ಮೈಸೂರು ಸಮೀಪದ ಸಣ್ಣ ಹಳ್ಳಿ ಸಿದ್ದರಾಮನ ಹುಂಡಿ. ಅಲ್ಲಿನ ಕೃಷಿಕ ಕುಟುಂಬದಲ್ಲಿ ಜನಿಸಿದ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿ ಆಗುತ್ತಾರೆ ಎಂದು ಅವರ ಮನೆಯವರೇ ಭಾವಿಸಿರಲಿಲ್ಲ. ಬಾಲಕನನ್ನು ಶಾಲೆಗೆ ಕೂಡ ಕಳುಹಿಸದೇ ದನ ಮತ್ತು ಕುರಿ ಕಾಯುವ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದರು. ಆದರೆ ಆ ಬಾಲಕ ವಿದ್ಯೆ ಕಲಿತರೆ ಒಳ್ಳೆಯದು ಎಂದು ಭಾವಿಸಿದ ಸ್ಥಳೀಯ ಶಾಲೆಯ ಮೇಷ್ಟ್ರು ಅವರನ್ನು ನೇರವಾಗಿ ಐದನೇ ತರಗತಿಗೆ ಸೇರಿಸಿದರು. ಹಾಗೆ ಸೇರಿಸುವಾಗ ಸರಿಯಾದ ಜನ್ಮ ದಿನಾಂಕ ತಿಳಿಯಲು ಯತ್ನಿಸಿ, ಸಾಧ್ಯ ಆಗದೇ ಯಾವುದೋ ಒಂದು ದಿನಾಂಕ ನಮೂದಿಸಿದರು. (1970ರ ಮೊದಲು ಹುಟ್ಟಿದವರ ಹೆಚ್ಚಿನ ಶಾಲಾ ದಾಖಲಾತಿಗಳು ಇದೇ ರೀತಿ ಆಗಿವೆ) ಆ ದಾಖಲೆ ಪ್ರಕಾರ ಈಗ ಸಿದ್ದರಾಮಯ್ಯ ಅವರಿಗೆ 75 ವರ್ಷ.
ಮೈಸೂರಿನಲ್ಲಿ ಇದ್ದುಕೊಂಡು ಓದಿದ ಸಿದ್ದರಾಮಯ್ಯ ವೈದ್ಯರಾಗಬೇಕು ಎಂದು ತಂದೆಯ ಇಚ್ಛೆಯಾಗಿತ್ತು. ಅದಕ್ಕೆಂದೇ ಅವರು ಮೈಸೂರಿನ ಯುವರಾಜ ಕಾಲೇಜಿನಲ್ಲಿ ಜೀವ ವಿಜ್ಞಾನ ವಿಷಯಗಳ ಪಿಯು ಸೇರಿದರಾದರೂ, ನಿರೀಕ್ಷಿಸಿದಷ್ಟು ಅಂಕ ಬರದೇ ವಿಜ್ಞಾನ ಪದವಿಯ ಓದು ಮುಂದುವರಿಸಿ ನಂತರ ಕಾನೂನು ಪದವಿ ಪಡೆದರು. ಎಪ್ಪತ್ತರ ದಶಕದ ಅವಧಿಯಲ್ಲಿ ಮೈಸೂರು ವೈಚಾರಿಕ ನೆಲೆಗಟ್ಟು ರೂಪಿಸಿದ ಬಹಳಷ್ಟು ಸಾಹಿತಿ, ಚಿಂತಕರ ಬೀಡಾಗಿತ್ತು. ಸಮಾಜವಾದ ಭರಾಟೆಯಿಂದ ಯುವ ಜನರಲ್ಲಿ ಉತ್ಸಾಹ ತುಂಬುತ್ತಿದ್ದ ದಿನಗಳವು. ಆ ಬೆಳವಣಿಗೆಯ ಮುಂಚೂಣಿಯಲ್ಲಿ ಇದ್ದವರು ಪ್ರೊ. ನಂಜುಂಡಸ್ವಾಮಿ. ಅವರೊಂದಿಗಿನ ಒಡನಾಟದಲ್ಲಿ ವಿಚಾರವಂತಿಕೆ ಬೆಳೆಸಿಕೊಂಡ ಸಿದ್ದರಾಮಯ್ಯ ಮುಂದೆ ರಾಜಕೀಯದತ್ತ ಹೊರಳಿದರು. 1983ರಲ್ಲಿ ವರುಣ ಕ್ಷೇತ್ರದಿಂದ ಅಷ್ಟೇನೂ ಪರಿಚಿತ ಅಲ್ಲದ ಕಾಂಗ್ರೆಸ್ಸೇತರ ಪಕ್ಷದಿಂದ ಸ್ಪರ್ಧಿಸಿ ಗೆದ್ದರು. ಸಿದ್ದರಾಮಯ್ಯ ಮೊಟ್ಟ ಮೊದಲು ಗಳಿಸಿದ್ದು ಕನ್ನಡ ಕಾವಲು ಸಮಿತಿ ಅಧ್ಯಕ್ಷ ಹುದ್ದೆಯನ್ನು. ಮುಂದಿನ ಎರಡು ವರ್ಷಗಳಲ್ಲಿ ಮರಳಿ ಚುನಾವಣೆ ನಡೆದು ಜನತಾದಳ ಅಧಿಕಾರಕ್ಕೆ ಬಂದಾಗ ಸಿದ್ದರಾಮಯ್ಯ ಅವರ ಪಕ್ಷ ಕೂಡ ಜನತಾದಳದ ಭಾಗವಾಗಿತ್ತು. ಆಗ ಅವರನ್ನು ಪಶು ಸಂಗೋಪನಾ ಖಾತೆಯ ಸಚಿವರನ್ನಾಗಿ ನೇಮಿಸಲಾಯಿತು. ಸಚಿವರಾಗಿ ಕೋಲಾರ ಜಿಲ್ಲೆಯ ಪ್ರವಾಸ ಹೋಗಿದ್ದ ಅವರು, ಹಿಂದಿರುಗುವ ಸಮಯಕ್ಕೆ ಅಧಿಕೃತ ಕಾರಿನ ಡಿಕ್ಕಿಯಲ್ಲಿ ಸಿಬ್ಬಂದಿ ತಾಜಾ ಕೋಳಿಗಳನ್ನು ತುಂಬುತ್ತಿದ್ದುದು ಕಂಡು ಅದೇನೆಂದು ವಿಚಾರಿಸಿದರು. ಇವೆಲ್ಲ ಮಾಮೂಲು. ಸಚಿವರು ಬಂದಾಗ ಸಲ್ಲಿಸುವ ಕಾಣಿಕೆ ಎಂದು ವಿವರಣೆ ಬಂತು. ತುಂಬಿದ ಕೋಳಿ ಮತ್ತಿತರ ವಸ್ತುಗಳನ್ನು ತೆರವು ಮಾಡಿ ಹಿಂದಿರುಗಿ ಬಂದ ಸಿದ್ದರಾಮಯ್ಯ ದೊಡ್ಡ ಮಟ್ಟದಲ್ಲಿ ಸುದ್ದಿಯಾದರು.
ಮುಂದಿನ ರಾಜಕೀಯ ಬೆಳವಣಿಗೆಗಳ ಪರಿಣಾಮ ಅವರು ಜಾತ್ಯತೀತ ಜನತಾದಳ ಆಯ್ಕೆ ಮಾಡಬೇಕಾಯಿತು. ಆ ಪಕ್ಷದ ಹಿರಿಯ ನಾಯಕ ದೇವೇಗೌಡ ಇವರಿಗೆ ಮಹತ್ವದ ಹುದ್ದೆ ನೀಡುತ್ತಾ ಬಂದರಾದರೂ ಮುಖ್ಯಮಂತ್ರಿ ಆಗುವ ಅವಕಾಶವನ್ನು ಎರಡು ಬಾರಿ ತಪ್ಪಿಸಿದರು. ತಮ್ಮದೇ ನೆಲೆ ಕಂಡುಕೊಳ್ಳದೇ ಇದ್ದಲ್ಲಿ ಅಸ್ತಿತ್ವ ಕಷ್ಟ ಎಂದು ಅವರು ಅಹಿಂದ ಸಂಘಟನೆಯ ಕೆಲಸಕ್ಕೆ ಕೈ ಹಾಕಿದರು. ಕೆಲವೇ ದಿನಗಳಲ್ಲಿ ಅಹಿಂದ ಪಡೆದ ಸ್ವರೂಪ ಮತ್ತು ಬಲ ಕಂಡ ದಳದ ನಾಯಕರು ಅವರನ್ನು ಪಕ್ಷದಿಂದ ಹೊರಹಾಕಿದರು. ಆ ಸಂದರ್ಭದಲ್ಲಿ ಕಾಂಗ್ರೆಸ್ ಸೇರ್ಪಡೆ ಅನಿವಾರ್ಯ ಆಗಿತ್ತಾದರೂ ಕೆಲವು ಷರತ್ತುಗಳ ಮೇಲೆ ಸೋನಿಯಾ ಗಾಂಧಿ ಸಮ್ಮುಖದಲ್ಲಿ ಅವರು ಕಾಂಗ್ರೆಸ್ ಸೇರಿದರು. ಮುಂದಿನ ಚುನಾವಣೆಯಲ್ಲಿ ಪಕ್ಷ ಗೆಲ್ಲಿಸಿ ಮುಖ್ಯಮಂತ್ರಿಯೂ ಆದರು.
ಅಷ್ಟು ಹೊತ್ತಿಗಾಗಲೇ ತಮ್ಮ ಜನಪ್ರಿಯ ಯೋಜನೆಗಳಿಂದಾಗಿ ಬಡವರ ಪರ ನಿಲುವು ಹೊಂದಿದ್ದಾರೆ ಎಂಬುದು ಜನಜನಿತವಾಗಿ ಸಿದ್ದರಾಮಯ್ಯ ಅವರನ್ನು ಹಿಂದಿನ ಮುಖ್ಯಮಂತ್ರಿ ದೇವರಾಜ ಅರಸ್ ಅವರಿಗೆ ಜನ ಹೋಲಿಸಲು ಆರಂಭಿಸಿದರು. ಇವರ ಜನಪ್ರಿಯತೆ ಸಹಿಸಲಾಗದ ಕಾಂಗ್ರೆಸ್‍ನೊಳಗೆ ಇದ್ದ ಕೆಲ ಹಳಬರು ಇವರನ್ನು ವಲಸೆ ಬಂದವರು ಎಂದೆಲ್ಲ ಟೀಕಿಸುತ್ತಾ ಪಕ್ಷದಲ್ಲಿಯೇ ಎರಡು ಗುಂಪು ಮೂಡಲು ಕಾರಣರಾದರು. ಇದರಿಂದಾಗಿ ನಿರೀಕ್ಷಿಸಿದ್ದ ಬಹುಮತ ಮುಂದಿನ ಚುನಾವಣೆಯಲ್ಲಿ ಗಳಿಸಲಾಗದೇ ರಾಜೀ ಸೂತ್ರದ ಪ್ರಕಾರ ಕುಮಾರಸ್ವಾಮಿ ಮುಖ್ಯಮಂತ್ರಿ ಆದರು. ನಂತರ ಕೆಲವೇ ದಿನಗಳಲ್ಲಿ ಆಪರೇಷನ್ ಕಮಲದ ಕಾರಣ ಅಧಿಕಾರ ಬಿಜೆಪಿ ಕೈ ಸೇರಿತು. ನಾಲ್ಕು ವರ್ಷಗಳ ಅಡಳಿತದ ಅವಧಿಯಲ್ಲಿ ಹಿಂದೆಂದೂ ಕಾಣದಷ್ಟು ದುರಾಡಳಿತ, ಭ್ರಷ್ಠತೆ ಕಂಡು ಈ ಬಾರಿ ನಡೆದ ಚುನಾವಣೆಯಲ್ಲಿ ಬಿಜೆಪಿಗೆ ಸರಿಯಾದ ಶಿಕ್ಷೆ ನೀಡಿದ ಮತದಾರರು, ಮರಳಿ ಸಿದ್ದರಾಮಯ್ಯ ಬೆನ್ನಿಗೆ ನಿಂತರು.
ಚುನಾವಣೆಗೆ ಮುನ್ನ ಸಿದ್ದರಾಮಯ್ಯ ಪ್ರಕಟಿಸಿದ ಉಚಿತ ಯೋಜನೆಗಳನ್ನು ಬಿಟ್ಟಿ ಭಾಗ್ಯ ಎಂದು ಟೀಕಿಸಿದ ವಿರೋಧ ಪಕ್ಷಗಳು, ಅಧಿಕಾರ ಪಡೆದು ಎಲ್ಲ ಯೋಜನೆಗಳನ್ನು ಒಂದೊಂದಾಗಿ ಜಾರಿ ಮಾಡಲು ತೊಡಗಿದಾಗ ಇದರಿಂದ ರಾಜ್ಯ ದಿವಾಳಿ ಆಗಲಿದೆ ಎಂಬ ಹುಯಿಲೆಬ್ಬಿಸಿದರು. ಇದೆಲ್ಲದರ ನಡುವೆ ಸಿದ್ದರಾಮಯ್ಯ ರಾಷ್ಟ್ರ ಮಟ್ಟದ ರಾಜಕೀಯದಲ್ಲಿ ತಮ್ಮ ಛಾಪು ಮೂಡಿಸಿ, ಬಿಜೆಪಿಗೆ ಸಿಂಹಸ್ವಪ್ನ ಆಗಿದ್ದಾರೆ ಎಂಬುದು ಸುಳ್ಳಲ್ಲ. ಸದನದಲ್ಲಿಯಾಗಲಿ, ಹೊರಗಡೆಯಾಗಲಿ ಅವರ ಮುಂದೆ ನಿಲ್ಲುವಂಥ ನಾಯಕರಾರೂ ಇಲ್ಲ. ಆದರೆ ಅವರದ್ದೇ ಪಕ್ಷದಲ್ಲಿ ಸಿಂಹಾಸನದ ಮೇಲೆ ಮುಳ್ಳುಗಳನ್ನು ಇಡುವ ಕೆಲಸ ಜೋರಿನಿಂದ ನಡೆಯುತ್ತಿದೆ. ಇಂಥ ದರಿದ್ರ ರಾಜಕೀಯದಿಂದಾಗಿಯೇ ಸಮರ್ಥ ನಾಯಕರ ಸೇವೆಯನ್ನು ಸದುಪಯೋಗ ಮಾಡಿಕೊಳ್ಳುವ ಅವಕಾಶವನ್ನು ರಾಜ್ಯ ತಪ್ಪಿಸಿಕೊಳ್ಳುತ್ತಾ ಬಂದಿದೆ.
ಈಗಿರುವ ರಾಜಕೀಯ ಸ್ಥಿತಿಯಲ್ಲಿನ ಅಪಾಯಕಾರಿ ಸಂಗತಿಗಳನ್ನು ಗಮನಿಸಿಯಾದರೂ ಕಾಂಗ್ರೆಸ್ಸಿಗರು ತಮ್ಮ ಜನನಾಯಕನಿಗೆ ಸಂಪೂರ್ಣ ಬೆಂಬಲ ನೀಡಿ ಮುಂದುವರಿದರೆ ಮಾತ್ರ ಕಾಂಗ್ರೆಸ್ ಮತ್ತು ರಾಜ್ಯ ಎರಡೂ ಬಲಗೊಳ್ಳುತ್ತವೆ. ಸ್ವಾರ್ಥ ಸಾಧನೆಯ ಬೆನ್ನು ಹತ್ತಿ ಹೊರಟರೆ ದುರ್ದೈವವನ್ನು ತಾವಾಗಿ ಆಹ್ವಾನಿಸಿದಂತೆ.
ಸಿದ್ದರಾಮಯ್ಯ ಚತುರ ಆಡಳಿತಗಾರ, ಉತ್ತಮ ವಾಗ್ಮಿ. ಯಾವುದೇ ವಿಷಯ ಕುರಿತು ಮಾತಾಡುವ ಮುಂಚೆ ಅದನ್ನು ಸಮಗ್ರವಾಗಿ ತಿಳಿದುಕೊಳ್ಳುತ್ತಾರೆ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ಜೊತೆಗೆ ಬಹುಮುಖ್ಯ ಎನಿಸಿದ ಬಡವರ ಬದುಕು ಮೇಲೆತ್ತುವ ಗುರಿ ಅವರದ್ದು. ಸರಳ ಅಂಗಿ ಮತ್ತು ಪಂಚೆ ಅವರ ಉಡುಪು. ಮಾತು ನೇರ ಆದರೆ ಕೊಂಕಿಲ್ಲ. ಎಲ್ಲರೊಡನೆ ಬೆರೆಯುವ ಸ್ವಭಾವ, ಹೀಗಾಗಿ ಹೇಳಿಕೊಳ್ಳುವಂಥ ವಿರೋಧಿಗಳು ಕಡಿಮೆ. ಹದಿನಾಲ್ಕು ಬಾರಿ ರಾಜ್ಯವೊಂದರ ಮುಂಗಡಪತ್ರ ಮಂಡಿಸಿ ದಾಖಲೆ ಸ್ಥಾಪಿಸಿದ ಅವರೀಗ ಜ್ಯೋತಿ ಬಸು, ಎನ್.ಟಿ.ಆರ್, ಕರುಣಾನಿಧಿ ಅವರಂಥ ಅತೀ ಹಿರಿಯರ ಸಾಲಿಗೆ ಸೇರುತ್ತಾರೆ. ಎಲ್ಲಿಯೂ ಹೆಸರು ಕೆಡಿಸಿಕೊಳ್ಳದ ಸಿದ್ದರಾಮಯ್ಯ ಅವರನ್ನು ಟೀಕಿಸಲು ವಿರೋಧ ಪಕ್ಷಗಳ ನಾಯಕರು ಹಿಂಜರಿಯುವುದರಲ್ಲಿ ಅರ್ಥ ಇದೆ.
ಇವರು ಇರಲಿ, ಅಂದುಕೊಂಡದ್ದು ಸಾಧಿಸಲಿ, ರಾಜ್ಯಕ್ಕೆ ಒಳ್ಳೆಯದು ಮಾಡಲಿ -ಎ.ಬಿ.ಧಾರವಾಡಕರ