ಅಯೋಧ್ಯೆ, 22: ಜನವರಿ 22ರ ಸೂರ್ಯೋದಯ ಹೊಸ ಕಾಂತಿಯಿಂದ ಕಂಗೊಳಿಸಿದೆ, ಇದು ಕೇವಲ ಒಂದು ತಾರೀಕು ಮಾತ್ರ ಅಲ್ಲ ಒಂದು ಹೊಸ ಯುಗದ ಆರಂಭ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಅಯೋಧ್ಯೆಯಲ್ಲಿ ಇಂದು ನೂತನ ಶ್ರೀ ರಾಮ ಮಂದಿರದಲ್ಲಿ ರಾಮ ಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನಾ ಸಮಾರಂಭದಲ್ಲಿ ಭಾಗವಹಿಸಿದ ನಂತರ ದೇವಾಲಯದ ಹೊರಗೆ ನೆರೆದಿದ್ದ ಗಣ್ಯರನ್ನು ಉದ್ದೇಶಿಸಿ ಮಾತನಾಡಿದರು.
ಇಲ್ಲಿ ಶ್ರೀ ರಾಮ ದೇವರ ನೆಲೆಯ ಕುರಿತಂತೆ ಇದ್ದ ಕಾನೂನು ಹೋರಾಟ ದಶಕಗಳ ಕಾಲ ಸಾಗಿತು. ಈ ಕುರಿತಂತೆ ನ್ಯಾಯ ಒದಗಿಸಿದ ಭಾರತದ ನ್ಯಾಯಾಂಗಕ್ಕೂ ನಾನು ಧನ್ಯವಾದ ತಿಳಿಸಲು ಬಯಸುತ್ತೇನೆ ಎಂದು ಪ್ರಧಾನಿ ನುಡಿದರು.
“ಸಾವಿರ ವರ್ಷಗಳ ನಂತರವೂ ಜನರು ಇಂದಿನ ದಿನ ಹಾಗೂ ಇಂದಿನ ಸಮಾರಂಭವನ್ನು ನೆನಪಿಸಿಕೊಳ್ಳುತ್ತಾರೆ. ಕಳೆದ 11 ದಿನಗಳಲ್ಲಿ ನಾನು ಶ್ರೀ ರಾಮ ಕಾಲಿರಿಸಿದ ಹಲವಾರು ಸ್ಥಳಗಳಿಗೆ ಭೇಟಿ ನೀಡಿದ್ದೇನೆ,” ಎಂದು ಅವರು ಹೇಳಿದರು.
ಹಲವಾರು ವರ್ಷಗಳ ಕಾಯುವಿಕೆಯ ನಂತರ ಇದು ತಮಗೊಂದು ಭಾವುಕ ಕ್ಷಣ. ರಾಮ ಲಲ್ಲಾ ಕೊನೆಗೂ ಅಯೋಧ್ಯೆಗೆ ಆಗಮಿಸಿದ್ಧಾರೆ. ರಾಮ ಲಲ್ಲಾ ಇನ್ನು ಟೆಂಟಿನಲ್ಲಿರುವುದಿಲ್ಲ, ಅವರಿಗಾಗಿ ಈ ಭವ್ಯ ದೇಗುಲ ನಿರ್ಮಾಣವಾಗಿದೆ ಎಂದು ಪ್ರಧಾನಿ ಹೇಳಿದರು.
ದೇವಾಲಯ ಪ್ರತಿಷ್ಠಾಪನೆಗೆ ಇಷ್ಟು ಶತಮಾನಗಳು ತೆಗೆದುಕೊಂಡಿದ್ದಕ್ಕಾಗಿ ಈ ದಿನ ಶೀ ರಾಮನ ಬಳಿ ಕ್ಷಮೆ ಯಾಚಿಸಲು ಬಯಸುತ್ತೇನೆ. ನಮ್ಮ ಪ್ರಯತ್ನ, ತ್ಯಾಗ ಮತ್ತು ತಪಸ್ಸಿನಲ್ಲಿ ಏನೋ ಕೊರತೆಯಿದ್ದಿರಬೇಕು, ಆ ಕಾರಣ ಇಷ್ಟು ಶತಮಾನಗಳ ಕಾಲ ಈ ಕೆಲಸ ನಮಗೆ ಮಾಡಲಾಗಲಿಲ್ಲ. ಇಂದು ಆ ಕೆಲಸ ಪೂರ್ಣಗೊಂಡಿದೆ. ಶ್ರೀ ರಾಮ ದೇವರು ಇಂದು ನಮ್ಮನ್ನು ಖಂಡಿತಾ ಕ್ಷಮಿಸುವರು ಎಂದು ನಾನು ನಂಬಿದ್ದೇನೆ ಎಂದು ಮೋದಿ ಹೇಳಿದರು.
ರಾಮಮಂದಿರ ನಿರ್ಮಾಣದಲ್ಲಿ ಈ ತಲೆಮಾರನ್ನು ಶಿಲ್ಪಿಯನ್ನಾಗಿ ಆಯ್ಕೆ ಮಾಡಲಾಗಿದೆ. ಸಾವಿರಾರು ವರ್ಷಗಳ ಕಾಲ ಇರುವ ಈ ಮಂದಿರವನ್ನು ನೋಡುವ ಪ್ರತಿಯೊಬ್ಬರೂ ಈ ಕಾಲಘಟ್ಟದಲ್ಲಿರುವ ಪ್ರತಿಯೊಬ್ಬರನ್ನೂ ಸ್ಮರಿಸಲಿದ್ದಾರೆ ಎಂದು ಮೋದಿ ಹೇಳಿದರು.
ಮಂದಿರವೇನೋ ನಿರ್ಮಾಣವಾಯಿತು. ಈ ಅಮೃತ ಕಾಲದಲ್ಲೇ ಮುಂದಿನ ಸಾವಿರ ವರ್ಷಗಳಲ್ಲಿ ಭಾರತ ಹೇಗಿರಬೇಕು ಎಂಬುದರ ಯೋಜನೆ ರೂಪಿಸಬೇಕಿದೆ. ಅದಕ್ಕಾಗಿ ಇಂದೇ ಶಪಥವನ್ನು ತೆಗೆದುಕೊಳ್ಳಬೇಕಿದೆ. ಅಯೋಧ್ಯೆಯ ಈ ರಾಮಮಂದಿರದಲ್ಲಿ ಪ್ರತಿಷ್ಠಾಪನೆಗೊಂಡ ಬಾಲರಾಮ, ಭಾರತದ ದೃಷ್ಟಿ, ದರ್ಶನ, ದಿಗ್ದರ್ಶನದ ಮಂದಿರ. ರಾಮ ಭಾರತದ ಆಧಾರ, ವಿಚಾರ, ವಿಧಾನ, ಚೇತನ, ಚಿಂತನೆ, ಪ್ರತಿಷ್ಠೆ, ಪ್ರಭಾವ, ನೀತಿ, ನಿತ್ಯತೆ, ನಿರಂತರತೆ, ವ್ಯಾಪಕ, ವಿಶ್ವ ಹಾಗೂ ವಿಶ್ವಾತ್ಮವೂ ಹೌದು ಎಂದು ಅವರು ಹೇಳಿದರು.
ರಾಮಮಂದಿರ ನಿರ್ಮಾಣಗೊಂಡರೆ ಬೆಂಕಿ ಬೀಳುತ್ತದೆ ಎಂದು ಕೆಲವರು ಹೇಳುತ್ತಿದ್ದರು. ಭಾರತದ ಪವಿತ್ರತೆ ಅರಿಯದ ಮನಸ್ಸುಗಳು ಇಂಥ ಹೇಳಿಕೆಗಳನ್ನು ನೀಡಿವೆ. ಆದರೆ ಧೈರ್ಯ, ಸದ್ಭಾವ ಮತ್ತು ಸಮನ್ವತೆಯ ಪ್ರತೀಕವೂ ಆದ ಭಾರತದಲ್ಲಿ, ರಾಮಮಂದಿರ ಎಂಬುದು ಬೆಂಕಿ ಆಗಲು ಸಾಧ್ಯವಿಲ್ಲ. ಅದು ನಮ್ಮೆಲ್ಲರ ಶಕ್ತಿಯಾಗಿದೆ. ಸಮಾಜದ ಪ್ರತಿ ವರ್ಗದವರಿಗೂ ಉಜ್ವಲ ಭವಿಷ್ಯ ನೀಡಲಿದೆ. ರಾಮ ಎಂಬುದು ವರ್ತಮಾನವಲ್ಲ, ಅನಂತಕಾಲ ಎಂದು ಮೋದಿ ಹೇಳಿದರು.
ಈ ಐತಿಹಾಸಿಕ ಸಮಯದಲ್ಲಿ ರಾಮಮಂದಿರ ನಿರ್ಮಾಣಕ್ಕೆ ತ್ಯಾಗ ಮತ್ತು ಬಲಿದಾನ ನೀಡಿದ ಪ್ರತಿಯೊಬ್ಬರನ್ನೂ ನೆನೆಯುವ ಸಮಯವಿದು. ಅವರ ಸಮರ್ಪಣೆಯಿಂದಾಗಿ ನಾವು ಇಂದು ಈ ಶುಭದಿನವನ್ನು ನೋಡುತ್ತಿದ್ದೇವೆ. ಹೀಗಾಗಿ ಈ ಕ್ಷಣವು ಉತ್ಸವದ ಕ್ಷಣವೂ ಹೌದು. ಇದು ಕೇವಲ ವಿಜಯದ ದಿನ ಮಾತ್ರವಲ್ಲ, ವಿನಯದ ದಿನವೂ ಹೌದು ಎಂದು ಅವರು ಹೇಳಿದರು.