ಬೆಳಗಾವಿ: ಯಶರಾಜ ಫಿಲಂಸ್ ಬ್ಯಾನರ್ ಅಡಿ ಆದಿತ್ಯ ಚೋಪ್ರಾ ನಿರ್ಮಿಸಿರುವ ಶಾರೂಕ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಬಹುಚರ್ಚಿತ ಪಠಾಣ ಚಿತ್ರ ಪ್ರದರ್ಶಿಸದಂತೆ ಆಗ್ರಹಿಸಿ ಮಂಗಳವಾರ ರಾತ್ರಿ ಕೆಲ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಬೆಳಗಾವಿ ನಗರದ ಸ್ವರೂಪ-ನರ್ತಕಿ ಚಿತ್ರಮಂದಿರಕ್ಕೆ ಮುತ್ತಿಗೆ ಹಾಕಿ, ಬ್ಯಾನರ್ ಹರಿದು ದಾಂಧಲೆ ನಡೆಸಿದರು. 30 ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಅವರ ವಿರುದ್ಧ ಖಡೇಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿತ್ರಮಂದಿರದ ಮೇಲೆ ದಾಳಿ ನಡೆಸಿ ಪಠಾಣ ಚಿತ್ರದ ಬ್ಯಾನರ್ ಹರಿದು ಹಿಂದು ಕಾರ್ಯಕರ್ತರು ಆಕೋಶ ವ್ಯಕ್ತಪಡಿಸಿದ್ದರಿಂದ ಸ್ಥಳಕ್ಕೆ ಪೊಲೀಸರು ಆಗಮಿಸಿ ಕಾರ್ಯಕರ್ತರನ್ನು ವಶಕ್ಕೆ ಪಡೆದು 30 ಮಂದಿ ವಿರುದ್ಧ
ಪ್ರಕರಣ ದಾಖಲಿಸಿದ್ದಾರೆ.
ಸ್ವರೂಪ ಚಿತ್ರಮಂದಿರದ ಬಳಿ ಉದ್ವಿಗ್ನ ಪರಿಸ್ಥಿತಿ ಉಂಟಾದ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಚಿತ್ರ ಮಂದಿರದ ಬಳಿ ಸಿಪಿಐ ನೇತೃತ್ವದಲ್ಲಿ ಕೆಎಸ್ಆರ್ಪಿ ತುಕಡಿ ಭದ್ರತೆಗಾಗಿ ನಿಯೋಜಿಸಲಾಗಿದೆ.
ವಿಶ್ವದಾದ್ಯಂತ ಶಾರೂಕ ಖಾನ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ಪಠಾಣ ಚಿತ್ರ ಜನವರಿ 25ರಂದು ಬಿಡುಗಡೆಯಾಗಿದೆ. ಚಿತ್ರದ ‘ಬೇಷರಮ್ ರಂಗ್’ ಹಾಡಿನಲ್ಲಿ ಹತ್ತಾರು ಬಣ್ಣಗಳ ಉಡುಪುಗಳನ್ನು ಹಾಕಿಸಿ, ‘ಬೇಷರಮ್ ರಂಗ್’ (ನಾಚಿಕೆಯಿಲ್ಲದ ಬಣ್ಣ) ಎಂಬರ್ಥದಲ್ಲಿ ಹಾಡನ್ನು ಚಿತ್ರೀಕರಿಸಲಾಗಿದೆ. ಈ ಒಂದು ಹಾಡಿನಲ್ಲಿ ನಟಿ ದೀಪಿಕಾ ಹತ್ತಾರು ಬೇರೆ ಬೇರೆ ಬಣ್ಣಗಳ ಉಡುಪು ಧರಿಸಿ ನೃತ್ಯ ಮಾಡಿದ್ದು ಅದರಲ್ಲಿ ಕೇಸರಿ ಬಣ್ಣದ ಉಡುಪು ಸಹ ಸೇರಿದೆ. ಕೇಸರಿ ಬಣ್ಣದ ಬಿಕಿನಿ ಧರಿಸಿರುವುದರಿಂದ ಹಿಂದು ಧರ್ಮವನ್ನು ಅವಮಾನಿಸಲಾಗಿದೆ ಎಂದು ಕೆಲ ಹಿಂದೂ ಸಂಘಟನೆಗಳು ಆರೋಪಿಸಿ, ಚಿತ್ರದ ವಿರುದ್ಧ “ಬಹಿಷ್ಕಾರ ಅಭಿಯಾನ” ಮಾಡುವುದಾಗಿ ಎಚ್ಚರಿಕೆ ನೀಡಿದ್ದವು. ಇತ್ತೀಚಿನ ದಿನಗಳಲ್ಲಿ ಜಾಲತಾಣಗಳ ಮೂಲಕ “ಬಹಿಷ್ಕಾರ ಅಭಿಯಾನ” ಮಾಡುವುದು ಮಾಮೂಲಿಯಾಗಿದ್ದು ಪಠಾಣ ಚಿತ್ರ ಸಹ ಅದರಲ್ಲಿ ಸೇರ್ಪಡೆಯಾಗಿದೆ.