ಬೆಳಗಾವಿ : ಹಿಂದೆಂದೂ ಕೇಳಲರಿಯದ ದಾಖಲೆ ನಿರ್ಮಿಸಿದ ಈ ವರ್ಷದ ಕರ್ನಾಟಕ ರಾಜ್ಯೋತ್ಸವಕ್ಕೆ ಆಗಮಿಸಿದ್ದವರಿಗೆ ಹೊಟ್ಟೆ ತುಂಬಾ ಹೋಳಿಗೆಯ ಊಟ ಬಡಿಸಿದ್ದ ಹುಕ್ಕೇರಿ ಹಿರೇಮಠದ ಶ್ರೀ ಶಿವಾಚಾರ್ಯ ಸ್ವಾಮಿಗಳು ಇಂದು ಬುಧವಾರ ಬೆಳಕು ಹರಿಯುತ್ತಿದಂತೇ ಉಣಬಡಿಸಿದ್ದ ಸರದಾರ ಮೈದಾನಕ್ಕೆ ಬಂದು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿ ತಮ್ಮ ಸಾಮಾಜಿಕ ಜವಾಬ್ದಾರಿ ಮೆರೆದರು.
ಒಪ್ಪೋತ್ತಿನ ಊಟ ಮಾಡುವ ಲೆಕ್ಕದಲ್ಲಿ ಸುಮಾರು ಒಂದು ಲಕ್ಷ ಜನರಿಗೆ ಸಾಕಾಗುವಷ್ಟು ಆಹಾರವನ್ನು ಹಿರೇಮಠ ಸಿದ್ದಪಡಿಸಿತ್ತು. ಬೆಳಿಗ್ಗೆ 11 ಗಂಟೆಯಿಂದ ಆರಂಭವಾದ ದಾಸೋಹ ರಾತ್ರಿ 11 ಗಂಟೆಯವರೆಗೂ ಮುಂದುವರೆದಿತ್ತು.
ಯಾವುದೇ ಹೊತ್ತಿಗೆ ಊಟಕ್ಕೆ ತೆರಳಿದರೂ ಕ್ಯೂನಲ್ಲಿ ನಿಂತ ಐದೇ ನಿಮಿಷದಲ್ಲಿ ಆಹಾರ ತುಂಬಿದ ತಟ್ಟೆ ಕೈಯಲ್ಲಿರುತ್ತಿತು. ಹೋಳಿಗೆ, ಪಲ್ಯ ಹೊರತು ನೀಡಿದ್ದ ಅನ್ನ, ಕಟ್ಟಿನ ಸಾರು ಆಗಷ್ಟೇ ತಯಾರಿಸಿದಂತೆ ಬಿಸಿ ಮತ್ತು ತಾಜಾವಾಗಿತ್ತು. ಆಲೂಗಡ್ಡೆ ಮತ್ತು ಬದನೇಕಾಯಿ ಸೇರಿ ಮಾಡಿದ್ದ ತರಕಾರಿ ಮಿಶ್ರಣ ಹೋಳಿಗೆ ಊಟಕ್ಕೆ ಹೇಳಿ ಮಾಡಿಸಿದಂತಿತ್ತು.
ವಿಶಾಲವಾದ ಮೈದಾನದಲ್ಲಿ ಕುಟುಂಬ ಸಹಿತವಾಗಿ ಬಂದವರು ಮಕ್ಕಳೊಂದಿಗೆ ಪಿಕ್ ನಿಕ್ ಗೆ ಬಂದವರೋ ಎಂಬಂತೆ ಸ್ಥಳ ಸಿಕ್ಕಲ್ಲೇ ಕುಳಿತು ಊಟ ಮಾಡಿ ಹತ್ತಿರದಲ್ಲಿದ್ದ ಕಸದ ಪೆಟ್ಟಿಗೆಯಲ್ಲಿ ತಟ್ಟೆಗಳನ್ನು ಹಾಕಿ ತೃಪ್ತಿಯಿಂದ ತೆರಳಿದರು.
ಒಬ್ಬರಿಗೆ ಎರಡು ಹೋಳಿಗೆ ಲೆಕ್ಕದಲ್ಲಿ ಒಂದು ಲಕ್ಷ ಜನರಿಗೆ ಎರಡು ಲಕ್ಷ ಹೋಳಿಗೆ, ಉತ್ತಮ ದರ್ಜೆಯ ಅಕ್ಕಿಯಿಂದ ತಯಾರಿಸಿದ್ದ ಅನ್ನ ಜೊತೆ ಇತರ ಪದಾರ್ಥಗಳನ್ನು ಜನ ಆಸ್ಥೆಯಿಂದ ಸೇವಿಸಿದ್ದಾರೆ. ಮನೆಗಳಲ್ಲಿ ಊಟ ಮಾಡಿ ಬಂದವರೂ ಹೋಳಿಗೆ ಊಟದ ಟೇಸ್ಟ್ ಮಾಡಬೇಕೆಂದು ಸಂಜೆ ಊಟ ಸೇವಿಸಿದ್ದಾರೆ. ಊಟದ ನಂತರದ ಅವರ ಸಂತುಷ್ಟಿ ನನಗೆ ತೃಪ್ತಿ ತಂದಿದೆ ಎಂದು ಶಿವಾಚಾರ್ಯ ಸ್ವಾಮೀಜಿಗಳು ಸಮದರ್ಶಿಗೆ ತಿಳಿಸಿದರು.
ಬುಧವಾರ ಮುಂಜಾನೆ ಮೈದಾನಕ್ಕೆ ಬಂದಿದ್ದ ಶಿವಾಚಾರ್ಯ ಸ್ವಾಮೀಜಿಗಳು ಸಂಪೂರ್ಣ ಮೈದಾನವನ್ನು ಮಹಾನಗರ ಪಾಲಿಕೆಯ ಸ್ವಚ್ಛತಾ ಸಿಬ್ಬಂದಿಗಳು ಸ್ವಚ್ಛಗೊಳಿಸಿ ಮಾದರಿಯಾದರು.