ಕೋಲ್ಕತ್ತಾ, ಮೇ 9 : ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ನ 15 ವರ್ಷಗಳ ಆಡಳಿತಕ್ಕೆ ತೆರೆಬಿದ್ದಿದ್ದು, ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಸುವೇಂದು ಅಧಿಕಾರಿ ಶನಿವಾರ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಕೋಲ್ಕತ್ತಾದ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ರಾಜ್ಯಪಾಲ ಆರ್.ಎನ್. ರವಿ ಅವರು ಸುವೇಂದು ಅಧಿಕಾರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಸುವೇಂದು ಅಧಿಕಾರಿಯೊಂದಿಗೆ ಬಿಜೆಪಿಯ ಹಿರಿಯ ನಾಯಕ ದಿಲೀಪ್ ಘೋಷ್ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಕೇಂದ್ರ ಸಚಿವರು, ಎನ್‌ಡಿಎ ಆಡಳಿತದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಬಿಜೆಪಿ ನಾಯಕರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
294 ಸದಸ್ಯರ ವಿಧಾನಸಭೆಯಲ್ಲಿ ಬಿಜೆಪಿ 207 ಸ್ಥಾನಗಳನ್ನು ಗೆದ್ದು ಐತಿಹಾಸಿಕ ವಿಜಯ ಸಾಧಿಸಿದ್ದು, ರಾಜ್ಯದಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ.
ಪ್ರಮಾಣ ವಚನ ಸಮಾರಂಭದ ಹಿನ್ನೆಲೆಯಲ್ಲಿ ಕೋಲ್ಕತ್ತಾದಾದ್ಯಂತ ಭದ್ರತೆಯನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಲಾಗಿತ್ತು. ಸುವೇಂದು ಅಧಿಕಾರಿಯ ಚಿನಾರ್ ಪಾರ್ಕ್ ನಿವಾಸ, ಬ್ರಿಗೇಡ್ ಪೆರೇಡ್ ಮೈದಾನ, ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕಾಲಿಘಾಟ್ ನಿವಾಸ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಪ್ರಧಾನಿ ಮೋದಿ ಆಗಮನದ ಹಿನ್ನೆಲೆಯಲ್ಲಿ ಆರ್‌ಸಿಟಿಸಿ ಮೈದಾನ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚುವರಿ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿತ್ತು. ಕೇಂದ್ರ ಭದ್ರತಾ ಪಡೆಗಳು, ಸಿಆರ್‌ಪಿಎಫ್ ಹಾಗೂ ಕೋಲ್ಕತ್ತಾ ಪೊಲೀಸರನ್ನು ಹಲವು ಹಂತಗಳಲ್ಲಿ ನಿಯೋಜಿಸಲಾಗಿತ್ತು.
ರಾಜಕೀಯ ಬೆಳವಣಿಗೆಗಳ ನಡುವೆ ಮಮತಾ ಬ್ಯಾನರ್ಜಿ ಅವರ ನಿವಾಸದ ಹೊರಗೂ ಸಿಆರ್‌ಪಿಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಇನ್ನೊಂದೆಡೆ, ಉತ್ತರ ಬಂಗಾಳ, ಜಾರ್ಖಂಡ್ ಸೇರಿದಂತೆ ನೆರೆಯ ಪ್ರದೇಶಗಳಿಂದ ಸಾವಿರಾರು ಬಿಜೆಪಿ ಕಾರ್ಯಕರ್ತರು ಹಾಗೂ ಬೆಂಬಲಿಗರು ಕೋಲ್ಕತ್ತಾಕ್ಕೆ ಆಗಮಿಸಿದ್ದರು. ಪಕ್ಷದ ಧ್ವಜಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದ ಕಾರ್ಯಕರ್ತರು ಬ್ರಿಗೇಡ್ ಪೆರೇಡ್ ಮೈದಾನದತ್ತ ಮೆರವಣಿಗೆ ನಡೆಸಿದರು.
ಇದು ಐತಿಹಾಸಿಕ ದಿನ. ಪಶ್ಚಿಮ ಬಂಗಾಳ ಟಿಎಂಸಿ ಹಿಡಿತದಿಂದ ಮುಕ್ತವಾಗುತ್ತಿರುವ ಕ್ಷಣವನ್ನು ನೋಡಲು ಬಂದಿದ್ದೇವೆ ಎಂದು ಜಾರ್ಖಂಡ್‌ನ ಬಿಜೆಪಿ ಬೆಂಬಲಿಗರೊಬ್ಬರು ಹೇಳಿದರು.