ಬೆಳಗಾವಿ : ಬೆಳಗಾವಿ ಜಿಲ್ಲೆಯ ಎಲ್ಲ ೧೮ ವಿಧಾನಸಭಾ ಮತಕ್ಷೇತ್ರದ ಮತ ಎಣಿಕೆ ಬೆಳಗಾವಿಯ ಆರ್ ಪಿಡಿ ಕಾಲೇಜಿನಲ್ಲಿ ಶನಿವಾರ ಮುಂಜಾನೆ 8 ಗಂಟೆಯಿಂದ ನಡೆಯಲಿದ್ದು, ಮಧ್ಯಾಹ್ನ 12 ಗಂಟೆಯವರೆಗೆ ಫಲಿತಾಂಶ ಮತ್ತು ಪಕ್ಷಗಳ ಬಲಾಬಲ ಸ್ಪಷ್ಟವಾಗಲಿದೆ.
ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಶುಕ್ರವಾರ ನಗರದ ಆರ್ ಪಿಡಿ ಕಾಲೇಜನಲ್ಲಿ ಸ್ಥಾಪನೆ ಮಾಡಲಾದ ಸ್ಟ್ರಾಂಗ್ ರೂಂ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಆರ್ ಪಿ ಡಿ ಕಾಲೇಜಿನಲ್ಲಿ ಸ್ಥಾಪಿಸಲಾಗಿರುವ ಮತ ಎಣಿಕೆ ಕೇಂದ್ರ ರಾಜ್ಯದಲ್ಲಿ ದೊಡ್ಡ ಮತ ಏಣಿಕೆ ಕೇಂದ್ರವಾಗಿದೆ. 8 ಗಂಟೆಗೆ ಪೋಸ್ಟಲ್ ಬ್ಯಾಲೆಟ್ ಪೇಪರ್ ಕೌಂಟಿಗ್ ಮಾಡಲಾಗುವುದು. ೮.೩೦ರಿಂದ ಇವಿಎಂ ಮತ ಎಣಿಕೆ ಪ್ರಾರಂಭವಾಗುತ್ತದೆ. ಒಂದು ಟೇಬಲ್ ನಲ್ಲಿ ೫೦೦ ಮತಗಳನ್ನು ಎಣಿಕೆ ಮಾಡಲು ಸಾಧ್ಯವಾಗುತ್ತದೆ. ಮಧ್ಯಾಹ್ನದವರೆಗೆ ಎಲ್ಲ ಫಲಿತಾಂಶ ಹೊರ ಬರುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.
ಮೂರು ಹಂತದಲ್ಲಿ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಗುರುತಿನ ಚೀಟಿ ಇಲ್ಲದೇ ಯಾರಿಗೂ ಒಳಗಡೆ ಬಿಡುವುದಿಲ್ಲ. ಸುಮಾರು ೫ ಸಾವಿರ ಜನ ಇರುವುದರಿಂದ ಏಜೆಂಟರಿಗೂ ಗುರುತಿನ ಚೀಟಿ ನೀಡಲಾಗಿದೆ. ೨೦೦ ಮೀಟರ್ ಹೊರಗಡೆ
ಅಭ್ಯರ್ಥಿಗಳ ಬೆಂಬಲಿಗರು ವಿಜಯೋತ್ಸವ ಮಾಡಬಹುದು ಎಂದರು.
ನಗರ ಪೊಲೀಸ್ ಆಯುಕ್ತ ಡಾ. ಎಂ. ಬಿ. ಬೋರಲಿಂಗಯ್ಯ ಮಾತನಾಡಿ, ಮೇ.೧೩ ರಂದು ಚುನಾವಣೆಯ ಮತ ಎಣಿಕೆ ಸಂದರ್ಭದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಸ್ಟ್ರಾಂಗ್ ರೂಂ ಹೊರಗಡೆ ಸೂಕ್ತ ಪೊಲೀಸ್ ಬಂದೋಬಸ್ತ ಏರ್ಪಡಿಸಲಾಗಿದೆ. ೧೮ ವಿಧಾನಸಭಾ ಕ್ಷೇತ್ರದ ಜನರು ಬರುತ್ತಾರೆ. ಮತ ಎಣಿಕೆ ಎಜೆಂಟ್, ಅಧಿಕಾರಿಗಳು ಸೇರಿದಂತೆ ಸುಮಾರು ೫ ಸಾವಿರ ಜನ ಆಗಮಿಸುವ ಸಾಧ್ಯತೆ ಇದೆ. ಆದ್ದರಿಂದ ನಗರ ಪೊಲೀಸ್ ಇಲಾಖೆಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ನಾಳೆ ಬೆಳಗ್ಗೆ ೫ ಗಂಟೆಯಿಂದ ಮತ ಎಣಿಕೆ ಕೇಂದ್ರದ ಸುತ್ತ ಕೆಎಸ್ ಆರ್ ಪಿ ತುಕಡಿ ಸೇರಿದಂತೆ ಸುಮಾರು ೧,೫೦೦ ಜನ ಪೊಲೀಸ್ ಸಿಬ್ಬಂದಿ ನೇಮಕ ಮಾಡಲಾಗುತ್ತಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಲ್ಲಲ್ಲಿ ಪೊಲೀಸ್ ನಿಯೋಜನೆ ಮಾಡಲಾಗಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ ಕೂಡ ಮತ ಎಣಿಕೆ ಕೇಂದ್ರ ಪರಿಶೀಲಿಸಿದರು.