ಚಿಕ್ಕೋಡಿ ೮: ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದ ಹಿರೇಕೋಡಿ ಆಶ್ರಮದ ಜೈನಮುನಿ ಕಾಮಕುಮಾರ ನಂದಿ ಮಹಾರಾಜರನ್ನು ಭೀಕರವಾಗಿ ಕೊಲೆ ಮಾಡಲಾಗಿದ್ದು ಅವರ ಶವದ ಹುಡುಕಾಟ ನಡೆದಿದೆ.
ಜುಲೈ 5ರ ರಾತ್ರಿ ಆಶ್ರಮದ ಕೋಣೆಯಲ್ಲಿದ್ದ ಮುನಿಗಳು ಜುಲೈ 6ರ ಬೆಳಿಗ್ಗೆಯಿಂದ ನಾಪತ್ತೆಯಾಗಿದ್ದರು. ಈ ಕುರಿತು ಭಕ್ತರು ಜೈನ ಬಸದಿಯ ಸುತ್ತಮುತ್ತ ಹುಡುಕಾಟ ನಡೆಸಿದ್ದರು. ಅವರು ಎಲ್ಲಿಯೂ ಪತ್ತೆಯಾಗದ ಕಾರಣ ಆಚಾರ್ಯ ಕಾಮಕುಮಾರ ನಂದಿ ಚಾರಿಟೇಬಲ್ ಟ್ರಸ್ಟ ಅಧ್ಯಕ್ಷ ಭೀಮಪ್ಪ ಉಗಾರೆ ಅವರು ಚಿಕ್ಕೋಡಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ಸಂಬಂಧ ಕೊನೆಯ ಬಾರಿಗೆ ಭೇಟಿ ನೀಡಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಾವೇ ಕೊಲೆ ಮಾಡಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.
ಆರೋಪಿಗಳಲ್ಲಿ ಒಬ್ಬ ಆಶ್ರಮದಲ್ಲಿ ಕೆಲಸ ಮಾಡುತ್ತಿದ್ದ. ತನಗೆ ಹಣಕಾಸಿನ ಸಮಸ್ಯೆ ಇದೆ ಎಂದು ಮುನಿಗಳ ಬಳಿ ಹೇಳಿಕೊಂಡಿದ್ದ. ಸಹಾಯ ಮಾಡುವ ಸಲುವಾಗಿ ಆಶ್ರಮದ ಟ್ರಸ್ಟಿನಿಂದ ಅವನಿಗೆ ಹಣ ನೀಡಿದ್ದರು. ಈ ಹಣವನ್ನು ಮರಳಿ ಕೊಡುವಂತೆ ಮುನಿಗಳು ಪದೇ ಪದೇ ಕೇಳುತ್ತಿದ್ದರು. ಇದರಿಂದ ಬೇಸತ್ತ ಆರೋಪಿ ಕೊಲೆ ಮಾಡಿದ್ದಾಗಿ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆ ಮಾಡಿ ಶವ ಎಲ್ಲಿ ಬಿಸಾಕಿದ್ದೇವೆಂದು ಸ್ಪಷ್ಟ ಮಾಹಿತಿ ನೀಡದೇ ಪೊಲೀಸರನ್ನೇ ಗೊಂದಲದಲ್ಲಿ ಸಿಲುಕಿಸುತ್ತಿರುವ ಆರೋಪಿಗಳು, ಶವ ಬಿಸಾಕಿರುವ ಬಗ್ಗೆ ಬೇರೆ ಬೇರೆ ಹೇಳಿಕೆ ನೀಡುತ್ತಿದ್ದಾರೆ. ಶವವನ್ನು ಕತ್ತರಿಸಿ ಖಟಕಬಾವಿ ಗ್ರಾಮದ ಗದ್ದೆಯ ಕೊಳವೆ ಬಾವಿಯಲ್ಲಿ ಹಾಕಿದ್ದೇವೆ ಎಂದು ಒಮ್ಮೆ ಹೇಳಿದರೆ, ಮತ್ತೊಮ್ಮೆ ಶವವನ್ನು ನದಿಗೆ ಎಸೆದಿದ್ದೇವೆ ಎನ್ನುತ್ತಿದ್ದಾರೆ. ಇನ್ನು ಮೃತದೇಹಕ್ಕಾಗಿ ಖಟಕಬಾವಿ ಗ್ರಾಮ ಸೇರಿ ವಿವಿಧೆಡೆ ರಾತ್ರಿ ಪೊಲೀಸರಿಂದ ಶೋಧ ನಡೆಯಿತು. ನಿನ್ನೆ ಮೃತದೇಹ ಪತ್ತೆಯಾಗದ ಕಾರಣ ಇಂದು ಮುಂಜಾನೆಯಿಂದ 6.30 ರಿಂದ ಪುನಃ ಹುಡುಕಾಟ ಶುರು ಮಾಡಿದ್ದಾರೆ.
ಈ ಬಗ್ಗೆ ಜಿಲ್ಲಾ ಎಸ್ ಪಿ ಸಂಜೀವ ಪಾಟೀಲ ಅವರು ಪತ್ರಕರ್ತರಿಗೆ ಮಾಹಿತಿ ನೀಡಿದ್ದಾರೆ. “ಬುಧವಾರ ರಾತ್ರಿಯಿಂದ ಸ್ವಾಮೀಜಿ ಕಾಣೆಯಾಗಿರುವ ಬಗ್ಗೆ ಶುಕ್ರವಾರ ಭಕ್ತರು ದೂರು ನೀಡಿದ್ದರು. ಭಕ್ತರ ದೂರಿನ ಮೇರೆಗೆ ತನಿಖೆ ಕೈಗೊಂಡಿದ್ದೆವು. ಬುಧವಾರ ಹಾಗೂ ಹಿಂದಿನ ದಿನಗಳ ಘಟನಾವಳಿಗಳ ಬಗ್ಗೆ ತನಿಖೆ ನಡೆಸಿದೆವು. ತನಿಖೆ ವೇಳೆ ಆಶ್ರಮಕ್ಕೆ ಯಾರ್ಯಾರು ಬಂದು ಹೋಗಿದ್ದರೆಂಬುದರ ಬಗ್ಗೆ ವಿಚಾರಣೆ ನಡೆಸಲಾಯಿತು. ಸ್ವಾಮೀಜಿಗೆ ಪರಿಚಯವಿದ್ದ ವ್ಯಕ್ತಿಯೊಬ್ಬನ ವಿಚಾರಣೆಗೊಳಪಡಿಸಿದಾಗ ಆ ವ್ಯಕ್ತಿ ಆಶ್ರಮದಲ್ಲಿ ಮಹಾರಾಜರನ್ನು ಕೊಲೆ ಮಾಡಿ ಬೇರೆಡೆ ಶವ ಬಿಸಾಕಿದ ಬಗ್ಗೆ ಮಾಹಿತಿ ನೀಡಿದ್ದಾನೆ. ಈ ಕೃತ್ಯಕ್ಕೆ ಸಹಕಾರ ನೀಡಿದ್ದ ಇನ್ನೊಬ್ಬನನ್ನು ಸಹ ಬಂಧಿಸಿದ್ದೇವೆ. ಸ್ವಾಮೀಜಿ ನೀಡಿದ್ದ ಹಣ ವಾಪಸ್ ಕೇಳಿದ್ದಕ್ಕೆ ಕೊಲೆ ಮಾಡಿದ್ದಾಗಿ ತಪ್ಪು ಒಪ್ಪಿಕೊಂಡಿದ್ದಾನೆ” ಎಂದು ಮಾಹಿತಿ ನೀಡಿದ್ದಾರೆ.
ಸಾಕ್ಷ್ಯಾಧಾರ ಕಲೆಹಾಕಿ ನ್ಯಾಯಾಲಯಕ್ಕೆ ನೀಡಬೇಕಿರುವ ಹಿನ್ನೆಲೆ ಸದ್ಯಕ್ಕೆ ಕಾರ್ಯಾಚರಣೆ ಸ್ಥಳದಲ್ಲಿ ಯಾರಿಗೂ ಪ್ರವೇಶವಿಲ್ಲ. ಪ್ರಕರಣದ ತನಿಖೆ ಮುಂದುವರಿದಿದೆ. ಬೇರೆ ವ್ಯವಹಾರ ಏನಾದರೂ ಇತ್ತಾ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಆರೋಪಿಗಳು ಹೇಳಿದ ಹಲವು ಪ್ರದೇಶಗಳಲ್ಲಿ ಶೋಧ ಮಾಡಿದ್ದೇವೆ . ಮೃತದೇಹ ಶೋಧಕಾರ್ಯ ಸ್ಥಳಕ್ಕೆ ಯಾರಿಗೂ ಪ್ರವೇಶವಿಲ್ಲ, ಗ್ರಾಮಸ್ಥರು ಹಾಗೂ ಪತ್ರಕರ್ತರು ಸಹಕರಿಸಬೇಕು ಎಂದು ಎಂದು ಸಂಜೀವ ಪಾಟೀಲ ಹೇಳಿದರು.
ಜೈನಮುನಿ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರು ಕಳೆದ 15 ವರ್ಷಗಳಿಂದ ನಂದಿ ಪರ್ವತದಲ್ಲಿ ವಾಸವಾಗಿದ್ದರು. ಕಳೆದ ಬುಧವಾರ ಜೈನಮುನಿಗಳು ತಾವು ವಾಸವಿದ್ದ ಕೋಣೆಯಲ್ಲಿ ಪಿಂಚಿ, ಕಮಂಡಲ ಹಾಗೂ ಮೊಬೈಲನ್ನು ಬಿಟ್ಟು ಕಾಣೆಯಾಗಿದ್ದರು. ಸಾಮಾನ್ಯವಾಗಿ ಜೈನಮುನಿಗಳು ಎಲ್ಲೇ ಹೋಗಬೇಕಾದರೂ ಪಿಂಚಿ, ಕಮಂಡಲ ತಗೆದುಕೊಂಡು ಹೋಗುವ ಪದ್ಧತಿ ಇದೆ. ಆದರೆ ಜೈನ ಮುನಿ ನಾಪತ್ತೆಯಾದ ದಿನ ಇವುಗಳು ಆಶ್ರಮದಲ್ಲೇ ಇದ್ದುದರಿಂದ ಭಕ್ತರ ಆತಂಕಕ್ಕೆ ಕಾರಣವಾಗಿತ್ತು.
ಮುಂಜಾಗ್ರತಾ ಕ್ರಮವಾಗಿ ಹಿರೇಕೋಡಿ ಗ್ರಾಮದಲ್ಲಿ ಪೊಲೀಸ್ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಸ್ವಾಮೀಜಿ ನೆನೆದು ಗ್ರಾಮಸ್ಥರು ಕಣ್ಣೀರು ಹಾಕುತ್ತಿದ್ದಾರೆ.