ಧಾರವಾಡ, ೨೭ : ಹಿರಿಯ ಅನುಭಾವಿಗಳು, ಕನ್ನಡದ ಶ್ರೇಷ್ಠ ವಿದ್ವಾಂಸರು, ಸಾವಿರಾರು ವಿದ್ಯಾರ್ಥಿಗಳಿಗೆ ಬದುಕಿಗೆ ಬೆಳಕು ನೀಡಿದ ಗುರುಗಳು ಆದ ಧಾರವಾಡದ ಸಪ್ತಾಪೂರ ಕಾಲೋನಿಯ ನಿವಾಸಿ ಖ್ಯಾತ ಸಾಹಿತಿಗಳಾದ ಡಾ. ಗುರುಲಿಂಗ ಶಂಕರಪ್ಪ ಕಾಪಸೆ (೯೬) ಇಂದು ನಿಧನರಾಗಿದ್ದು ಅವರ ಅಂತಿಮ ಇಚ್ಛೆಯಂತೆ ಬೈಲಹೊಂಗಲದ ಡಾ. ರಾಮಣ್ಣವರ ಚಾರಿಟೇಬಲ್ ಟ್ರಸ್ಟ ಮುಖಾಂತರ ಕೆಎಲ್ಇ ಆಯುರ್ವೇದ ಮಹಾವಿದ್ಯಾಲಯ, ಬೆಳಗಾವಿಗೆ ದೇಹದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಡಾ.ಮಹಾಂತೇಶ ರಾಮಣ್ಣವರ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು ಶರೀರ ರಚನಾ ವಿಭಾಗಕ್ಕೆ ಹಸ್ತಾಂತರ ಮಾಡಿದರು. ಮೃತರಿಗೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಬೆಳಗಾವಿಯಲ್ಲಿ ಧಾರವಾಡ ವಿಶ್ವವಿದ್ಯಾಲಯದ ಪಿ ಜಿ ಸೆಂಟರ್ ೧೯೮೪ರಲ್ಲಿ ಬೆಳಗಾವಿಯ ಲಿಂಗರಾಜ್ ಕಾಲೇಜಿನ ಆಭರಣದಲ್ಲಿ ಪ್ರಾರಂಭಿಸಲು ಕೆಎಲ್ಇ ಸಂಸ್ಥೆಯ ಕಾರ್ಯಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು ಅನುಮತಿಯನ್ನು ನೀಡಿದ್ದು ಡಾ.ಗುರುಲಿಂಗ ಕಾಪಸೆ ಅವರ ಮೇಲಿನ ಅಪಾರವಾದ ಪ್ರೀತಿ ಕಾರಣವಾಗಿತ್ತು. ಈ ಪಿಜಿ ಕ್ಯಾಂಪಸ್ಸಿನ ಆಡಳಿತ ಅಧಿಕಾರಿಗಳಾಗಿ ಕಾಪಾಸೆ ಅವರು ಅನನ್ಯವಾದ ಕೊಡುಗೆಯನ್ನು ನೀಡಿ ಕಟ್ಟಿ ಬೆಳೆಸಿದರು. ಅಂದಿನಿಂದ ಕೆಎಲ್ಇ ಹಾಗೂ ಅವರ ನಡುವಿನ ಸ್ನೇಹ ಸೇತುವೆ ಬೆಸೆದುಕೊಂಡಿತು. ಕಾಲಕಾಲಕ್ಕೆ ಸಂಸ್ಥೆಯನ್ನು ಮರ್ಗರ್ಶಿಸಿದರು. ಕೆಎಲ್ಇ ಶತಮಾನೋತ್ಸವದಲ್ಲಿಯೂ ಲಿಂಗರಾಜ್ ಕಾಲೇಜು ಗ್ರಂಥಕ್ಕೆ ಮುನ್ನಡೆಯನ್ನು ಬರೆದು ಕೊಟ್ಟರು. ಸಾಹಿತ್ಯಕವಾಗಿ ಸಂಸ್ಕೃತಿಕವಾಗಿ ಸಂಶೋಧನಾತ್ಮಕವಾಗಿ ನಾಡಿಗೆ ಅಪಾರ ಕೊಡಿಗೆ ನೀಡಿದ ಕಾಪ್ಸೆ ಅವರ ನಿಧನ ನೋವು ತಂದಿದೆ ಎಂದು ಡಾ. ಕೋರೆ ಅವರು ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಿದ್ದಾರೆ.
ದೇಹದಾನ ಮಾಡಿದ ಕಾಪ್ಸೆ ಕುಟುಂಬದವರಿಗೆ ಪ್ರಭಾಕರ ಕೋರೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.