ಬೆಂಗಳೂರು – 23 ಅಗಸ್ಟ, 2023 ಭಾರತದ ಪಾಲಿಗೆ ಅವಿಸ್ಮರಣೀಯ ದಿನ, ಸತತ 15 ವರ್ಷಗಳ ಕಾಲ ನಮ್ಮ ದೇಶದ ವಿಜ್ಞಾನಿಗಳ ಪರಿಶ್ರಮಕ್ಕೆ ಫಲ ದೊರೆತ ದಿನ, ಭಾರತೀಯ ವಿಜ್ಞಾನಿಗಳ ಸಾಮರ್ಥ್ಯ ಕಂಡು ಜಗತ್ತೇ ಬೆರಗಾದ ದಿನ, ಚಂದ್ರನ ಮೇಲೆ ಇಸ್ರೋದ ಮಹಾತ್ವಾಕಾಂಕ್ಷೆಯ ಬಾಹ್ಯಾಕಾಶ ನೌಕೆ ಇಳಿದ ದಿನ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ ಮೂರನೇ ಪ್ರಯತ್ನ ಚಂದ್ರಯಾನ-3ರ ವಿಕ್ರಮ ಲ್ಯಾಂಡರ್ ಬುಧವಾರ ಸಂಜೆ ಸುಮಾರು 6.04 ಕ್ಕೆ ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಇಳಿದು ಜಗತ್ತನ್ನು ಮಂತ್ರಮುಗ್ಧ ಮಾಡಿತು.
ಜುಲೈ 14ರಂದು ಉಡಾವಣೆಗೊಂಡಿದ್ದ ಚಂದ್ರಯಾನ 3 ಬುಧವಾರ ಸಂಜೆ 6.04ಕ್ಕೆ ಸರಿಯಾಗಿ ಚಂದ್ರನ ಮೇಲ್ಮೈ ಮೇಲೆ ಯಶಸ್ವಿಯಾಗಿ ಇಳಿಯಿತು. ಈ ಸಾಧನೆ ಮಾಡಿದ ರಶಿಯಾ, ಅಮೇರಿಕಾ ಹಾಗು ಚೀನಾ ನಂತರ ಭಾರತ ಜಗತ್ತಿನ ನಾಲ್ಕನೇ ರಾಷ್ಟ್ರ ಆಗಿದೆ. ಅಲ್ಲದೇ ಚಂದ್ರನ ದಕ್ಷಿಣ ಧ್ರುವದ ಮೇಲೆ ಬಾಹ್ಯಾಕಾಶ ನೌಕೆಯನ್ನು ಸುಸೂತ್ರವಾಗಿ ಇಳಿಸಿದ ಮೊದಲ ದೇಶ ಭಾರತ ಎಂಬ ಹೆಗ್ಗಳಿಕೆಗೂ ಭಾರತ ಪಾತ್ರ ಆಗಿದೆ.
ವೇಗವನ್ನು ಕಡಿಮೆ ಮಾಡಲು ನಾಲ್ಕು ಥ್ರಸ್ಟರ್ ಎಂಜಿನ್ಗಳ ರೆಟ್ರೊ ಫೈರಿಂಗ್ನೊಂದಿಗೆ ವಿಕ್ರಮ್ ಲ್ಯಾಂಡರ್ನ ಚಾಲಿತ ಬ್ರೇಕಿಂಗ್ ಪ್ರಾರಂಭವಾಯಿತು. ನಂತರ ಕೊನೆಯ 17 ನಿಮಿಷಗಳು ಕಠಿಣ ಸವಾಲು ಎಂದು ವಿಜ್ಞಾನಿಗಳು ಹೇಳಿದ್ದರು. ಭಾರತಕ್ಕೂ ಮುನ್ನ ಕೇವಲ ಮೂರು ಇತರ ದೇಶಗಳು (ರಶಿಯಾ, ಚೀನಾ ಮತ್ತು ಅಮೇರಿಕ) ಯಶಸ್ವಿಯಾಗಿ ಚಂದ್ರನ ಮೇಲೆ ರೋವರ್ ಇಳಿಸಿವೆ. ಈ ಕೌತುಕದ ಕ್ಷಣವನ್ನು ಇಡೀ ವಿಶ್ವವೇ ಬೆರಗುಗಣ್ಣಿನಿಂದ ನೋಡುತ್ತಿತ್ತು.ಲ್ಯಾಂಡರ್ ವಿಕ್ರಮ್ ಸ್ವಯಂಚಾಲಿತ ಕ್ರಮದಲ್ಲಿ ಚಂದ್ರನ ಕಕ್ಷೆಗೆ ಇಳಿಯಿತು. ಈ ಐತಿಹಾಸಿಕ ಕ್ಷಣವನ್ನು ಕೋಟ್ಯಾಂತರ ಭಾರತೀಯರು ವೀಕ್ಷಿಸಿದರು.
ಎಲ್ ವಿಎಂ ಮಾರ್ಕ್-3 ರಾಕೆಟ್ 2023ರ ಜುಲೈ 14ರಂದು ಉಡಾವಣೆಗೊಂಡಿತ್ತು. ಭೂಮಿಯಿಂದ 3.84 ಲಕ್ಷ ಕಿ.ಮೀ. ದೂರ ಇರುವ ಚಂದ್ರನ ಸಮೀಪಕ್ಕೆ ತೆರಳಲು ವಿಕ್ರಮ್ ಲ್ಯಾಂಡರ್ 45 ದಿನಗಳ ಪ್ರಯಾಣ ಮಾಡಿದೆ. ಚಂದ್ರನ ದಕ್ಷಿಣ ಧ್ರುವವನ್ನು ಚಂದ್ರಯಾನ 3ಕ್ಕೆ ಇಳಿಯುವ ಸ್ಥಳವಾಗಿ ನಿಗದಿಪಡಿಸಲಾಗಿತ್ತು. ಇದು ಶಾಶ್ವತ ನೆರಳಿನ ಪ್ರದೇಶವಾಗಿದ್ದು, ಇಲ್ಲಿ ಸಂಪನ್ಮೂಲಗಳು ಸಮೃದ್ಧವಾಗಿವೆ. ಭವಿಷ್ಯದಲ್ಲಿ ಮಾನವಸಹಿತ ಕಾರ್ಯಾಚರಣೆಗಳಿಗೆ ಸೂಕ್ತವಾದ ಲ್ಯಾಂಡಿಂಗ್ ಸೈಟಗಳನ್ನು ನೀಡಬಹುದು ಎಂದು ವಿಜ್ಞಾನಿಗಳು ನಂಬಿದ್ದಾರೆ.
ವಿಕ್ರಮ್ ಲ್ಯಾಂಡರ್ ಚಂದ್ರನ ಈ ಪ್ರದೇಶದಲ್ಲಿ ಮೊದಲ ಬಾರಿಗೆ ಇಳಿಯುವ ಮೂಲಕ ಇತಿಹಾಸ ನಿರ್ಮಿಸಿದ್ದು ಲ್ಯಾಂಡರ್ ಮತ್ತು ರೋವರ್ ಒಂದು ಚಂದ್ರನ ದಿನದ (14 ಭೂಮಿಯ ದಿನಗಳು) ಮಿಷನ್ ಜೀವನವನ್ನು ಹೊಂದಿದೆ. ಈ ಸಮಯದಲ್ಲಿ ಅದು ಆನ್-ಸೈಟ್ ಪ್ರಯೋಗಗಳನ್ನು ನಡೆಸುತ್ತದೆ.
15 ವರ್ಷಗಳ ಹಿಂದೆ ಆರಂಭವಾದ ಚಂದ್ರಯಾನ 1 ಮಿಷನ್:
2008ರ ನವೆಂಬರ್ 14ರ ದಿನವನ್ನು ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವ ದಿನ. ಆ ದಿನ ಇಸ್ರೋ ಕಚೇರಿಯಲ್ಲಿ ಸಂಭ್ರಮ ಸಡಗರ ಮನೆ ಮಾಡಿತ್ತು. ಇದಕ್ಕೆ ಮುಖ್ಯ ಕಾರಣ, ಇಸ್ರೋ ಬಾಹ್ಯಾಕಾಶ ನೌಕೆ ಚಂದ್ರಯಾನ 1 ಮಿಷನ್ ಅನ್ನು ಎಂಟು ದಿನಗಳ ನಂತರ, ಅಂದರೆ 22 ನವೆಂಬರ್ 2008 ರಂದು ಚಂದ್ರನ ಮೇಲ್ಮೈಗೆ ಇಳಿಸಲು ನಡೆದಿದ್ದ ಸಿದ್ಧತೆ. ಭಾರತದ ಆ ಚಂದ್ರನ ಕಾರ್ಯಾಚರಣೆಗೆ ಚಂದ್ರಯಾನ 1 ಎಂದು ಹೆಸರಿಸಲಾಯಿತು. ಗಮನಾರ್ಹವಾಗಿ, ಆ ಬಾಹ್ಯಾಕಾಶ ನೌಕೆಯು ಚಂದ್ರನ ಮೇಲ್ಮೈಯಲ್ಲಿ ನೀರು ಇರುವುದನ್ನು ಕಂಡು ಹಿಡಿದಿತ್ತು. ಮತ್ತೊಂದು ಪ್ರಮುಖ ಸಂಗತಿ ಎಂದರೆ ಆಗ ಚಂದ್ರನ ಮೇಲ್ಮೈ ಮೇಲೆ ಶೋಧ ನಡೆಸಿದ ಐದನೇ ದೇಶ ಭಾರತ ಎಂಬ ಹೆಗ್ಗಳಿಕೆಗೂ ಇದು ಕಾರಣವಾಗಿದೆ. ಈ ಬಾಹ್ಯಾಕಾಶ ನೌಕೆಯಲ್ಲಿ 32 ಕೆ.ಜಿ ತೂಕದ ಶೋಧಕವಿದ್ದು, ಇಸ್ರೋ ಇದನ್ನು ಮೂನ್ ಇಂಪ್ಯಾಕ್ಟ್ ಪ್ರೋಬ್ ಎಂದು ಹೆಸರಿಸಿತ್ತು.
ಚಂದ್ರಯಾನ-2ರಲ್ಲಿ ಕೊನೆ ಘಳಿಗೆಯಲ್ಲಿ ಲ್ಯಾಂಡರ್ ನೆಲಕ್ಕೆ ಅಪ್ಪಳಿಸಿತ್ತು. ಆಗ ಕೆಲವು ಸನ್ನಿವೇಶಗಳನ್ನು ನಿಭಾಯಿಸಲು ಆಗಲಿಲ್ಲ. ಈ ಬಾರಿ ಎದುರಾಗಬಹುದಾದ ಎಲ್ಲ ರೀತಿಯ ಸವಾಲುಗಳನ್ನು ಮುಂಚಿತವಾಗಿ ಗ್ರಹಿಸಿಯೇ ಅದಕ್ಕೆ ಪರಿಹಾರೋಪಾಯಗಳನ್ನು ಉಪಕರಣಗಳ ಮೂಲಕ ಅಡಕಗೊಳಿಸಲಾಗಿತ್ತು. ಅವು ಎದುರಾಗಬಹುದಾದ ಸವಾಲುಗಳನ್ನು ಗ್ರಹಿಸಿ ಅವುಗಳನ್ನು ನಿವಾರಿಸಿಕೊಂಡಿವೆ.