ಬೆಳಗಾವಿ : ಸಾರ್ವಜನಿಕ ಕಾಮಗಾರಿಗಳ ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಮೇಲೆ ಮಾಡಲಾಗಿರುವ ಕಮೀಷನ್ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳು ಇಲ್ಲವೆಂದು ಉಡುಪಿ ಪೊಲೀಸರು ಸಲ್ಲಿಕೆ ಮಾಡಿದ್ದ ಬಿ ರಿಪೋರ್ಟ ಅನ್ನು ಜನಪ್ರತಿನಿಧಿಗಳ ನ್ಯಾಯಾಲಯವು ಅಂಗೀಕರಿಸಿದೆ. ಇದರಿಂದ ಈಶ್ವರಪ್ಪ ಅವರಿಗೆ ತಾತ್ಕಾಲಿಕ ರಿಲೀಫ್ ದೊರೆತಿದೆಯಾದರೂ ಮೃತ ಸಂತೋಷ ಪಾಟೀಲ ಅವರ ಕುಟುಂಬ ಉಡುಪಿ ಪೋಲೀಸರ ಬಿ ರಿಪೋರ್ಟ್ ಮತ್ತು ಜನಪ್ರತಿನಿಧಿಗಳ ನ್ಯಾಯಾಲಯದ ಆದೇಶವನ್ನು ಜನಪ್ರತಿನಿಧಿಗಳ ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸಲಿದೆ.
ಈಶ್ವರಪ್ಪ ಪರ ಶನಿವಾರ ನ್ಯಾಯಾಲಯ ನೀಡಿರುವ ಆದೇಶವನ್ನು ಪ್ರಶ್ನಿಸಿ ಮೃತ ಗುತ್ತಿಗೆದಾರ ಸಂತೋಷ ಪಾಟೀಲ ಅವರ ಸಹೋದರ ಪ್ರಶಾಂತ ಪಾಟೀಲ ಅವರು ಸಮದರ್ಶಿಯೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. “ಪೋಲೀಸರ ನೆರವಿನಿಂದ ಈಶ್ವರಪ್ಪ ನ್ಯಾಯಾಲಯದಿಂದ ನಿರಪರಾಧಿ ಎಂದು ತೀರ್ಮಾನಿಸಲ್ಪಟ್ಟಿದ್ದಾರೆ. ಪೊಲೀಸರು ಅನೇಕ ಸಾಕ್ಷಿ ಪುರಾವೆಗಳನ್ನು ನ್ಯಾಯಾಲಯದಲ್ಲಿ ಸಲ್ಲಿಸಿಲ್ಲ” ಎಂದು ಆರೋಪಿಸಿದ್ದಾರೆ.
“ನನ್ನ ಸಹೋದರ ಸಂತೋಷ ಉಡುಪಿಯ ಶಂಭಾವಿ ಹೊಟೇಲಿನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಾಗ ಪೊಲೀಸರು ದೂರವಾಣಿ ಮಾಡಿ ನನಗೆ ತಿಳಿಸಿದರು. ಅದರಂತೆ ನಾನು ಉಡುಪಿಗೆ ತೆರಳಿ ಪೋಲೀಸರ ಪಂಚನಾಮೆಗೆ ಸಹಕರಿಸಿದೆ. ಸಂತೋಷ ವಾಸ್ತವ್ಯ ಹೂಡಿದ್ದ ಕೊನೆಯ ಅಂತಸ್ತಿನ ಪ್ಯಾಸೇಜನಲ್ಲಿ 5 ಸಿಸಿಟಿವಿ ಕ್ಯಾಮೆರಾಗಳಿದ್ದವು. ಪೊಲೀಸರು ಮೃತದೇಹದ ಪಂಚನಾಮೆ ಮಾಡುವಾಗ ಮಾಡಿಕೊಂಡ ವಿಡಿಯೋದಲ್ಲಿ ಇದೆಲ್ಲ ದಾಖಲಾಗಿದೆ. ಆದರೆ ಉಡುಪಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಸಾಕ್ಷಿ, ಪುರಾವೆಗಳಲ್ಲಿ ಕೇವಲ ಒಂದೇ ಕ್ಯಾಮೆರಾದ ಫುಟೇಜ್ ಮಾತ್ರ ನೀಡಿದ್ದಾರೆ. ನೀಡಿರುವ ಕ್ಯಾಮೆರಾದ ಫುಟೇಜನಲ್ಲಿ ಸಂತೋಷ ತಂಗಿದ್ದ ರೂಮಿನ ಕುರಿತು ಯಾವುದೇ ದೃಶ್ಯಗಳಿಲ್ಲ” ಎಂದು ಅವರು ತಿಳಿಸಿದರು.
ಸಂತೋಷ ತಾವು ಆತ್ಮಹತ್ಯೆ ಮಾಡಿಕೊಳ್ಳಲು ಸಚಿವ ಈಶ್ವರಪ್ಪ ಅವರೇ ಕಾರಣವೆಂದು ಕಾಗದದಲ್ಲಿ ಮತ್ತು ತಮ್ಮ ಮೊಬೈಲ್ ನಲ್ಲಿ ‘ಮರಣ ಪತ್ರ’ (ಡೆತ್ ನೋಟ್) ಬರೆದಿಟ್ಟಿದ್ದರು. ಆದರೆ ಪೊಲೀಸರು ಕಾಗದದಲ್ಲಿ ಬರೆದಿಟ್ಟಿದ್ದ ಪತ್ರ ನ್ಯಾಯಾಲಯಕ್ಕೆ ಸಲ್ಲಿಸದೇ ಕೇವಲ ಮೊಬೈಲ್ ನಲ್ಲಿ ಬರೆದ ಸಂದೇಶವನ್ನು ಮಾತ್ರ ಸಲಿಸಿದ್ದಾರೆ. ಮೊಬೈಲ್ ಸಂದೇಶ ಸಾಕ್ಷಿಯೆಂದು ಪರಿಗಣಿಸಲು ಆಗದು ಎಂದು ನ್ಯಾಯಾಲಯ ಹೇಳಿದೆ ಎಂದು ಪ್ರಶಾಂತ ಪಾಟೀಲ ತಿಳಿಸಿದರು.
ಬಿಜೆಪಿಯ ಬೆಂಬಲಿಗ, ಸಕ್ರಿಯ ಕಾರ್ಯಕರ್ತರೂ ಆಗಿದ್ದ ತಮ್ಮ ಸಹೋದರ ಸಂತೋಷ ಅವರು, ‘ಆಪರೇಷನ್ ಕಮಲ’ ದ ಮೂಲಕ ರಾಜ್ಯದಲ್ಲಿ 2019ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ, ಅನೇಕ ಸಾರ್ವಜನಿಕ ಕಾಮಗಾರಿಗಳ ಗುತ್ತಿಗೆಗಳನ್ನು ಪಡೆದರು. ತಮ್ಮಲ್ಲಿದ್ದ ಹಣ, ಸಂಬಂಧಿಕ, ಸ್ನೇಹಿತರಿಂದ ಮತ್ತು ಬ್ಯಾಂಕುಗಳಿಂದ ಸಾಲ ಪಡೆದು ತಾವು ವಹಿಸಿಕೊಂಡ ಕೆಲಸ ಪೂರೈಸಿದರು. ತಮಗೆ ದೊರೆತ ಗುತ್ತಿಗೆ ಕೆಲಸಗಳನ್ನು ಇತರರಿಗೆ ಉಪ ಗುತ್ತಿಗೆ ನೀಡಿ ಅವರು ಮಾಡಿದ್ದ ಕೆಲಸಕ್ಕೆ ತಾವೇ ಬಿಲ್ ಪಾವತಿಸಿದ್ದರು. ಇದಕ್ಕಾಗಿ ತಮ್ಮ ಪತ್ನಿಯ ಚಿನ್ನದ ಆಭರಣಗಳನ್ನು ಬ್ಯಾಂಕಿನಲ್ಲಿ, ಖಾಸಗಿ ಹಣಕಾಸು ಲೇವಿದಾರರಲ್ಲಿ ಒತ್ತೆಯಿಟ್ಟು ಸಾಲ ಪಡೆದು ಬಿಲ್ ಪಾವತಿಸಿದ್ದರು.
ವಹಿಸಿಕೊಂಡ ಕೆಲಸಗಳಲ್ಲಿ ಪ್ರಮುಖವಾದವುಗಳು ಈಶ್ವರಪ್ಪನವರ ಗ್ರಾಮೀಣ ಮತ್ತು ಪಂಚಾಯತ್ ರಾಜ ಇಲಾಖೆಗೆ ಸೇರಿದವುಗಳಾಗಿದ್ದವು. ಕೆಲಸಗಳನ್ನೆಲ್ಲ ಪೂರೈಸಿದ ನಂತರ ಬಿಲ್ ಗಾಗಿ ಈಶ್ವರಪ್ಪನವರನ್ನು ಬೇಡಿಕೊಂಡಾಗ ಅವರು ‘ಇಂದು ನಾಳೆ’ ಎಂದು ಹೇಳಿ ನಂತರ ‘ಒಟ್ಟು ಕಾಮಗಾರಿಯ 45% ಕಮಿಷನ್ ಲಂಚದ ರೂಪದಲ್ಲಿ ಕೊಡುವುದಾದರೆ ಬಿಲ್ ಮಂಜೂರು ಮಾಡಲಾಗುವುದು. ಇನ್ನು ಮುಂದೆ ಈ ವಿಷಯಕ್ಕೆ ತಮ್ಮ ಪಿಎಗಳನ್ನೇ ಸಂಪರ್ಕಿಸಿ” ಎಂದು ಸಂತೋಷ ಅವರಿಗೆ ಸೂಚಿಸಿದ್ದರು. ಅದರಂತೆ ಸಂತೋಷ ಅವರು ಈಶ್ವರಪ್ಪನವರ ಪಿಎ ಅವರನ್ನು 86 ಬಾರಿ ಸಂಪರ್ಕಿಸಿದ್ದರು. ಈ ಕುರಿತು ಮಾತುಕತೆಗಳ ಧ್ವನಿ ಮುದ್ರಣವನ್ನೂ ಮಾಡಿಕೊಳ್ಳಲಾಗಿದೆ. ಅವುಗಳನ್ನೂ ಪೊಲೀಸರಿಗೆ ಸಾಕ್ಷಿಯನ್ನಾಗಿ ನೀಡಲಾಗಿದೆ. ಆದರೆ ಅವುಗಳಲ್ಲಿ ಕೇವಲ 13 ಮಾತುಕತೆಗಳನ್ನು ಮಾತ್ರ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಉಳಿದವುಗಳನ್ನು ಯಾಕೆ ಸಲ್ಲಿಸಿಲ್ಲ ಎಂದು ಪ್ರಶಾಂತ ಪ್ರಶ್ನಿಸಿದರು.
“ಈಶ್ವರಪ್ಪ ಪ್ರಕರಣದಿಂದ ಹೊರಬೀಳಲಿ ಎಂಬ ಉದ್ದೇಶದಿಂದ ಪೊಲೀಸರು ಬಿ ಸಮರಿ ಸಲ್ಲಿಸಿದ್ದಾರೆ. ಇದನ್ನು ತಾವು ಚುನಾಯಿತ ಪ್ರತಿನಿಧಿಗಳ ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸುವದಾಗಿ ಪ್ರಶಾಂತ ತಿಳಿಸಿದರು.
“ಸಹೋದರ ಸಂತೋಷ ಆತ್ಮಹತ್ಯೆ ಮಾಡಿಕೊಂಡಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಮುರುಗೇಶ ನಿರಾಣಿ, ಲಕ್ಶ್ಮಣ ಸವದಿ, ಮಹಾಂತೇಶ ಕವಟಗಿಮಠ ಸಂತಾಪ ಸೂಚಿಸಿದ್ದರು. ಸಚಿವರಾಗಿದ್ದ ನಿರಾಣಿ ಅವರು ಬೆಳಗಾವಿಯಲ್ಲಿರುವ ನಮ್ಮ ಮನೆಗೆ ಬಂದು ಸಂತೋಷ ಮಾಡಿದ್ದ ಎಲ್ಲ ಕಾಮಗಾರಿಗಳ ಬಿಲ್ಲನ್ನು ಒಂದೇ ಸಲ ನೀಡಲಾಗುವುದು. ಅಲ್ಲದೇ ಸಂತೋಷ ಅವರ ಪತ್ನಿ ಜಯಾ ಅವರಿಗೆ ಸರಕಾರಿ ನೌಕರಿ ನೀಡುವ ಭರವಸೆಯನ್ನೂ ನೀಡಿದ್ದರು. ಈ ಮಾತಿಗೆ ಒಂದು ವರ್ಷವಾಯಿತು. ಇನ್ನೂ ಯಾವುದೇ ಭರವಸೆ ಕೂಡ ಈಡೇರಿಲ್ಲ” ಎಂದು ಅವರು ತಿಳಿಸಿದರು.
ಒಂದೆರಡು ದಿನಗಳಲ್ಲಿ ನ್ಯಾಯಾಲಯ ತೀರ್ಪಿನ ಆದೇಶದ ಪ್ರತಿ ಪಡೆದು ಆ ಆದೇಶ ಪ್ರಶ್ನಿಸಿ ಜನಪ್ರತಿನಿಧಿಗಳ ಹಿರಿಯ ನ್ಯಾಯಾಲಯಕ್ಕೆ ರಿಟ್ ಪೆಟಿಷನ್ ಅರ್ಜಿ ಸಲ್ಲಿಸಲಾಗುವುದು ಎಂದೂ ಸಂತೋಷ ಸಹೋದರ ಪ್ರಶಾಂತ ತಿಳಿಸಿದರು.
ಪ್ರಕರಣದ ಹಿನ್ನಲೆ
————————–
ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೆ.ಎಸ್. ಈಶ್ವರಪ್ಪ ಅವರು ಗ್ರಾಮೀಣ ಮತ್ತು ಪಂಚಾಯತ ರಾಜ್ ಇಲಾಖೆ ಸಚಿವರಾಗಿದ್ದಾಗ 2022ರ ಏಪ್ರಿಲ್ 12 ರಂದು ಉಡುಪಿಯ ಶಾಂಭವಿ ಲಾಡ್ಜನಲ್ಲಿ ಗುತ್ತಿಗೆದಾರ ಸಂತೋಷ ಪಾಟೀಲ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಮೃತ ಗುತ್ತಿಗೆದಾರರು ಕಮೀಷನ್ ಹಣದ ಕಿರುಕುಳದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಕೆ.ಎಸ್. ಈಶ್ವರಪ್ಪ ಅವರ ವಿರುದ್ಧ ಆರೋಪ ಮಾಡಲಾಗಿತ್ತು. ಈ ವಿಚಾರ ಸಾಕಷ್ಟು ವಿವಾದಕ್ಕೆ ಕಾರಣವಾಗಿ ಕೊನೆಗೆ ಈಶ್ವರಪ್ಪ ಅವರು ಸಚಿವ ಸ್ಥಾನಕ್ಕೂ ರಾಜಿನಾಮೆ ನೀಡಿದ್ದರು. ಪ್ರಕರಣದ ತನಿಖೆ ನಡೆಸಿದ್ದ ಉಡುಪಿ ಪೊಲೀಸರು ಈಶ್ವರಪ್ಪ ಅವರ ಮೇಲಿನ ಆರೋಪಕ್ಕೆ ಸೂಕ್ತ ಸಾಕ್ಷ್ಯಾಧಾರಗಳು ಇಲ್ಲವೆಂದು ಬಿ ರಿಪೋರ್ಟ ಸಲ್ಲಿಕೆ ಮಾಡಿದ್ದರು. ಈ ಬಿ ರಿಪೋರ್ಟ ಸಲ್ಲಿಕೆಯನ್ನು ಪ್ರಶ್ನಿಸಿ ಮೃತ ಗುತ್ತಿಗೆದಾರ ಸಂತೋಷ ಪಾಟೀಲ ಅವರ ಸಹೋದರ ಪ್ರಶಾಂತ ಪಾಟೀಲ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ತಕರಾರು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ವಾದ-ಪ್ರತಿವಾದ ಆಲಿಸಿದ ನಂತರ ಬಿ ರಿಪೋರ್ಟ ಅಂಗೀಕರಿಸಿದೆ. ಈ ಮೂಲಕ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣದಲ್ಲಿ ಕೆ.ಎಸ್ ಈಶ್ವರಪ್ಪ ಅವರಿಗೆ ಕ್ಲೀನ್ ಚಿಟ್ ಸಿಕ್ಕಿದೆ.