ಚುನಾವಣೆ ಎಂಬ ಸೋಜಿಗ!

A B Dharwadkar
ಚುನಾವಣೆ ಎಂಬ ಸೋಜಿಗ!
Latest news isolated icon, megaphone or bullhorn, breaking report vector. Info announcement and TV or radio broadcast, web article, loudspeaker. Daily headline emblem or logo, message or advertising

ಈ ದೇಶದಲ್ಲಿ ಪ್ರಜಾಪ್ರಭುತ್ವ ಸಫಲ ಆಗುವುದಿಲ್ಲ ಎಂದು ಪಾಶ್ಚಿಮಾತ್ಯ ದೇಶಗಳ ಪಂಡಿತರು ಹೇಳಿದ್ದರು. ಇಲ್ಲಿ ಅನಕ್ಷರತೆ ಇದೆ, ಹಾಗಾಗಿ ಜನರಿಗೆ ಮತ ಚಲಾಯಿಸುವ ವಿಚಾರ ಅರ್ಥ ಆಗುವುದಿಲ್ಲ ಎಂದು ಅವರ ತರ್ಕ. ನಮ್ಮದೇ ಜನ ದೇಶದಲ್ಲಿ ಕಾಂಗ್ರೆಸ್ಸೇತರ ಸರ್ಕಾರ ಬರುವುದಿಲ್ಲ ಎಂದು 1977ರ ವರೆಗೂ ಅಂದುಕೊಂಡಿದ್ದರು. ಇದಾದ ನಂತರ ಬಿಜೆಪಿ ಕೇಂದ್ರದಲ್ಲಿ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯುವುದು ಸಾಧ್ಯ ಇಲ್ಲ ಎಂದು 2019ರ ವರೆಗೂ ನಂಬಲಾಗಿತ್ತು. ಈ ಎಲ್ಲ ತರ್ಕ, ಊಹೆಗಳನ್ನು ಸುಳ್ಳು ಮಾಡಿದ್ದು ನಮ್ಮ ಚುನಾವಣೆ ಫಲಿತಾಂಶಗಳು. ಹೀಗಾಗಿಯೇ ನಮ್ಮಲ್ಲಿ ನಡೆಯುವ ಚುನಾವಣೆಗಳೇ ಒಂದು ಸೋಜಿಗ. ಅತ್ಯಂತ ಜೀವಂತ ಪ್ರಜಾಪ್ರಭುತ್ವ ಇಲ್ಲಿ ಕಾಣಬಹುದು ಎಂದು ವಿಶ್ವದ ಜಾಣರು ಈ ಹೊತ್ತು ಹೇಳುತ್ತಿದ್ದಾರೆ.

ಇದೀಗ ತಾನೆ ಎರಡು ರಾಜ್ಯಗಳ ವಿಧಾನಸಭೆ ಚುನಾವಣೆಗಳು ಮುಗಿದು ಫಲತಾಂಶ ಬಂದಿದೆ. ದೆಹಲಿ ಮಹಾನಗರಪಾಲಿಕೆ ಚುನಾವಣೆ ಕೂಡ ಮುಗಿದು ಫಲಿತಾಂಶ ಬಂದಾಗಿದೆ. ಈ ಹಿನ್ನೆಲೆಯಲ್ಲಿ ಈ ಚುನಾವಣೆಗಳ ಮಹತ್ವ ಗಮನಿಸಬೇಕು. ಗುಜರಾತ್ ಬಿಜೆಪಿ ಪಾಲಾಯಿತು, ಹಿಮಾಚಲ ಕಾಂಗ್ರೆಸ್ ತೆಕ್ಕೆಗೆ ಸಿಕ್ಕಿತು ಮತ್ತು ದೆಹಲಿ ಮಹಾನಗರಪಾಲಿಕೆಯು ಆಮ್ ಆದ್ಮಿ ಪಕ್ಷದ ಪಾಲಾಗಿದೆ. ಒಂದು ರೀತಿಯಲ್ಲಿ ಮೂರೂ ವಿಭಿನ್ನ ರೀತಿಯ ಸಂದೇಶವನ್ನು ನೀಡಿವೆ. ಆದರೆ ಸಂದೇಶ ಗಮನಿಸುವ ವ್ಯವಧಾನ ಈಗ ಯಾರಿಗೂ ಇಲ್ಲ. ಎಲ್ಲ ತಮ್ಮ ತಮ್ಮ ಲಾಭದ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅಧಿಕಾರದ ವಿಚಾರದಲ್ಲಿ ಮಹತ್ವದ ಬದಲಾವಣೆಗಳು ಆಗಿವೆ. ಎರಡು ಬಾರಿ ಕೇಂದ್ರದಲ್ಲಿ ಅಧಿಕಾರ ಗಳಿಸಿಕೊಂಡರೂ, ರಾಜ್ಯಗಳಲ್ಲಿ ನೇರವಾಗಿ ಚುನಾವಣೆಗಳಲ್ಲಿ ಗೆದ್ದು ಬರುವುದು ಬಿಜೆಪಿಗೆ ಸಾಧ್ಯ ಆಗಲೇ ಇಲ್ಲ ಎನ್ನುವುದನ್ನು ಗಮನಿಸಬೇಕು. ಕೇವಲ ಗುಜರಾತ್ ಮತ್ತು ಉತ್ತರ ಪ್ರದೇಶದಲ್ಲಿ ಮಾತ್ರ ಬಿಜೆಪಿಗೆ ಜನ ಬಹುಮತ ನೀಡಿದ್ದಾರೆ. ಗುಜರಾತ್‍ನಲ್ಲಿ ಮೋದಿ, ಉತ್ತರ ಪ್ರದೇಶದಲ್ಲಿ ಯೋಗಿ ವರ್ಚಸ್ಸಿನಿಂದ ಇದು ಸಾಧ್ಯ ಆಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಉಳಿದ ಕಡೆಗಳಲ್ಲಿ ಬಿಜೆಪಿಯ ವರ್ಚಸ್ಸು ಕಾಣುತ್ತಿಲ್ಲ. ರಾಜಧಾನಿ ದೆಹಲಿಯಲ್ಲಿಯೇ ಬಿಜೆಪಿ ಅಧಿಕಾರ ಹಿಡಿಯುವುದು ಸಾಧ್ಯ ಆಗಿಲ್ಲ. ಅಲ್ಲಿ ಅಧಿಕಾರದಲ್ಲಿ ಇರುವ ಪಕ್ಷಕ್ಕೆ ತನ್ನಿಂದ ಸಾಧ್ಯ ಇರುವ ಎಲ್ಲ ಕಿರುಕುಳ ನೀಡಿಯೂ, ಆ ಪಕ್ಷದ ಉತ್ತಮ ಆಡಳಿತ ಮತ್ತು ಜನಮನ್ನಣೆ ತಪ್ಪಿಸಲು ಬಿಜೆಪಿಗೆ ಸಾಧ್ಯ ಆಗಿಲ್ಲ. ಉಳಿದ ಕಡೆ ಕುದುರೆ ವ್ಯಾಪಾರ ಸಲೀಸಾಗಿ ನಡೆದು ಬಿಡುತ್ತದೆ, ಹಾಗಾಗಿಯೇ ಇಂದು ಬಹುಪಾಲು ಕಡೆ ಬಿಜೆಪಿ ಸರ್ಕಾರಗಳು ಇವೆ.

ಇಷ್ಟಾದರೂ ವಿಂಧ್ಯದ ಕೆಳಗಿನ ರಾಜ್ಯಗಳಲ್ಲಿ ಬಿಜೆಪಿ ಆಟ ನಡೆಯುತ್ತಿಲ್ಲ, ಕರ್ನಾಟಕ ಒಂದು ಅದಕ್ಕೆ ವಿನಾಯತಿ. ಮಹಾರಾಷ್ಟ್ರವನ್ನೇನೋ ಬುಟ್ಟಿಗೆ ಹಾಕಿಕೊಂಡಂತೆ ಕಾಣುತ್ತಿದೆಯಾದರೂ ಅದು ಬಹುಕಾಲ ಬಿಜೆಪಿಯ ತೆಕ್ಕೆಯಲ್ಲಿ ಉಳಿಯುವ ಲಕ್ಷಣ ಕಾಣುತ್ತಿಲ್ಲ. ಇನ್ನು ಕೇರಳ, ತಮಿಳುನಾಡು, ತೆಲಂಗಾಣ, ಆಂಧ್ರ, ಬಿಹಾರ, ಒಡಿಸ್ಸಾ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಸದ್ಯಕ್ಕೆ ಬಿಜೆಪಿಗೆ ಒಲಿಯುವ ಹಾಗೆ ಕಾಣುತ್ತಿಲ್ಲ. ಉಳಿದ ಬಹುಪಾಲು ರಾಜ್ಯಗಳ ಸಂಸತ್ ಸದಸ್ಯರ ಸಂಖ್ಯೆ ಭಾರೀ ಏನಲ್ಲ. ಇಂಥ ಸನ್ನಿವೇಶದಲ್ಲಿ ಮುಂದೆ ಬರುವ ಸಂಸತ್ ಚುನಾವಣೆಯಲ್ಲಿ ಬಿಜೆಪಿ ಪಾಲಿಗೆ ಆಶಯ ಕಿರಣಗಳೇನೂ ಕಾಣುತ್ತಿಲ್ಲ. ಹಾಗೆಂದು ವಿವಿಧ ಪಕ್ಷಗಳು ಮೇಲುಗೈ ಸಾಧಿಸುತ್ತವೆ ಎಂದೂ ಸಹ ಹೇಳಲು ಬರುವುದಿಲ್ಲ. ತನ್ನನ್ನು ಬಿಟ್ಟರೆ ಇನ್ಯಾರೂ ಮುಂದಿನ ಪ್ರಧಾನಿ ಇಲ್ಲ ಎಂದು ಬೀಗುತ್ತಿರುವ ಕೆಸಿಆರ್, ಮಮತಾ ಮತ್ತು ನಿತೀಶಕುಮಾರ ಅವರುಗಳನ್ನು ನೋಡಿದರೆ, ಇವರ್ಯಾರೂ ಒಂದುಗೂಡಿ ನಡೆಯುವ ಲಕ್ಷಣ ಕಾಣುತ್ತಿಲ್ಲ. ನಾಳೆ ಲೋಕಸಭೆಯಲ್ಲಿ ಬಿಜೆಪಿಗೆ ಬಹುಮತ ಬರದೇ ಹೋದರೂ ಸಹ ಯಾವುದಾದರೊಂದು ಪ್ರಮುಖ ಪ್ರಾದೇಶಿಕ ಪಕ್ಷವನ್ನು ಒಲಿಸಿಕೊಂಡು ಮತ್ತೆ ಗದ್ದುಗೆಗೆ ಅಂಟಿ ಉಳಿಯುವುದು ಬಿಜೆಪಿಗೆ ಸಾಧ್ಯ ಇದೆ. ಮಾಧ್ಯಮ ಲೋಕವನ್ನೇ ಖರೀದಿಸಿ ಬಾಯಿ ಮುಚ್ಚಿಸುವ ಬಲ ಇರುವ ಪಕ್ಷವೊಂದು ರಾಜಕೀಯವನ್ನೂ ಒಂದು ಕುತಂತ್ರ ಮತ್ತು ವ್ಯಾಪಾರದ ಅಡ್ಡೆ ಆಗಿ ಮಾಡಿದೆ ಎಂಬುದಂತೂ ನಿಜ. ಹೀಗಾಗಿಯೇ ಇಲ್ಲಿ ಚುನಾವಣೆಯಲ್ಲಿ ಏನೇ ಸೋಜಿಗ ನಡೆದರೂ ಅದನ್ನು ತನ್ನ ಪರ ತಿರುಗಿಸಿಕೊಳ್ಳುವ ಚಾಲಾಕಿತನ ಬಿಜೆಪಿಗೆ ಇರುವುದರಿಂದ ಸದ್ಯ ಬದಲಾವಣೆ ಇಲ್ಲಿ ಮರೀಚಿಕೆ.

-ಸಂಪಾದಕ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.