ಇತ್ತೀಚಿನ ರಾಜಕಾರಣಿಗಳು ಹದ್ದು ಮೀರುತ್ತಿದ್ದಾರೆ. ಅವರ ನಡೆ, ನುಡಿ ಜನತಂತ್ರಕ್ಕೆ ಶೋಭಿಸುವಂಥದ್ದಲ್ಲ. ಒಮ್ಮೆ ಗೆದ್ದರೆ ಆ ಕ್ಷೇತ್ರ ತಮಗೆ ಜಹಗೀರು ಎಂದು ಭಾವಿಸುವ ಜನ ಇವರು. ಸೋತರೆ, ಮತ್ಯಾರೋ ಅನ್ಯಾಯ ಎಸಗಿ ತನ್ನ ಜಹಗೀರು ಲಪಟಾಯಿಸಿದ ಎಂದೂ ಅವರಿಗೆ ಅನ್ನಿಸುತ್ತಿದೆ. ಜಾತಿ ಮತ್ತು ಹಣದ ಬಲದಿಂದಲೇ ರಾಜಕೀಯದಲ್ಲಿ ಶಾಶ್ವತವಾಗಿ ಉಳಿಯುತ್ತೇವೆ ಎನ್ನುವ ಕೆಟ್ಟ ಪ್ರವೃತ್ತಿ ಕಾಣುತ್ತಿದೆ. ಹೀಗಾಗಿ ಅವರು ಸದಾ ಆಳುವ ಜನಪ್ರತಿನಿಧಿಗಳು ಮತ್ತು ಉಳಿದವರು ಸದಾ ಮತ ನೀಡುವವರು ಮಾತ್ರ, ಆತ ಕನಿಷ್ಠ ನಾಗರೀಕ ಕೂಡ ಅಲ್ಲ. ಅವನಿಗೆ ಅವನದ್ದೇ ಹಕ್ಕುಗಳಿವೆ ಎನ್ನುವುದು ಕೂಡ ಮರೆತು ಹೋಗುತ್ತದೆ. ತಾನು ಆಳುವವ ಎಂಬ ಹಮ್ಮು ತಲೆಗೇರುತ್ತದೆ.
ಗಮನದಲ್ಲಿ ಇರಲಿ. ಅವರ ಸೇವಕರಾಗಿ ದುಡಿಯಲಿ ಎಂದು ಜನಪ್ರತಿನಿಧಿಗಳನ್ನು ಜನ ಆಯ್ಕೆ ಮಾಡಿ ಕಳುಹಿಸುತ್ತಾರೆ. ಅದಕ್ಕಾಗಿ ತಾವು ಬೆವರು ಹರಿಸಿ ದುಡಿದು ಗಳಿಸಿದ ಹಣ ತೆರಿಗೆ ರೂಪದಲ್ಲಿ ಕಟ್ಟಿ ಗೆದ್ದವರನ್ನು ಸಲಹುತ್ತಾರೆ. ಒಂದು ಅವಧಿಗೆ ಜನಪ್ರತಿನಿಧಿ ಆದರೆ ಸಾಕು, ಆತನನ್ನು ಪಿಂಚಣಿ ಕೊಟ್ಟು ಜೀವಮಾನ ಇಡೀ ಸಾಕುವ ಜವಾಬ್ದಾರಿಯನ್ನು ನೀವಾಗಿಯೇ ಕಾನೂನು ಮಾಡಿ ಜನರ ಮೇಲೆ ಹೇರಿದ್ದೀರಿ. ನೀವು ತಿನ್ನುವ ಅನ್ನದ ಋಣದ ಕಲ್ಪನೆ ಕೂಡ ಇಲ್ಲದಂತೆ ವರ್ತಿಸುವುದು ಎಷ್ಟು ಸರಿ?
ಮಾತುಗಳು ಹದ್ದು ಮೀರುತ್ತಿವೆ. ಕೆಲವು ದಿನಗಳಿಂದ ಸೋತವರ ದನಿ ಬದಲಾಗಿದೆ. ಗೆದ್ದವರು ಏನೋ ಮಹಾಪಾಪ ಮಾಡಿದ್ದಾರೆ ಎಂಬಂತೆ ಹರಿಹಾಯುವ ಪ್ರವೃತ್ತಿ ಶುರುವಾಗಿದೆ. ಸಲ್ಲದ ಮಾತುಗಳು ತುಟಿ ಮೀರಿ ಬರುತ್ತಿವೆ. ಅದಕ್ಕೆ ಚಿಕ್ಕವರು, ದೊಡ್ಡವರು ಎನ್ನುವ ಭೇದವೂ ಇಲ್ಲದಂತೆ, ಅತ್ಯಂತ ಹಿರಿಯ ರಾಜಕಾರಣಿಗಳೂ ಇಂದು ನೆಲಕಚ್ಚಿ ಕೂತಿದ್ದರೂ ಆಡುವ ಮಾತು ಅವರಿಗೆ ತಕ್ಕದ್ದವಲ್ಲ. ರಾಜಕೀಯ ವೃತ್ತಿ ಜೀವನದಿಂದ ಅವರು ಕಲಿತ ಪಾಠ ಇದೇನಾ ಎನ್ನಿಸುತ್ತದೆ. ಗೆಲುವನ್ನು ವಿನಯದಿಂದ, ಸೋಲನ್ನು ಘನತೆಯಿಂದ ಸ್ವೀಕರಿಸಬೇಕು. ಆದರೆ ಗೆದ್ದರೆ ಬೀಗುವುದು, ಸೋತರೆ ಆಗಬಾರದ ಅನ್ಯಾಯ ಆಗಿದೆ ಎಂಬಂತೆ ಹರಿ ಹಾಯುವುದನ್ನು ನಾವೀಗ ಕಾಣುತ್ತಿದ್ದೇವೆ.
ಆಡಳಿತದ ದುರಾಚಾರ, ಸ್ವಾರ್ಥ, ಲೂಟಿ ಇದನ್ನೆಲ್ಲ ಗಮನಿಸಿಯೇ ಜನ ತಮ್ಮ ನಿರ್ಧಾರ ತಿಳಿಸಿದ್ದಾರೆ. ಅದನ್ನು ಗೌರವದಿಂದ ಒಪ್ಪಿಕೊಳ್ಳುವುದು ಸಜ್ಜನಿಕೆ. ಜೊತೆಗೆ ಜನ ಗೆಲ್ಲಿಸಿದ ಎದುರಾಳಿಗಳು ತಪ್ಪಿ ನಡೆಯದಂತೆ ನೋಡಿಕೊಳ್ಳುವ ಜವಾಬ್ದಾರಿ ಸೋತವರದ್ದು. ಆದರೀಗ, ಗೆದ್ದವರು ಮಹಾಪ್ರಮಾದ ಎಸಗಿದ್ದಾರೆ ಎಂಬಂತೆ ಹಾರಾಡುತ್ತಿರುವ ಸೋತವರು, ಮತ್ತೆ ಮತ್ತೆ ಜನರ ಕಣ್ಣಲ್ಲಿ ತೀರಾ ಸಣ್ಣವರಾಗುತ್ತಿದ್ದಾರೆ ಎನ್ನುವುದನ್ನು ಮರೆಯಬಾರದು.
ಈಗ ಸೋತು ಕುಳಿತಿರುವ ಪಕ್ಷ ಒಂದಲ್ಲ ಹಲವು ಬಾರಿ ಆಡಳಿತ ನಡೆಸಿತ್ತು. ಆದಕ್ಕೆ ಆಡಳಿತ ನಡೆಸುವ ಅಧಿಕಾರವನ್ನು ಜನತೆ ಸ್ಪಷ್ಟವಾಗಿ ನೀಡಿರಲಿಲ್ಲ. ಆದರೆ ಅವರು ವಾಮ ಮಾರ್ಗಗಳಿಂದ ಅಧಿಕಾರ ಪಡೆದು ಮೆರೆದರು. ಅವರ ಅಹಮಿಕೆ ಏನು, ದುರಾಡಳಿತ ಏನು, ಲೂಟಿ ಏನು! ಇದೆಲ್ಲದರ ಪರಿಣಾಮದಿಂದ ನೊಂದ ಜನ ದೂರು ನೀಡಿದರೂ ಅದನ್ನು ಕಡೆಗಣಿಸಲಾಯಿತು. ಅಂಥವರು ಈದೀಗ ಕಣ್ಣು ಬಿಡುತ್ತಿರುವ ಸರ್ಕಾರದ ನೀತಿ, ನಿಯಮಾವಳಿಗಳ ಮೇಲೆ ದಾಳಿ ನಡೆಸುತ್ತಿರುವುದು ಖಂಡಿತ ಒಳ್ಳೆಯ ರಾಜಕೀಯ ಅಲ್ಲ. ಮೊದಲಾದರೆ ನಮ್ಮ ಸಮಾಜದ ಎಲ್ಲ ರಂಗಗಳಲ್ಲಿಯೂ ತಪ್ಪು ಒಪ್ಪುಗಳನ್ನು ತಿಳಿ ಹೇಳಬಲ್ಲ ಹಿರಿಯರಿದ್ದರು. ಅವರು ತಮ್ಮ ನಡೆ ತಪ್ಪು ಎಂದು ಹೇಳಿದರೆ ಕಷ್ಟ ಎಂಬ ಅಳುಕಿನಿಂದ ಜನ ನಡೆಯುತ್ತಿದ್ದರು. ಈಗ ಹಾಗೆ ಹೇಳುವ ಮುತ್ಸದ್ಧಿಗಳು ಇಲ್ಲ. ಇರುವವರು ಕೂಡ ನಾಲ್ಕು ಬುದ್ಧಿ ಮಾತು ಹೇಳಿದರೆ, ಅವರು ದೇಶಕ್ಕೆ ದ್ರೋಹ ಬಗೆಯುವವರಾಗಿ ಕಾಣುತ್ತಾರೆ. ಈ ನಿಲುವು ಎಷ್ಟು ಸರಿ ಎಂದು ಯೋಚಿಸಬೇಕು.
ಬಲಪಂಥೀಯ ನಿಲುವು ಮಾತ್ರ ಸರಿ, ಅದರ ಅನುಷ್ಠಾನಕ್ಕೆ ಎಂಥ ಮಾರ್ಗ ಆದರೂ ಸರಿ ಎಂದುಕೊಳ್ಳುವುದು ಸಮರ್ಥನೀಯ ಅಲ್ಲ. ಅದಕ್ಕೆ ತಕ್ಕ ಪ್ರತಿಕ್ರಿಯೆ ಈಗ ಕಾಣತೊಡಗಿದೆ. ಮುಂದಿನ ದಿನಗಳಲ್ಲಿ ಇದು ಇನ್ನೂ ವ್ಯಾಪಕವಾಗಿ ಕಾಣಿಸಿಕೊಳ್ಳಲಿದೆ. ಇದೇ ರೀತಿಯ ಮನೋಭಾವ ಮುಂದುವರೆಸಿದರೆ ಸಣ್ಣತನದ ಮಾತಾಡುವ ಜನ ಹೇಳ ಹೆಸರಿಲ್ಲದೇ ಹೋಗಿಬಿಡುತ್ತಾರೆ. ಒಬ್ಬ ಮುಖ್ಯಮಂತ್ರಿ ತೆಗೆದುಕೊಂಡ ನಿರ್ಧಾರವನ್ನು ಅತ್ಯಂತ ಅಸೌಜನ್ಯದ ಮಾತುಗಳಿಂದ ನಿಂದಿಸಿದ ಕೇಂದ್ರ ಸಚಿವೆ, ಕೃಷಿ ಇಲಾಖೆ ನೋಡಿಕೊಳ್ಳುತ್ತಿದ್ದಾರೆ. ಅವರ ಸರ್ಕಾರ ಕೃಷಿ ಆದಾಯ ದುಪ್ಪಟ್ಟು ಮಾಡುವದಾಗಿ ಹೇಳಿ ವರ್ಷಗಳೇ ಕಳೆದಿವೆ. ಆಕೆ ದೊಡ್ಡ ಎಸ್ಟೇಟಿನ ಮಾಲೀಕಳೂ ಆಗಿದ್ದು, ಆಕೆಯ ಕೃಷಿ ಆದಾಯ ದುಪ್ಪಟ್ಟಾಗಿದೆಯೇ? ಅದು ಆಗಲಿ ಎಂದು ತೆಗೆದುಕೊಂಡ ಕ್ರಮ ಏನು ಎಂದು ಯೊಚಿಸಿದ್ದಾರೆಯೇ? ಕೇವಲ ಸೋಲಿನ ರುಚಿ ಸಹಿಸಲಾರದೇ ಒದ್ದಾಡುತ್ತಿರುವ ಈ ಜನ, ತಮ್ಮ ಅನೀತಿಯ ನಡೆಗಳನ್ನು ಮುಂದುವರೆಸಿದರೆ ಜನ ಮುಂದಿನ ಚುನಾವಣೆಗಳಲ್ಲಿ ಯಾವ ರೀತಿ ಪ್ರತಿಕ್ರಯಿಸುತ್ತಾರೆ ಎಂದು ಹೇಳಲಾಗುವುದಿಲ್ಲ. ಯಾವುದೂ ಅತಿರೇಕಕ್ಕೆ ಹೋಗಬಾರದು ಎನ್ನುವ ಎಚ್ಚರ ಇರಬೇಕು. ಜೊತೆಗೆ ತಾವು ಆಯ್ಕೆಯಾದ ಸ್ಥಾನಕ್ಕೆ ಒಂದು ಘನತೆ ಇದೆ, ಆ ಘನತೆ ಕಾಯ್ದುಕೊಳ್ಳುವ ಜವಾಬ್ದಾರಿ ತಮ್ಮದು ಎಂದು ಅರಿಯಬೇಕು.
ಗಮನಿಸಿ. ರಾಜ್ಯದ ಯೋಜನೆಗೆ ಕೇಂದ್ರ ಏಕೆ ಅಕ್ಕಿ ಕೊಡಬೇಕು ಎಂದು ಬಿಜೆಪಿಯ ರಾಜ್ಯ ಘಟಕದ ಎಲ್ಲರೂ ಪ್ರಶ್ನಿಸುತ್ತಿದ್ದಾರೆ. ಕರ್ನಾಟಕದ ಜನತೆಗೆ ಅಗತ್ಯ ಇರುವ ಅಕ್ಕಿಯನ್ನು ಅವರ ನಾಯಕ ತಮ್ಮ ಅಡುಗೆ ಮನೆಯ ದಾಸ್ತಾನಿಂದ ಕೊಡುತ್ತಿದ್ದಾರೇನೋ ಎನ್ನುವಂತೆ ಇದೆ ಅವರ ನಿಲುವು. ಇವರೆಲ್ಲರಲ್ಲಿ ಒಂದೇ ಪ್ರಶ್ನೆ. ರಾಜ್ಯದ ಯೋಜನೆ ಜೂನ್ 12ರ ವರೆಗೆ ಸರಿ ಇತ್ತು. ಅಲ್ಲಿಯ ವರೆಗೆ ಆ ಯೋಜನೆಗೆ ಅಕ್ಕಿ ಕೊಡಲು ಕೇಂದ್ರ ಆಹಾರ ನಿಗಮ ಒಪ್ಪಿಗೆ ಸೂಚಿಸಿತ್ತು. ಆದರೆ ಎರಡೇ ದಿನಗಳಲ್ಲಿ ಸ್ಥಿತಿ ಬದಲಾಯಿತು. ಇದಕ್ಕೆ ಯಾರು ಕಾರಣ, ಅದರ ಹಿಂದೆ ಏನೇನಿದೆ ಎಂದು ಸಾಮಾನ್ಯ ಜನರಿಗೆ ಕೂಡ ತಿಳಿದಿದೆ. ಸೋತ ಪಕ್ಷದವರು ತಿಪ್ಪರಲಾಗ ಹಾಕಿದರೂ ಕರ್ನಾಟಕ ಕುರಿತ ಕೇಂದ್ರದ ಈ ಕ್ರಮಕ್ಕೆ ಜನರಿಂದ ಮನ್ನಣೆ ಸಿಗುವುದಿಲ್ಲ ಎನ್ನುವುದನ್ನು ಮೊದಲು ಅರಿಯಬೇಕು. ಈಗಾಗಲೇ ಸೋತಾಗಿದೆ, ಮುಂದಿನ ಚುನಾವಣೆಗಳ ಬಗ್ಗೆಯೂ ಎಚ್ಚರ ವಹಿಸಿ, ಜೊತೆಗೆ ರಾಜ್ಯದ ರಾಜಕಾರಣಕ್ಕೂ ಒಂದು ಗಾಂಭೀರ್ಯ, ಘನತೆ ತಂದುಕೊಡಿ. -ಎ.ಬಿ.ಧಾರವಾಡಕರ