ಬೆಳಗಾವಿ : ಬೆಳಗಾವಿ ಜಿಲ್ಲೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಪೊಲೀಸ್ ಇಲಾಖೆ ಜನರ ಸಮಸ್ಯೆ, ದೂರು ಅರಿಯಲು ಫೋನ್-ಇನ್ ಕಾರ್ಯಕ್ರಮ ಆಯೋಜಿಸಿತ್ತು.
ಸಾರ್ವಜನಿಕರ ಸಮಸ್ಯೆ ಅರಿತು ಪರಿಹಾರ ಕಂಡುಕೊಳ್ಳಲು ಹಮ್ಮಿಕೊಳ್ಳಲಾಗಿದ್ದ ಫೋನ್ ಇನ್ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ದೊರೆತಿದೆ.
ಜಿಲ್ಲೆಯ ವಿವಿಧ ಭಾಗಗಳಿಂದ ಬಂದ ಪ್ರತಿಯೊಂದು ಕರೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ಸ್ವೀಕರಿಸಿ ಸಮಸ್ಯೆ, ದೂರುಗಳನ್ನು ದಾಖಲಿಸಿಕೊಂಡು, ಸಮಾಧಾನದ ಉತ್ತರ ನೀಡಿದರು.
ಬಂದ ಬಹುತೇಕ ಕರೆಗಳು ಪೊಲೀಸ್ ಇಲಾಖೆಯ ವೈಫಲ್ಯದ ಕುರಿತಾಗಿದ್ದು ಗ್ರಾಮಗಳ ಅಂಗಡಿಗಳಲ್ಲಿ ಮದ್ಯ, ಗಾಂಜಾ ಮಾರಾಟ, ಶಾಲೆಗಳ ಪಕ್ಕದಲ್ಲಿರುವ ಪೆಟ್ಟಿಗೆ ಅಂಗಡಿಗಳಲ್ಲೂ ಈ ಥರದ ವಸ್ತುಗಳು ದೊರೆಯುತ್ತಿವೆ, ಜೂಜಾಟ, ಮಟ್ಕಾ ಹಾವಳಿ ಕೂಡ ಮಿತಿ ಮೀರಿದೆ ಇದನ್ನು ತಡೆಯರಿ ಎಂದು ಮನವಿ ಮಾಡಿದರು. ರಸ್ತೆ, ನೀರು, ದೀಪ ಮುಂತಾದ ದೂರುಗಳನ್ನೂ ಹೇಳಲಾಯಿತು.
ಪ್ರತಿ ದೂರಿಗೂ ಸಕಾರಾತ್ಮಕವಾಗಿ ಸ್ಪಂದಿಸಿದ ಎಸ್ಪಿ ಡಾ. ಸಂಜೀವ ಪಾಟೀಲ ನಿಮ್ಮ ಸಮಸ್ಯೆಯನ್ನು ತ್ವರಿತ ರೀತಿಯಲ್ಲಿ ಬಗೆ ಹರಿಸಲಾಗುವುದು, ಶಾಲೆಗಳ ಆವರಣ ಅಕ್ಕಪಕ್ಕದಲ್ಲಿ ಸರಾಯಿ ಮಾರಾಟ, ಮಾದಕ ವಸ್ತುಗಳ ಮಾರಾಟ ಮಾಡುತ್ತಿದ್ದರೇ ತತಕ್ಷಣ ದಾಳಿ ನಡೆಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಬೆಳಗಾವಿಯ ಜಿಲ್ಲೆಯಾದ್ಯಂತ, ಬೆಳಗಾವಿಯ ನಗರದಿಂದ ಕೂಡಾ ಸಾಕಷ್ಟು ಫೋನ್ ಕರೆಗಳು ಬಂದಿದ್ದು, ತಮ್ಮ ಸಮಸ್ಯೆಗಳನ್ನು ಎಸ್ಪಿ ಡಾ. ಸಂಜೀವ ಪಾಟೀಲ ಅವರು ಕಮಿಷನರ್ ಅವರಿಗೆ ತಿಳಿಸಿ ತಮ್ಮ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.