ಬೆಳಗಾವಿ: ಮೀಸಲಾತಿಗಾಗಿ ರಾಜ್ಯದ ಪ್ರಬಲ ಜಾತಿಗಳಾದ ಲಿಂಗಾಯತ ಮತ್ತು ಒಕ್ಕಲಿಗ ನಾಯಕರ ನಡುವೆ ಹಗ್ಗ ಜಗ್ಗಾಟ ನಡೆದಿದೆ.
ಒಕ್ಕಲಿಗರಿಗೂ ಮೀಸಲಾತಿ ಹೆಚ್ಚಳ ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಿಜೆಪಿಯ ಒಕ್ಕಲಿಗ ಸಚಿವರು ಮತ್ತು ಶಾಸಕರು ಮನವಿ ಮಾಡಿರುವ ವಿಚಾರವಾಗಿ ಬೆಳಗಾವಿಯಲ್ಲಿ ಪ್ರತಿಕ್ರಯಿಸಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು, ಆರ್. ಅಶೋಕ ಕೂಡ ಬಿಜೆಪಿಗೆ 50 ಸೀಟು ಗೆಲ್ಲಿಸಿಕೊಂಡು ಬರಲಿ. ಆಮೇಲೆ ಮೀಸಲಾತಿ ಕೊಡೋಣ ಎಂದಿದ್ದಾರೆ.
ನಾವು ಉತ್ತರ ಕರ್ನಾಟಕ ಭಾಗದಲ್ಲಿ ಲಿಂಗಾಯತರು ಬಿಜೆಪಿಗೆ ಐವತ್ತು ಸ್ಥಾನ ಗೆದ್ದು ಕೊಡುತ್ತಿದ್ದೇವೆ. ದೇವೇಗೌಡರ ತರಹ ಅಶೋಕ ಕೂಡ ಸೀಟು ಗೆದ್ದು ತರಲಿ, ಆವಾಗ ವಿಚಾರ ಮಾಡೋಣ ಎಂದು ಒಕ್ಕಲಿಗರ ಮೀಸಲಾತಿ ಹೆಚ್ಚಳಕ್ಕೆ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದರು.
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಯನ್ನಾದರೂ ಕೊಡಿ, ಎಬಿಸಿಝೆಡ್ ಆದರೂ ಕೊಡಿ. ಆದರೆ 2ಎಗೆ ಇರುವ ಸೌಲಭ್ಯ ಇರಬೇಕು ಎಂದು ಯತ್ನಾಳ ಆಗ್ರಹಿಸಿದರು.
ಬಡವರಿಗಾಗಿ ಮಾತ್ರ ನಾವು ಮೀಸಲಾತಿ ಕೇಳುತ್ತಿದ್ದೇವೆ ಇದ್ದೇವೆ. ನನ್ನ ಹಾಗೆ ಶಾಸಕ ಆದವರಿಗೆ, ಡಿಸಿ ಆದವರಿಗೆ, ಶ್ರೀಮಂತರಿಗೆ ಈ ಮೀಸಲಾತಿ ಬೇಡ. ನಾವು ರಾಜಕೀಯಕ್ಕಾಗಿ ಮೀಸಲಾತಿ ಕೇಳುತ್ತಿಲ್ಲ, ನನಗೆ ಅದರ ಅಗತ್ಯ ಇಲ್ಲ. ನಾನು ಹೇಗಾದರೂ ಗೆಲ್ಲುತ್ತೇನೆ. ಆದರೆ ಬಡವರಿಗಾಗಿ ಮೀಸಲಾತಿ ಕೊಡಿ ಎಂದು ಹೇಳಿದರು.