ಬೆಂಗಳೂರು, ೧೫: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಡಿ ಮಾಜಿ ಮುಖ್ಯಮಂತ್ರಿ, ಬಿಜೆಪಿಯ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ವಿರುದ್ಧ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಸಂತ್ರಸ್ತೆಯ ತಾಯಿ ನೀಡಿದ ದೂರಿನ ಅನ್ವಯ ಸದಾಶಿವನಗರ ಠಾಣಾ ಪೊಲೀಸರು ಯಡಿಯೂರಪ್ಪ ವಿರುದ್ಧ ಪೋಕ್ಸೋ ಹಾಗೂ 354 (A) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಕಳೆದ ಫೆಬ್ರವರಿಯಲ್ಲಿ ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಿ ಸಂತ್ರಸ್ತೆಯ ತಾಯಿ ಯಡಿಯೂರಪ್ಪ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
“ನನ್ನ 17 ವರುಷದ ಮಗಳ ಮೇಲೆ ಅತ್ಯಾಚಾರವಾಗಿತ್ತು. ಈ ಪ್ರಕರಣವನ್ನು ಎಸ್ ಅಯ್ ಟಿ ಗೆ ವಹಿಸುವಂತೆ ವಿನಂತಿಸಿಕೊಳ್ಳಲು ನಾವು ಯಡಿಯೂರಪ್ಪ ಅವರ ನಿವಾಸಕ್ಕೆ ಹೋಗಿದ್ದೇವು. ಆಗ ಮಗಳನ್ನು ಯಡಿಯೂರಪ್ಪ ಕೋಣೆಯೊಂದರಲ್ಲಿ ಕರೆದುಕೊಂಡು ಹೋಗಿ ಅಸಭ್ಯವಾಗಿ ವರ್ತಿಸಿದ್ದಾರೆ. ಅಲ್ಲದೇ ವಿಷಯ ಯಾರಿಗೂ ತಿಳಿಸದಿರಲು ಎಚ್ಚರಿಕೆ ನೀಡಿದ್ದರು. ಹಾಗಾಗಿ ಭಯದಿಂದ ಈ ವರೆಗೂ ದೂರು ನೀಡಿರಲಿಲ್ಲ” ಎಂದು ಸಂತ್ರಸ್ತೆಯ ತಾಯಿ ದೂರಿನಲ್ಲಿ ತಿಳಿಸಿದ್ದಾರೆ.
ಫೆಬ್ರವರಿ 2 ರಂದು ಸಹಾಯ ಕೇಳಲು ಹೋಗಿದ್ದಾಗ ತನಗೆ ಲೈಂಗಿಕ ಕಿರುಕುಳ ನೀಡಿದ್ದಾಗಿ ಸಂತ್ರಸ್ತೆಯು ಎಫ್ಐಆರ್ನಲ್ಲಿ ಉಲ್ಲೇಖಿಸಿದ್ದಾಳೆ ಎಂದು ತಿಳಿದುಬಂದಿದೆ.
53 ಮಂದಿ ವಿರುದ್ಧ ಮಹಿಳೆ ದೂರು
———————————
ಪ್ರಕರಣ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿಗಳು, ರಾಜಕಾರಣಿಗಳು, ಉದ್ಯಮಿಗಳು ಸೇರಿದಂತೆ ಒಟ್ಟು 53 ಮಂದಿ ವಿರುದ್ದ ಸಂತ್ರಸ್ತೆ ಬಾಲಕಿ ತಾಯಿ ಸದಾಶಿವನಗರ ಠಾಣೆಗೆ ದೂರು ನೀಡಿದ್ದಾರೆ.
ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಬಿಜೆಪಿಯು ಬಿರುಸಿನ ರಾಜಕೀಯ ಚಟುವಟಿಕೆಗಳನ್ನು ನಡೆಸುತ್ತಿದೆ. ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಓಡಾಟ ನಡೆಸುತ್ತಿರುವ ಯಡಿಯೂರಪ್ಪ ಅವರಿಗೆ ಈ ಕೇಸು ಸಂಕಷ್ಟ ತಂದೊಡ್ಡಲಿದೆ.