ಬೆಳಗಾವಿ, ೨೨: ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೊಂಡ ಹಿನ್ನಲೆಯಲ್ಲಿ ಬೆಳಗಾವಿ ನಗರದಲ್ಲಿ ಜರುಗಿದ ಸಂಭ್ರಮಾಚರಣೆಯೊಂದರ ಸಮಯದಲ್ಲಿ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ನಡೆದು ಪೊಲೀಸರು ಲಾಠಿ ಪ್ರಹಾರ ಮಾಡಿ ಗುಂಪನ್ನು ಚದುರಿಸಿದ ಘಟನೆ ನಡೆದಿದೆ.
ಸೋಮವಾರ ತಡರಾತ್ರಿ ಹಿಂದೂ ಯುವಕರ ಗುಂಪೊಂದು ಜೈ ಶ್ರೀರಾಮ ಘೋಷಣೆಯೊಂದಿಗೆ ಖಡೇಬಜಾರ ಪೊಲೀಸ್ ಠಾಣೆ ವ್ಯಾಪ್ತಿಯ ಪಾಟೀಲ ಮಾಳಾ ಬಳಿ ತಿರುಗುತ್ತಿತ್ತು. ಈ ಪ್ರದೇಶದಲ್ಲಿ ಮಸೀದಿಯೊಂದಿದ್ದು ಹೆಚ್ಚಿನ ಪೊಲೀಸ್ ಭದ್ರತೆಗೆ ನಿಯೋಜನೆಗೊಂಡಿದ್ದರು. ಪೊಲೀಸರು ಸೂಚನೆ ನೀಡಿದ್ದರೂ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಗುಂಪು ಘೋಷಣೆ ಕೂಗುತ್ತ ಆ ಪ್ರದೇಶದಲ್ಲಿಯೇ ಸುತ್ತಾಡುತ್ತಿತ್ತು. ಈ ನಡುವೆ ಮೆರವಣಿಗೆ ನಡೆಸಿದವರ ಮೇಲೆ ಕಲ್ಲು ತೂರಾಟ ನಡೆಯಿತು, ಇದಕ್ಕುತ್ತರವಾಗಿ ಮೆರವಣಿಗೆ ನಡೆಸಿದ ಗುಂಪೂ ಸಹ ಕಲ್ಲು ತೂರಾಟ ನಡೆಸಿತು. ಎರಡೂ ಗುಂಪುಗಳ ನಡುವೆ ಕಲ್ಲು ತೂರಾಟ ನಡೆದಾಗ ಪೊಲೀಸರು ಲಾಠಿ ಪ್ರಹಾರ ನಡೆಸಿ ಗುಂಪುಗಳನ್ನು ಚದುರಿಸಿದರು.
ಸ್ಥಳದಲ್ಲಿ ಹೆಚ್ಚಿನ ಪೊಲೀಸ ಬಂದೋಬಸ್ತ ನಿಯೋಜಿಸಲಾಗಿದೆ. ಪರಸ್ಥಿತಿ ನಿಯಂತ್ರಣದಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.