ಬೆಂಗಳೂರು: ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬೆಂಗಳೂರಿನ ಅನೇಕ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಿದ್ದರು. ಅಲ್ಲದೇ ಡಾಂಬರೀಕರಣ ಕೂಡ ಮಾಡಿದ್ದರು. ಆದರೆ ಅವರು ಹೋದ ನಂತರ ರಸ್ತೆ ಕಿತ್ತು ಹೋಗಿತ್ತು.
ಈಗಲೂ ಅಷ್ಟೇ ತರಾತುರಿಯಲ್ಲಿ ರಸ್ತೆ ಮಾಡುತ್ತಿದ್ದಾರೆ, ಗುಂಡಿ ಮುಚ್ಚುತ್ತಿದ್ದಾರೆ, ಮೋದಿ ಬಂದು ಹೋದ ಮೇಲೆ ರಸ್ತೆ ಕಿತ್ತೋಗಲಿದೆ ಎಂಬುದಾಗಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಬಿಜೆಪಿ ಸರ್ಕಾರಕ್ಕೆ ಬೆಂಗಳೂರಿನಲ್ಲಿನ ರಸ್ತೆ ಗುಂಡಿ ಮುಚ್ಚುವ ಯೋಗ್ಯತೆ ಇಲ್ಲ. ತರಾತುರಿಯಲ್ಲಿ ಪ್ರಧಾನಿ ಮೋದಿ ಬರ್ತಾ ಇದ್ದಾರೆ ಅಂತ ಈಗ ಗುಂಡಿ ಮುಚ್ಚುತ್ತಿದ್ದಾರೆ. ರಸ್ತೆಗಳಿಗೆ ಡಾಂಬಾರೀಕರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಕೋರ್ಟ ಛೀಮಾರಿ ಹಾಕಿದ ಮೇಲೆ ಗುಂಡಿ ಮುಚ್ಚುವ ಕೆಲಸ ಮಾಡಿದ್ದ ರಾಜ್ಯ ಸರ್ಕಾರ, ಈಗ ಮೋದಿ ಕಾರ್ಯಕ್ರಮಕ್ಕೆ ಡಾಂಬರೀಕರಣ, ರಸ್ತೆ ಗುಂಡಿ ಮುಚ್ಚುವ ಕೆಲಸ ಮಾಡುತ್ತಿದೆ. ಆದರೆ ಮೋದಿ ಹೋದ ಮೇಲೆ ಕಿತ್ತು ಹೋಗಲಿದೆ ಎಂಬುದಾಗಿ ವ್ಯಂಗ್ಯವಾಡಿದರು.