ಹಿಂದೆ ದಿವಾನರಾಗಿದ್ದ ವಿಶ್ವೇಶ್ವರಯ್ಯ ಅವರು ಸ್ವಂತ ಬಳಕೆಗೆ ಬೇರೆ ಮತ್ತು ಸರ್ಕಾರದ ಕೆಲಸಕ್ಕೆ ಬೇರೆ ಲೇಖನಿ ಮತ್ತು ಮಸಿ ಬಳಸುತ್ತಿದ್ದರು ಎನ್ನುವ ಮಾತು ಕೇಳಿದ್ದೇವೆ. ಲಾಲ ಬಹಾದ್ದುರ್ ಶಾಸ್ತ್ರಿ ಅವರು ಕಾಂಗ್ರೆಸ್ ಕಚೇರಿಯಲ್ಲಿ ಕೆಲಸ ಮಾಡುತ್ತಿರುವಾಗ ಅವರಿಗೆ ಕೊಡಲಾಗುತ್ತಿದ್ದ ಸಂಬಳ ತಮ್ಮ ಮನೆ ಖರ್ಚಿಗಿಂತ ಹೆಚ್ಚಾಗಿದೆ ಎಂದು ತಿಳಿದಾಗ, ತಮ್ಮ ಸಂಬಳ ಕಡಿಮೆ ಮಾಡುವಂತೆ ಪತ್ರ ಬರೆದಿದ್ದರು. ಅವರು ಪ್ರಧಾನಿ ಆಗಿದ್ದಾಗ ಲಿಂಗನಮಕ್ಕಿ ಜಲಾಶಯಕ್ಕೆ ಸಂಬಂಧಿಸಿದ ಕಾರ್ಯಕ್ರಮಕ್ಕೆ ಬೆಂಗಳೂರಿನಿಂದ ಎಂದಿನಂತೆ ರಾತ್ರಿ ಹೊರಡುವ ಮೇಲ್ ಗಾಡಿಯಲ್ಲಿ ಪ್ರಯಾಣ ಮಾಡಿದ್ದರು. ಇಂಥವೆಲ್ಲ ಸಾರ್ವಜನಿಕ ಜೀವನದಲ್ಲಿ ಮೌಲ್ಯಗಳನ್ನು ಗೌರವಿಸುವ ಕ್ರಿಯೆಗಳು. ತನಗೆ ಸಿಕ್ಕಿದೆ ಎಂದು ಬೇಕಾಬಿಟ್ಟಿ ಬಳಸುವ ಯಾವ ಕೆಲಸಕ್ಕೂ ಇಂಥ ಸಜ್ಜನರು ಕೈ ಹಾಕುವುದಿಲ್ಲ. ಅದರಿಂದ ಸಮಾಜದಲ್ಲಿಯೂ ಅವರಿಗೆ ಗೌರವ ಮತ್ತು ಜನರ ಮುಂದೆ ತಾವು ತಪ್ಪಿ ನಡೆಯಬಾರದು ಎಂಬ ಎಚ್ಚರ ಸಹಜವಾಗಿಯೇ ಮೂಡುತ್ತದೆ. ಹಣ ಮತ್ತು ಅವಕಾಶಗಳ ಸದ್ಬಳಕೆ ಒಂದು ರೀತಿ, ಸಾರ್ವಜನಿಕ ಜೀವನದಲ್ಲಿ ಶ್ರೇಯ ಪಡೆಯುವುದು ಇನ್ನೊಂದು ರೀತಿ. ಶಾಸ್ತ್ರಿಜೀ ಅವರು 1965ರಲ್ಲಿ ಪಾಕಿಸ್ತಾನ ವಿರುದ್ಧ ಗಳಿಸಿದ ವಿಜಯದ ಶ್ರೇಯಸ್ಸನ್ನು ಸೈನಿಕರಿಗೆ ಅರ್ಪಿಸಿದರೇ ಹೊರತು, ಅದು ತಮ್ಮಿಂದಾಯಿತು ಎಂದು ಹೇಳಿಕೊಳ್ಳಲಿಲ್ಲ.
2004ರಲ್ಲಿ ಸುನಾಮಿ ಅಪ್ಪಳಿಸಿ ತಮಿಳುನಾಡು ಕರಾವಳಿಯ ಜನರಿಗೆ ತೊಂದರೆ ಆದಾಗ, ಅಲ್ಲಿ ಅದ ನಷ್ಟ ಅಂದಾಜು ಮಾಡಿ ಕಳುಹಿಸುವಂತೆ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಸಂಬಂಧಿಸಿದ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಅಗತ್ಯ ಹಣ ಮತ್ತು ಪರಿಹಾರ ಸಾಮಗ್ರಿ ಕಳುಹಿಸಿ, ಅದು ಸರಿಯಾಗಿ ವಿತರಣೆ ಆಗುವಂತೆ ನೋಡಿಕೊಂಡರು. ಆ ಸಂದರ್ಭದಲ್ಲಿ ವಿದೇಶಗಳು ತಾವು ನೆರವು ಕಳುಹಿಸುವುದಾಗಿ ಹೇಳಿದಾಗ, ಅದರ ಅಗತ್ಯ ಇಲ್ಲ ಎಂದು ನಯವಾಗಿ ನಿರಾಕರಿಸಿದ್ದರು. ಒಮ್ಮೆಯೂ ಅವರು ತಾವು ಮಾಡಿದ ಕೆಲಸದ ಶ್ರೇಯಕ್ಕೆ ಹಂಬಲಿಸಲಿಲ್ಲ. ದೇಶದ ಪ್ರಧಾನಿ ಆಗಿ ತಾನು ಜನರಿಗೆ ಏನು ಒಳಿತು ಮಾಡಬೇಕೋ ಅದನ್ನು ಮಾಡಿದ ತೃಪ್ತಿ ಮಾತ್ರ ಅವರಲ್ಲಿ ಇತ್ತು. ನೆರವು ನೀಡಿದಾಗ, ಯೋಜನೆ ಪೂರ್ಣಗೊಂಡಾಗ, ಅಲ್ಲೊಂದು ಸಮಾರಂಭ ಏರ್ಪಡಿಸಿ, ಜನರ ಮುಂದೆ ಎದೆ ತಟ್ಟಿಕೊಂಡು ಇದು ತಾನೇ ಮಾಡಿದ್ದು ಎಂದು ಎಂದೂ ಹೇಳಲಿಲ್ಲ.
ಇಂಥ ಸಂಗತಿ ಗಮನಿಸುವಾಗ, ಈಗಿನ ನಮ್ಮ ಸಾರ್ವಜನಿಕ ಜೀವನದ ಮೌಲ್ಯಗಳು ಎಷ್ಟು ಕುಸಿದಿವೆ ಮತ್ತು ನಮ್ಮ ನಾಯಕರು ಹೇಗೆಲ್ಲ ವರ್ತಿಸುತ್ತಿದ್ದಾರೆ ಎನ್ನುವುದು ಕಣ್ಣಿಗೆ ರಾಚುತ್ತದೆ. ಸೋಮವಾರ ನಡೆದ ಎರಡು ಕಾರ್ಯಕ್ರಮಗಳನ್ನು ಗಮನಿಸಿ. ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಉದ್ಘಾಟನೆ, ಬೆಳಗಾವಿಯಲ್ಲಿ ರೈತರಿಗೆ ಸಹಾಯಧನ ವಿತರಣೆ. ಇನ್ನು ಕೆಲವೇ ದಿನಗಳಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ನಡೆಯಲಿದೆ. ಚುನಾವಣೆ ಘೋಷಣೆಯಾದರೆ ಕೆಲವು ನಿರ್ಬಂಧಗಳು ಜಾರಿ ಆಗುತ್ತವೆ. ಅದಕ್ಕೂ ಮುನ್ನ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಾರ್ವಜನಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಅಡ್ಡಿ ಇಲ್ಲ. ಇದನ್ನು ತನ್ನ ಅನುಕೂಲಕ್ಕೆ ಬಳಸಲೆಂದೇ ರಾಜ್ಯದಲ್ಲಿ ಬಿಜೆಪಿ ಈ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಈ ಸಂದರ್ಭದಲ್ಲಿ ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮಕ್ಕೆ ನಡೆದಿದ್ದ ಸಿದ್ಧತೆಗಳು ಕಣ್ಣು ಕುಕ್ಕುವಂತೆ ಇದ್ದವು. ಒಂದು ಲಕ್ಷ ಕುರ್ಚಿ, ಬಂದವರಿಗೆ ಊಟದ ವ್ಯವಸ್ಥೆ, ಹತ್ತು ಸಾವಿರ ಮಹಿಳೆಯರಿಗೆ ಕೇಸರಿ ಪೇಟ. ಇವು ಕೆಲವು ಎದ್ದು ಕಾಣುತ್ತಿದ್ದ ಸಂಗತಿಗಳು. ದೇಶದಲ್ಲಿ ಎಂಭತ್ತು ಕೋಟಿ ಜನ ಉಚಿತ ಆಹಾರ ಸರ್ಕಾರದಿಂದ ಪಡೆಯುತ್ತಿದ್ದಾರೆ. ಅಂಥ ಬಡ ದೇಶದಲ್ಲಿ ಇಂಥ ಖರ್ಚು, ಅದೂ ಒಂದು ಪಕ್ಷದ ಪರೋಕ್ಷ ಚುನಾವಣಾ ಪ್ರಚಾರಕ್ಕೆ ಮಾಡಿದ್ದು ಅದೆಷ್ಟು ಸರಿ ಎಂದು ಸಂಬಂಧಿಸಿದವರು ಯೋಚಿಸಬೇಕು.
ಇಂಥ ಪ್ರಸ್ತಾಪ ಮಾಡಿದಾಗ, ಪ್ರಸ್ತಾಪ ಮಾಡಿದವರನ್ನು ಅನುಮಾನದಿಂದ ನೋಡುವ ಚಟ ಬೇರುಬಿಟ್ಟಿದೆ. ಇದು ಕೂಡ ಆಘಾತಕಾರಿ ಬೆಳವಣಿಗೆ. ಒಂದು ಸರ್ಕಾರಿ ಕಾರ್ಯಕ್ರಮಕ್ಕೆ ಇಷ್ಟೊಂದು ಖರ್ಚು ಅವಶ್ಯಕವೇ ಎಂದು ಜನ ಯೋಚಿಸಬೇಕು. ಅಷ್ಟೇ ಅಲ್ಲ, ರೈತರ ಸಹಾಯ ಧನ ವಿತರಣೆ ಪ್ರತಿಬಾರಿ ಒಂದು ಸಣ್ಣ ಘಟನೆ ಆಗಿರುತ್ತಿತ್ತು. ನೇರವಾಗಿ ಹಣ ವರ್ಗಾವಣೆ ಮಾಡುವ ಕೆಲಸ ಸರಳವಾಗಿ ನಡೆಯುತ್ತಿತ್ತು. ಡಿಜಿಟಲ್ ಕ್ರಾಂತಿ ಇದನ್ನು ಸಾಧ್ಯ ಆಗಿಸಿದೆ. ಆದರೆ ಬೆಳಗಾವಿ ಕಾರ್ಯಕ್ರಮಕ್ಕೆ ಖುದ್ದು ಪ್ರಧಾನಿ ಬಂದು, ಅದರಲ್ಲೂ ಯಡಿಯೂರಪ್ಪ ಅವರ ಜನ್ಮ ದಿನದ ಪ್ರಯುಕ್ತ ಈ ಧನ ಸಹಾಯ ಎಂದೆಲ್ಲ ಹೇಳುವುದರ ಹಿಂದೆ ಅನೇಕ ಉದ್ದೇಶಗಳಿವೆ. ಹಾಗೆ ನೋಡಿದರೆ, ಇದೇ ಕಾರ್ಯಕ್ರಮ ಶಿವಮೊಗ್ಗದಲ್ಲಿಯೇ ನಡೆಸಬಹುದಿತ್ತು, ಏಕೆಂದರೆ ಯಡಿಯೂರಪ್ಪ ಆ ಜಿಲ್ಲೆಯವರು. ಅವರನ್ನು ಬೆಳಗಾವಿಗೆ ಕರೆದು ತಂದು ಸನ್ಮಾನಿಸಿ, ರೈತರನ್ನು ಓಲೈಸುವುದರ ಹಿಂದೆ ಇರುವ ತಂತ್ರ ಯಾರಿಗಾದರೂ ಅರ್ಥ ಆದೀತು.
ಇದಕ್ಕಿಂತ ಮುಖ್ಯ ಅವರು ಖರ್ಚು ಮಾಡುತ್ತಿರುವುದು ನಮ್ಮ ನಿಮ್ಮ ತೆರಿಗೆ ಹಣವನ್ನು. ಎಲ್ಲರಿಗೂ ಸೇರಿದ ಹಣವನ್ನು ಒಂದು ರಾಜಕೀಯ ಪಕ್ಷದ ಜನಪ್ರಿಯತೆಗಾಗಿ ಖರ್ಚು ಮಾಡುವುದು ಎಷ್ಟು ಸರಿ ಎಂದು ಕೂಡ ಜನ ಯೋಚಿಸಬೇಕು. ಈ ಹೊತ್ತು ಕಡು ಭ್ರಷ್ಠರು, ಮಹಾ ಕ್ರಿಮಿನಲ್ಗಳು ರಾಜಕೀಯ ರಂಗದ ಪ್ರಮುಖ ಪಾತ್ರಧಾರಿಗಳು. ಅವರು ಭ್ರಷ್ಠಾಚಾರ ನಿರ್ಮೂಲನೆ, ಕಾನೂನು ಸುವ್ಯವಸ್ಥೆ ಎಂದು ಮಾತಾಡುವುದು ಹಾಸ್ಯಾಸ್ಪದ ಎನಿಸುತ್ತದೆ. ಆದರೆ ಇಡೀ ಸಮಾಜವೇ ಅಧೋಗತಿಗೆ ಇಳಿದು, ಒಬ್ಬರನ್ನೊಬ್ಬರು ಕೊಚ್ಚಿ ಕೊಲ್ಲುವ ಮಾತುಗಳನ್ನು ಸಾರ್ವಜನಿಕವಾಗಿ ಆಡುವ ಸ್ಥಿತಿ ತಲುಪಿರುವ ಈ ಸಂದರ್ಭದಲ್ಲಿ ಇಡೀ ಸಮಾಜವನ್ನು ಎಚ್ಚರಿಸುವ, ಹೀಗಲ್ಲ, ಹೀಗೆ ಎಂದು ಹೇಳುವವರು ಕೂಡ ಕಾಣುತ್ತಿಲ್ಲ.
ತನ್ನ ಏಳಿಗೆಗಾಗಿ ಎಲ್ಲವನ್ನೂ ಬಲಿ ಕೊಡುವ ಈ ಹೊಸ ಸಂಪ್ರದಾಯ ನಿಲ್ಲುವ ಅಗತ್ಯ ಇದೆ ಎನ್ನುವುದು ನಾವು ಬೇಗ ಮನಗಾಣಬೇಕು. ಇಲ್ಲಿ ನೆರೆಹಾನಿ ಆದಾಗ, ಪ್ರಾಕೃತಿಕ ವಿಕೋಪ ಸಂಭವಿಸಿದಾಗ ಇತ್ತ ಒಮ್ಮೆ ಕೂಡ ತಿರುಗಿ ನೋಡದ ರಾಜಕೀಯ ನಾಯಕರು ಪದೇ ಪದೇ ಒಂದಲ್ಲ ಒಂದು ನೆಪದಲ್ಲಿ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಅವರೀಗ ಅಧಿಕಾರದಲ್ಲಿ ಇರುವುದರಿಂದ, ಅವರದ್ದೇ ಸರ್ಕಾರಗಳು ಯೋಜಿಸುವ ಕಾರ್ಯಕ್ರಮಗಳಲ್ಲಿ ಹಣ ನೀರಿನಂತೆ ವ್ಯಯ ಆಗುತ್ತಿದೆ. ಸಾಲ ಪಡೆದು ದೇಶ ಮತ್ತು ರಾಜ್ಯ ಸರ್ಕಾರಗಳು ಬಜೆಟ್ ತೂಗಿಸುತ್ತ ಇರುವ ಈ ಸಂದರ್ಭದಲ್ಲಿ ಇದು ವಿವೇಕಯುತ ನಡೆಯೇ ಎಂದು ಸಂಬಂಧಿಸಿದವರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.
-ಎ.ಬಿ.ಧಾರವಾಡಕರ