ಮಂಡ್ಯ : ಆಟೋ ರಿಕ್ಷಾ ಚಾಲಕರೊಬ್ಬರನ್ನು ಸಾರ್ವಜನಿಕವಾಗಿ ಥಳಿಸಿದ ಸಂಚಾರಿ ಪೊಲೀಸ್ ಪೇದೆಯನ್ನು ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ ಅವರು ಸೇವೆಯಿಂದ ಅಮಾನತು ಮಾಡಿದ್ದಾರೆ.
ಮಹೇಂದ್ರ ಎಂಬುವರು ಅಮಾನತುಗೊಂಡ ಪೇದೆ. ಈತ ಆಟೋ ಚಾಲಕರೊಬ್ಬರಿಗೆ ರಸ್ತೆಯಲ್ಲೇ ಅವಾಚ್ಯ ಶಬ್ಧಗಳಿಂದ ಬೈದು ಕಪಾಳಕ್ಕೆ ಹೊಡೆದ ಕಾರಣ ಅವರನ್ನು ಅಮಾನತು ಮಾಡಲಾಗಿದೆ. ಪೊಲೀಸ್ ಕಾನ್ಸ್ಸ್ಟೇಬಲ್ ಮಾಡಿದ್ದ ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಕೆಲವರು ಟ್ವೀಟ್ ಮೂಲಕ ಮಂಡ್ಯ ಎಸ್ಪಿ ಹಾಗೂ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳ ಗಮನಕ್ಕೆ ಈ ಕೃತ್ಯವನ್ನು ತಂದು ಕ್ರಮಕ್ಕೆ ಆಗ್ರಹಿಸಿದ್ದರು ಎನ್ನಲಾಗಿದೆ.
ಮಂಡ್ಯ ಜಿಲ್ಲಾಸ್ಪತ್ರೆಯ ಎದುರು ಆಟೋ ಚಾಲಕ ಮತ್ತು ಪೊಲೀಸರು ತೆರಳುತ್ತಿದ್ದ ಬೈಕ್ ನಡುವೆ ಅಪಘಾತವಾಗಿದೆ. ಪೊಲೀಸ್ ಪೇದೆ ರಸ್ತೆಗೆ ಬಿದ್ದು, ಕಾಲಿಗೆ ಸಣ್ಣ ಪೆಟ್ಟಾಗಿದೆ. ಸ್ಥಳೀಯರು ಪೇದೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಆಟೋ ಚಾಲಕನಿಗೆ ಹೇಳಿದ್ದಾರೆ.
ಅದರಂತೆ ಪೇದೆಯನ್ನು ಆಸ್ಪತ್ರೆಗೆ ಹೋಗೋಣ ಬನ್ನಿ ಎಂದು ಚಾಲಕ ಕರೆದಿದ್ದಾರೆ. ಆತ ಕರೆದಾಗ ಸಿಟ್ಟಿಗೆದ್ದ ಪೇದೆ, ಚಾಲಕನ ಕಪಾಳಕ್ಕೆ ಹೊಡೆದು, ಹೊಟ್ಟೆಗೆ ಗುದ್ದಿದ್ದಾರೆ. ತಪ್ಪಾಯ್ತು ಬಿಡಿ ಸಾರ್ ಎಂದರೂ ಸುಮ್ಮನಾಗದೇ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ.