ಬೆಳಗಾವಿ, 5- ತಾವು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರಾಗಿದ್ದು ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ ಎಂದು ಬೆಳಗಾವಿ ಉತ್ತರದ ಮಾಜಿ ಶಾಸಕ ಅನಿಲ ಬೆನಕೆ ಹೇಳಿದ್ದಾರೆ.
ಮಂಗಳವಾರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, “ಅನಿಲ ಬೆನಕೆ ಕಾಂಗ್ರೆಸ್ ಹೋಗುತ್ತಾರೆ” ಎಂದು ಸೋಮವಾರ ಕೆಲ ಮಾಧ್ಯಮಗಳಲ್ಲಿ ಪ್ರಸಾರವಾದ ಸುದ್ಧಿ ಶುದ್ದ ಸುಳ್ಳು, ಮಾಧ್ಯಮದಲ್ಲಿ ಪ್ರಸಾರವಾದ ಸುದ್ದಿ ಕೇಳಿ ಬೇಸರವಾಯಿತು ಎಂದು ತಿಳಿಸಿದರು.
ತಾವು 25 ವರ್ಷದಿಂದ ಬಿಜೆಪಿ ಕಾರ್ಯಕರ್ತರಾಗಿದ್ದು 3 ಬಾರಿ ವಿಧಾನಸಭೆ ಚುನಾವಣೆ ಸ್ಪರ್ಧಿಸಲು ಟಿಕೆಟ್ ಕೇಳಿದ್ದೆ. 2018 ರ ಚುನಾವಣೆಯಲ್ಲಿ ಟಿಕೆಟ್ ದೊರೆತು ಜಯ ಗಳಿಸಿದ್ದೆ.
2008 ಮತ್ತು 2013 ರಲ್ಲಿ ಟಿಕೆಟ್ ಸಿಕ್ಕಿಲ್ಲವೆಂದು ಪಕ್ಷ ಬಿಡಬಹುದಿತ್ತು. ಆದರೆ ಪಕ್ಷ ನಿಷ್ಠೆಯಿಂದ ಹಾಗೆ ಮಾಡಲಿಲ್ಲವೆಂದರು. ಜಗದೀಶ ಶೆಟ್ಟರ್ ಅಥವಾ ಕಾಂಗ್ರೆಸ್ ನಾಯಕರು ತಮ್ಮನ್ನು ಸಂಪರ್ಕಿಸಿಲ್ಲ, ತಾವೂ ಅವರನ್ನು ಸಂಪರ್ಕಿಸುವುದು ದೂರದ ಮಾತು ಎಂದು ಬೆನಕೆ ತಿಳಿಸಿದರು.
ಪಕ್ಷ ಬಯಸಿದರೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಾಗಿ ತಿಳಿಸಿದ ಬೆನಕೆ, ಪಕ್ಷದಲ್ಲಿ ಹಲವಾರು ಜನರು ಟಿಕೆಟ್ ಆಕಾಂಕ್ಷಿಗಳು ಇದ್ದಾರೆ. ಪಕ್ಷ ಯಾರಿಗೇ ಟಿಕೆಟ್ ನೀಡಿದರೂ ಸಂತಸದ ವಿಷಯ. ನಾನು ಮಾತ್ರ ಯಾವದೇ ಕಾರಣಕ್ಕೂ ಕಾಂಗ್ರೆಸಗೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.