹೊಲಕ್ಕೆ ನೀರಿಲ್ಲದಿದ್ದರೆ ಆ ಸಮಸ್ಯೆ ಒಂದು ಜಾತಿಗೆ ಮಾತ್ರ ಸೀಮಿತವಾಗುತ್ತದೆಯೇ? ವಿದ್ಯುತ್ ಇಲ್ಲದಿದ್ದರೆ ಕತ್ತಲು ಒಂದು ಸಮುದಾಯವನ್ನು ಮಾತ್ರ ಆವರಿಸುತ್ತದೆಯೇ? ಖಂಡಿತ ಇಲ್ಲ. ಸಮಸ್ಯೆ ಎಲ್ಲರದ್ದಾಗಿದ್ದರೆ ಪರಿಹಾರವೂ ಎಲ್ಲರಿಗೂ ತಲುಪಬೇಕು’ ಎಂದು ಮೋದಿ ಹೇಳಿದರು.
ನೂರು ವರ್ಷಗಳ ಹಿಂದೆ ಭಾರತದ ಜನಸಂಖ್ಯೆ 40 ಕೋಟಿಗಿಂತ ಕಡಿಮೆ ಇತ್ತು. ಈಗ 140 ಕೋಟಿಗೂ ಅಧಿಕ ನಾಗರಿಕರಿದ್ದು, ಎಲ್ಲರೂ ಒಟ್ಟಾಗಿ ದೇಶದ ಭವಿಷ್ಯ ರೂಪಿಸಬೇಕು ಎಂದು ಹೇಳಿದ ಅವರು, ‘ವಿಕಸಿತ ಭಾರತ–ವಿ ವಿಲ್ ಡು ಇಟ್; ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿ ಭಾರತ–ವಿ ವಿಲ್ ಡು ಇಟ್; ಆತ್ಮನಿರ್ಭರ ಭಾರತ–ವಿ ವಿಲ್ ಡು ಇಟ್; ಜಾಗತಿಕ ಉತ್ಪಾದನಾ ಕೇಂದ್ರ–ವಿ ವಿಲ್ ಡು ಇಟ್; ಒಲಿಂಪಿಕ್ಸ್ ಆತಿಥ್ಯ–ವಿ ವಿಲ್ ಡು ಇಟ್’ ಎಂದು ಹಲವು ಗುರಿಗಳನ್ನು ಮುಂದಿಟ್ಟರು.
ಭಾರತೀಯ ಪೈಲಟ್ ಸ್ಮಿತ್ ಮಚ್ಚರ್ ಅವರ ಸಾಹಸವನ್ನು ಪ್ರಸ್ತಾಪಿಸಿದ ಮೋದಿ, ಇಂದು ಜಗತ್ತು ಭಾರತೀಯ ಪೈಲಟ್ ಬಗ್ಗೆ ಮಾತನಾಡುತ್ತಿದೆ; ಮುಂದೊಂದು ದಿನ ಭಾರತದಲ್ಲೇ ತಯಾರಾದ ವಿಮಾನಗಳ ಬಗ್ಗೆಯೂ ವಿಶ್ವ ಮಾತನಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಜನರೇ ನನ್ನ ಶಕ್ತಿ’
2001ರ ಅಕ್ಟೋಬರ್ 7ರಂದು ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ಮೋದಿ, ಸರ್ಕಾರದ ಮುಖ್ಯಸ್ಥರಾಗಿ 25 ವರ್ಷ ಪೂರೈಸಿರುವುದನ್ನು ಸ್ಮರಿಸಿದರು. ‘ಆ ದಿನ ಈ ಹಂತಕ್ಕೆ ತಲುಪುತ್ತೇನೆ ಎಂದು ನಾನು ಊಹಿಸಿರಲಿಲ್ಲ. ಇದು ಜನರ ನಿರಂತರ ಆಶೀರ್ವಾದದ ಫಲ. ಭಾರತದ ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಗೌರವ ಸಲ್ಲಿಸುತ್ತೇನೆ’ ಎಂದರು.
‘ನನಗೆ ಜನರೇ ದೇವರ ಸ್ವರೂಪ. ಕೋಟ್ಯಂತರ ದೇಶವಾಸಿಗಳ ವಿಶ್ವಾಸ ಮತ್ತು ಲಕ್ಷಾಂತರ ಕಾರ್ಯಕರ್ತರ ಪರಿಶ್ರಮವೇ ನನ್ನ ದೊಡ್ಡ ಶಕ್ತಿ. ಈ 25 ವರ್ಷಗಳ ಅನುಭವ ನನ್ನೊಬ್ಬನದ್ದಲ್ಲ; ಅದು ದೇಶದ ಆಸ್ತಿ’ ಎಂದು ಮೋದಿ ಹೇಳಿದರು.