ಬೆಂಗಳೂರು: ಭ್ರಷ್ಟಾಚಾರದ ಮೂಲಕ ಕರ್ನಾಟಕದ ಬಿಜೆಪಿ ಸರ್ಕಾರ ಒಂದೂವರೆ ಲಕ್ಷ ಕೋಟಿ ಲೂಟಿ ಮಾಡಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ.
ನಗರದ ಅರಮನೆ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ‘ನಾ ನಾಯಕಿ’ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಇಂತಹ ಸರ್ಕಾರದಿಂದ ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ, ಉದ್ಯೋಗ ದೊರಕುವ ಭರವಸೆ ಇದೆಯೇ, ಇವರಿಂದ ಭವಿಷ್ಯ ಉತ್ತಮಗೊಳ್ಳುವ ಭರವಸೆ ಇದೆಯೇ ಎಂದು ಜನರನ್ನು ಪ್ರಶ್ನಿಸಿದ್ದಾರೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ನಿಮ್ಮ ಜೀವನ ಉತ್ತಮವಾಗಿದೆಯೇ ಅಥವಾ ನಿಮ್ಮ ಜೀವನದಲ್ಲಿ ಏನಾದರೂ ಬದಲಾವಣೆಯಾಗಿದೆಯೇ ಎಂದು ಪ್ರಶ್ನಿಸಿದ ಅವರು, ಮತದಾನ ಮಾಡುವ ಮೊದಲು ನಿಮ್ಮನ್ನು ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಪ್ರಿಯಾಂಕಾ ಹೇಳಿದರು.
ಪೊಲೀಸ್ ಸಬ್ ಇನ್ಸಪೆಕ್ಟರ್ ನೇಮಕಾತಿಯಲ್ಲಿ ನಡೆದಿರುವ ಹಗರಣ ನಾಚಿಕೆಗೇಡಿತನ ಸಂಗತಿ. ಬಿಜೆಪಿ ಸರ್ಕಾರ ಪೊಲೀಸ್ ಪಡೆಗಳನ್ನೂ ಮಾರಾಟಕ್ಕೆ ಇಟ್ಟಿರುವುದಕ್ಕೆ ಇದೇ ಸಾಕ್ಷಿ ಎಂದು ಪ್ರಿಯಾಂಕಾ ಹೇಳಿದರು.