ನಾವು ಎಷ್ಟೊಂದು ಮುಂದುವರಿದ ದೇಶದವರು ಆಗುತ್ತಿದ್ದೇವೆ ಎನ್ನುವುದಕ್ಕೆ ಈ ಘಟನೆಗಳೇ ಸಾಕ್ಷಿ. ಕಳೆದ ಫೆಬ್ರುವರಿ ತಿಂಗಳಲ್ಲಿ ಸುಮಾರು 70 ಜನ ಬೆಂಗಳೂರಿನ ನಾಗರಿಕರು ತಮ್ಮ ಪ್ರದೇಶದ ರಸ್ತೆ ಬದಿಯ ಮರಗಳನ್ನು ಕಡಿದು ಮೇಲು ಸೇತುವೆ ಮಾಡಬೇಡಿ ಎಂದು ಪ್ರತಿಭಟನೆ ನಡೆಸಿದರು. ಅವರಲ್ಲಿ ಹೆಂಗಸರು, ಮಕ್ಕಳೂ ಇದ್ದರು. ಮಕ್ಕಳಂತೂ ‘ಸಿಎಂ ಅಂಕಲ್, ಮರ ಉಳಿಸಿ’ ಎಂದು ಬೋರ್ಡ ಹಿಡಿದು ನಿಂತಿದ್ದು ಅವರಿಗೊಂದು ಪತ್ರ ಕೂಡ ಬರೆದಿದ್ದರು. ಅಲ್ಲಿ ಮೇಲ್ಸೇತುವೆಯ ಅಗತ್ಯವೇ ಇರಲಿಲ್ಲ. ಮರ ಕಡಿಯುವ ಮೂಲಕ ಪರಿಸರಕ್ಕೆ ಹಾನಿ ಮಾಡುತ್ತೇವೆ ಎಂಬ ಕಲ್ಪನೆ ಕೂಡ ಇಲ್ಲದ ಜನರು ಸೇತುವೆಯ ಯೋಜನೆ ಮಾಡಿದರು. ಈಗ ಪ್ರತಿಭಟನೆ ನಡೆಸಿದ ಎಲ್ಲರಿಗೂ ನೋಟೀಸ ಬಂದಿದೆ. ಸಂಬಂಧಿಸಿದ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಂದು ಪ್ರತಿಭಟನೆ ನಡೆಸಿದ ಕೆಲವರನ್ನು ಕರೆಸಿ ವಿಚಾರಣೆ ಮಾಡಲಾಗಿದೆ. ಫೆಬ್ರುವರಿ ತಿಂಗಳ ಘಟನೆ ಬಗ್ಗೆ ಮಾರ್ಚ ತಿಂಗಳಲ್ಲಿ ಪೊಲೀಸರಿಗೆ ಜ್ಞಾನೋದಯ ಆಗಿದೆ ಎಂಬುದೂ ಒಂದು ಸೋಜಿಗ. ಜೊತೆಗೆ ತಮ್ಮ ಪ್ರದೇಶದ ಮರಗಳನ್ನು ಕಡಿಯಬೇಡಿ ಎಂದು ಎಪ್ಪತ್ತು ಜನ ರಸ್ತೆ ಬದಿಯಲ್ಲಿ ಪ್ರತಿಭಟನೆ ಮಾಡಿದರೆ ಭಾರಿ ಸಂಚಾರ ವ್ಯತ್ಯಯ ಆಗುತ್ತದೆ ಎಂದು ಈಗಲೇ ನಮಗೆ ತಿಳಿದದ್ದು.
ಕೆಲಸಗೆಟ್ಟ ರಾಜಕಾರಣಿಗಳು ರಸ್ತೆಯಲ್ಲಿ ಹೊರಟರೆ ದಿನವಿಡೀ ಬಿಸಿಲಲ್ಲಿ ಹಣ್ಣಾಗುವ, ನರಪಿಳ್ಳೆಯೂ ಆ ರಸ್ತೆಯಲ್ಲಿ ಸಂಚರಿಸದಂತೆ ಮಾಡುವ ಪೊಲೀಸರಿಗೆ ಜನ ಸಂಚಾರದ ಬಗ್ಗೆ ಇಷ್ಟೊಂದು ಕಾಳಜಿ ಮೂಡಿದ್ದಾದರೂ ಯಾವಾಗ ಎನ್ನುವುದು ಕೂಡ ಪ್ರಶ್ನೆ. ಹೋಗಲಿ ಯಾರೋ ಸಂಘಟನೆಯವರು ಅಥವಾ ರಾಜಕೀಯ ಗುಂಪಿನವರು ತಮ್ಮ ನಿರ್ದಿಷ್ಟ ಉದ್ದೇಶಕ್ಕಾಗಿ ಅಂದು ಪ್ರತಿಭಟನೆ ನಡೆಸಿದ್ದರು ಎಂದೂ ಅಲ್ಲ. ಅವರ ಪ್ರದೇಶದ ಮರಗಳನ್ನು ಕಡಿಯಬೇಡಿ ಎಂದು ಹೆಂಗಸರು, ಮಕ್ಕಳು ಸೇರಿದಂತೆ ನಾಗರಿಕರು ಪ್ರತಿಭಟನೆ ನಡೆಸುವುದೇ ತಪ್ಪು ಎಂದಾದರೆ ಈ ದೇಶದಲ್ಲಿ ಸ್ವಾತಂತ್ರ್ಯ ಎನ್ನುವುದು ಕೆಲವರಿಗೆ ಮಾತ್ರ ಸೀಮಿತ ಎಂದು ಭಾವಿಸಬೇಕಾಗುತ್ತದೆ.
ಹಾಗೊಮ್ಮೆ ಅನುಮತಿ ಇಲ್ಲದೇ ಪ್ರತಿಭಟನೆ ನಡೆಸಿದ್ದರೆ ಅಂದೇ ಅವರೆಲ್ಲರ ಮೇಲೆ ಕ್ರಮ ಜರುಗಿಸಬೇಕಿತ್ತು. ಇಂಥ ಪ್ರಕರಣಗಳಲ್ಲಿ ಹೆಚ್ಚಂದರೆ ಎಚ್ಚರಿಕೆ ನೀಡಿ ಕಳುಹಿಸುವುದು ನಿಯಮ. ಆದರೆ ಪ್ರಕರಣ ದಾಖಲಿಸುವುದು, ಅದರಲ್ಲೂ ಹೆಂಗಸರು, ಮಕ್ಕಳಿಗೆಲ್ಲ ನೋಟೀಸು ನೀಡುವುದನ್ನು ಗಮನಿಸಿದರೆ ಜನರನ್ನು ಭಯದಲ್ಲಿ ಇರಿಸುವ ದೃಷ್ಟಿಯಿಂದಲೇ ಇಂಥ ಕೆಲಸ ಮಾಡಲಾಗಿದೆ ಎಂದು ತೋರುತ್ತದೆ.
ಒಂದು ಕಾಲಕ್ಕೆ ಉದ್ಯಾನಗಳ ನಗರಿ ಎನಿಸಿಕೊಂಡಿದ್ದ ಬೆಂಗಳೂರು ಕಾಂಕ್ರೀಟ ಕಾಡಾಗಿದೆ, ಅದನ್ನು ಇನ್ನೂ ಹೆಚ್ಚು ಕಾಂಕ್ರೀಟಮಯ ಮಾಡಿ ಜೇಬು ತುಂಬಿಸಿಕೊಳ್ಳುವ ಇಚ್ಛೆ ಇರುವ ಆಡಳಿತ ವರ್ಗವು ಮುಂದೆ ತಮಗೆ ಯಾವುದೇ ವಿರೋಧ ಎದುರಾಗಬಾರದು ಎಂದೇ ಈ ಕ್ರಮ ಜರುಗಿಸಿರಬಹುದೇ? ಮುಖ್ಯವಾಗಿ ಇದು ಜನರ ಪ್ರತಿಭಟಿಸುವ ಹಕ್ಕನ್ನೇ ಕಿತ್ತುಕೊಂಡ ಹಾಗಲ್ಲವೇ? ಘಟನೆ ನಡೆದು ಒಂದು ತಿಂಗಳ ನಂತರ ಅಮಾಯಕ ನಾಗರಿಕರ ಮೇಲೆ ಪ್ರಕರಣ ಹೂಡಲಾಗುತ್ತಿದೆ ಎಂದರೆ ನಾವು ಯಾವ ರೀತಿ ಮುಂದುವರಿಯುತ್ತಿದ್ದೇವೆ ಎನ್ನುವುದು ತಿಳಿದೀತು.
ಪೊಲೀಸರದ್ದು ಈ ಕತೆಯಾದರೆ, ನ್ಯಾಯಾಲಯಗಳದ್ದು ಇನ್ನೊಂದು ರೀತಿ. ನಮ್ಮ ಪ್ರಧಾನ ಮಂತ್ರಿಗಳ ಅವರ ಡಿಗ್ರಿ ಕುರಿತು ವಿವರ ನೀಡುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಮಾಹಿತಿ ಹಕ್ಕು ಕಾಯಿದೆಯಡಿ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಉತ್ತರ ನೀಡಬೇಕಿದ್ದ ಗುಜರಾತ್ ವಿಶ್ವವಿದ್ಯಾಲಯವು ತಕ್ಕ ಉತ್ತರ ನೀಡದೇ ಇದ್ದುದರಿಂದ ಕೇಜ್ರಿವಾಲ್ ಅವರು ಮುಖ್ಯ ಮಾಹಿತಿ ಆಯುಕ್ತರಿಗೆ ಈ ಬಗ್ಗೆ ದೂರು ನೀಡಿದರು. ಮಾಹಿತಿ ಆಯುಕ್ತರು ಗುಜರಾತ್ ವಿಶ್ವವಿದ್ಯಾಲಯಕ್ಕೆ ಆದೇಶ ಕಳುಹಿಸಿ ಅರವಿಂದ್ ಕೇಜ್ರಿವಾಲ್ ಅವರು ಕೋರಿದ ಮಾಹಿತಿ ಒದಗಿಸುವಂತೆ ತಿಳಿಸಿದ್ದರು. ಈ ಬಗ್ಗೆ ಮುಖ್ಯ ಮಾಹಿತಿ ಆಯುಕ್ತರ ವಿರುದ್ಧವೇ ಗುಜರಾತ್ ವಿಶ್ವವಿದ್ಯಾಲಯ ಹೈಕೋರ್ಟಗೆ ಅರ್ಜಿ ಸಲ್ಲಿಸಿತ್ತು. ಇಲ್ಲಿ ವಾದಿ ಗುಜರಾತ್ ವಿಶ್ವವಿದ್ಯಾಲಯ ಮತ್ತು ಪ್ರತಿವಾದಿ ಮುಖ್ಯ ಮಾಹಿತಿ ಆಯುಕ್ತರು. ವಿಚಿತ್ರ ಎಂಬಂತೆ ಗುಜರಾತ್ ವಿಶ್ವವಿದ್ಯಾಲಯದ ಪರ ತೀರ್ಪು ನೀಡಿದ ನ್ಯಾಯಾಲಯವು ಅರ್ಜಿಯಲ್ಲಿ ಪ್ರಸ್ತಾಪವೇ ಆಗಿರದ ದಿಲ್ಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ 25 ಸಾವಿರ ರೂಪಾಯಿ ದಂಡ ವಿಧಿಸಿದೆ!
ಪೊಲೀಸರು ತಪ್ಪಿ ನಡೆದರೆ ನ್ಯಾಯಾಲಯ ನೆರವಿಗೆ ಬರುತ್ತದೆ ಎಂಬ ಭರವಸೆ ಇತ್ತು, ಗುಜರಾತ್ ಪ್ರಕರಣ ನೋಡಿದರೆ ಈಗ ಅಲ್ಲಿಯೂ ಜನರಿಗೆ ಉಳಿಗಾಲ ಇಲ್ಲವೇನೋ ಎನ್ನುವ ಹಾಗೆ ಕಾಣುತ್ತಿದೆ. -ಎ.ಬಿ.ಧಾರವಾಡಕರ