ಹೊಸದಿಲ್ಲಿ, ಡಿ. ೮- ಗುಜರಾತ್ನಲ್ಲಿ ಬಿಜೆಪಿ ಚಾರಿತ್ರಿಕ ವಿಜಯ ಸಾಧಿಸಿದ್ದು, ಹಿಮಾಚಲ ಪ್ರದೇಶದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಿದೆ. ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಆಪ್ ಹೆಚ್ಚಿನ ಸ್ಥಾನ ಗೆಲ್ಲಲು ವಿಫಲವಾಗಿದೆ. ಗುಜರಾತ್ನ ಮತದಾರರು ಮತ್ತೊಮ್ಮೆ ಬಿಜೆಪಿಗೆ ಅಧಿಕಾರ ನೀಡಿದ್ದು ಹಿಮಾಚಲ ಪ್ರದೇಶದ ಜನರು ಕಾಂಗ್ರೆಸ್ ಗೆ ಅಧಿಕಾರ ನೀಡಿದ್ದಾರೆ. ಬಿಜೆಪಿಯ ಆಡಳಿತ ಇದ್ದ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಪಡೆದು ಅಧಿಕಾರ ಹಿಡಿದಿದೆ.
ಗುಜರಾತ್ ವಿಧಾನಸಭೆಯ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಭರ್ಜರಿ ಜಯ ಗಳಿಸಿದ್ದು, ಐತಿಹಾಸಿಕ ದಾಖಲೆ ನಿರ್ಮಿಸಿದೆ. ಸತತ ೭ನೇ ಭಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವ ಮೂಲಕ ಕಮ್ಯುನಿಸ್ಟ ಪಕ್ಷದ ದಾಖಲೆ ಸರಿಗಟ್ಟಿದೆ.. ಗುಜರಾತ್ನಲ್ಲಿ ಬಿಜೆಪಿ ಸತತ ೭ನೇ ಬಾರಿಗೆ ಅಧಿಕಾರಕ್ಕೇರುವ ಮೂಲಕ ಪಶ್ಚಿಮ ಬಂಗಾಳದಲ್ಲಿ ಎಡರಂಗದ ಸರ್ಕಾರದ ದಾಖಲೆಯನ್ನು ಸರಿಗಟ್ಟಿದೆ. ಕಳೆದ ೧೭ ವರ್ಷಗಳಿಂದ ಗುಜರಾತ್ ಬಿಜೆಪಿಯ ಭದ್ರಕೋಟೆಯಾಗಿದೆ. ಪಶ್ಚಿಮ ಬಂಗಾಳದಲ್ಲಿ ಎಡರಂಗ ಸರ್ಕಾರ ಸತತ ೭ ಬಾರಿ ಅಧಿಕಾರಕ್ಕೇರಿತ್ತು. ಅದನ್ನು ಬಿಟ್ಟರೆ ಬಿಜೆಪಿ ಗುಜರಾತ್ನಲ್ಲಿ ಈ ದಾಖಲೆ ಮಾಡಿದೆ.
ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಯ ಮತ ಎಣಿಕೆ ಇಂದು ಬೆಳಿಗ್ಗೆ ಆರಂಭವಾದಾಗ ಗುಜರಾತ್ನಲ್ಲಿ ಆರಂಭದಿಂದಲೇ ಬಿಜೆಪಿ ಮುನ್ನಡೆ ಸಾಧಿಸಿತು. ಗುಜರಾತ್ ವಿಧಾನಸಭೆಯ ಒಟ್ಟು ೧೮೨ ಸ್ಥಾನಗಳ ಪೈಕಿ ೧೫೬ ಸ್ಥಾನಗಳಲ್ಲಿ ಗೆಲುವು ಸಾಧಿಸಿ ೨ನೇ ೩ರಷ್ಟು ಬಹುಮತ ಗಳಿಸಿದೆ. ಕಾಂಗ್ರೆಸ್ ಪಕ್ಷ ಗುಜರಾತ್ನಲ್ಲಿ ಬಿಜೆಪಿಗೆ ಪೈಪೋಟಿ ನೀಡಲು ಸಾಧ್ಯವಾಗದೇ ಹೀನಾಯವಾಗಿ ಸೋತಿದೆ.
ಗುಜರಾತ್ ಚುನಾವಣೆಯಲ್ಲಿ ಈ ಬಾರಿ ಬಿರುಗಾಳಿ ಎಬ್ಬಿಸಿದ್ದ ಆಮ್ ಆದ್ಮಿ ಪಕ್ಷಕ್ಕೆ ಗುಜರಾತನಲ್ಲಿ ಅದೇಗೆ ಹಿನ್ನಡೆ ಆಯಿತು ಆ ಪಕ್ಷಕ್ಕೆ ತಿಳಿಯದಾಗಿದೆ. ಗುಜರಾತ್ ವಿಧಾನಸಭೆಯ ಚುನಾವಣೆಯ ಫಲಿತಾಂಶ ಪ್ರಧಾನಿ ಮೋದಿ ಅವರಿಗೆ ಪ್ರತಿಷ್ಠೆಯಾಗಿತ್ತು. ಪ್ರಧಾನಿಯಾಗಿ ಪಾರ್ಟ ಟೈಮ್ ಕೆಲಸ ಮಾಡುತ್ತ ಫುಲ್ ಟೈಮ್ ಗುಜರಾತ ಚುನಾವಣೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನ ಗೆಲ್ಲಲಿದೆ ಎಂಬ ನಿರೀಕ್ಷೆಗಳು ಹುಸಿಯಾಗಿದ್ದು, ಕಳೆದ ಚುನಾವಣೆಯಲ್ಲಿ ೭೭ ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್, ಈ ಬಾರಿ ೧೭ಕ್ಕೆ ಸೀಮಿತವಾಗಿದೆ.
ಆಮ್ ಆದ್ಮಿ ಪಕ್ಷ ಇದೇ ಮೊದಲ ಬಾರಿಗೆ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿದಿದ್ದು, ಎರಡಂಕಿ ಸ್ಥಾನ ಗಳಿಸಲು ವಿಫಲವಾಗಿದೆ. ಹಿಮಾಚಲದಲ್ಲೂ ಆಮ್ ಆದ್ಮಿ ಪಕ್ಷ ಒಂದು ಸ್ಥಾನವನ್ನೂ ಗೆಲ್ಲದೇ ಮುಖಭಂಗ ಅನುಭವಿಸಿದೆ. ಗುಜರಾತ್ನಲ್ಲಿ ಹೀನಾಯ ಸೋಲನುಭವಿಸಿರುವ ಕಾಂಗ್ರೆಸ್ ಮಾತ್ರ ಹಿಮಾಚಲ ಪ್ರದೇಶದಲ್ಲಿ ಮುಖ ಉಳಿಸಿಕೊಂಡಿದ್ದು ಅಲ್ಲಿ ಬಿಜೆಪಿ ಮುಖಭಂಗ ಅನುಭವಿಸಿದೆ. ಇಲ್ಲಿ ಬಹುಮತ ಪಡೆಯುವ ಮೂಲಕ ಕಾಂಗ್ರೆಸ್ ಅಧಿಕಾರ ಹಿಡಿದಿದೆ. ಈ ಗೆಲುವು ದೇಶದ ಹಲವು ರಾಜ್ಯಗಳಲ್ಲಿ ಹೀನಾಯ ಸ್ಥಿತಿಯಲ್ಲಿರುವ ಕಾಂಗ್ರೆಸ್ಗೆ ಒಂದು ರೀತಿ ಶಕ್ತಿವರ್ಧಕವಾಗಿದೆ.
ಹಿಮಾಚಲ ಪ್ರದೇಶದ ವಿಧಾನಸಭೆಯ ಒಟ್ಟು ೬೮ ಕ್ಷೇತ್ರಗಳ ಪೈಕಿ ಬಿಜೆಪಿ ೨೫, ಕಾಂಗ್ರೆಸ್ ೪೦ ಸ್ಥಾನಗಳಲ್ಲಿ ಮುನ್ನಡೆಯಲಿದ್ದು, ೩ ಕ್ಷೇತ್ರಗಳಲ್ಲಿ ಪಕ್ಷೇತರರು ಗೆಲುವು ಸಾಧಿಸಿದ್ದಾರೆ.
ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ, ಬಿಜೆಪಿಯಿಂದ ಕಣಕ್ಕಿಳಿದಿದ್ದ ಪಾಟೀದಾರ ನಾಯಕ ಹಾರ್ದಿಕ ಪಟೇಲ್, ಕ್ರಿಕೆಟ್ ಆಟಗಾರ ರವೀಂದ್ರ ಜಡೇಜಾ ಪತ್ನಿ ರಿವಾಬಾ ಜಡೇಜಾ, ಅಲ್ಪೇಶ ಠಾಕೂರ ಗೆದ್ದಿದ್ದಾರೆ. ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಇಸುಧನ್ ಗದ್ವಿ ಸೋತಿದ್ದಾರೆ. ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜಯರಾಂ ಠಾಕೂರ ಗೆಲುವು ಸಾಧಿಸಿದ್ದಾರೆ.