ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ಜಂಗ್ಲಿಪೇಟೆ ನಿವಾಸಿ ಸಂತೋಷ ಮುರುಗೋಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ಸ್ಪೆಕ್ಟರ್ ಅವರನ್ನು ವರ್ಗಾವಣೆ ಮಾಡಲಾಗಿದೆ.
ಈ ಪ್ರಕರಣದಲ್ಲಿ ಪೊಲೀಸರ ಕೈವಾಡ ಇದೆ ಎಂದು ಆರೋಪಿಸಿ ಕಸಬಾಪೇಟೆ ಪೊಲೀಸ್ ಠಾಣೆ ಮುಂದೆ ಮೃತನ ಸಂಬಂಧಿಕರು ಶವ ಇಟ್ಟು ಪ್ರತಿಭಟನೆ ಮಾಡಿದ್ದರು.
ಹಳೆ ಹುಬ್ಬಳ್ಳಿಯಲ್ಲಿ ಸಂತೋಷ ಮುರುಗೋಡನನ್ನು ಶುಕ್ರವಾರ ರಾತ್ರಿ ಹಳೇ ವೈಷಮ್ಯದ ಹಿನ್ನೆಲೆ ಶಿವಾನಂದ ನಾಯಕ ಎಂಬಾತನು ಚಾಕು ಇರಿದು ಕೊಲೆ ಮಾಡಿದ್ದ. ಕೊಲೆ ಹಿನ್ನೆಲೆಯಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿ ಪೊಲೀಸ್ ಠಾಣೆ ಮುಂದೆ ಜಂಗ್ಲೀಪೇಟೆ ನಿವಾಸಿಗಳು ಹಾಗೂ ಸಂತೋಷ ಕುಟುಂಬಸ್ಥರು ಮೃತದೇಹವನ್ನು ಕಸಬಾ ಪೊಲೀಸ್ ಠಾಣೆಗೆ ತಂದು ಪ್ರತಿಭಟನೆ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು. ಈ ವೇಳೆ ಶಿವಾನಂದ ನಾಯ್ಕಗೆ ಪೊಲೀಸರ ಬೆಂಬಲ ಇದೆ ಎಂದು ಸಹ ಆರೋಪಿಸಿದ್ದರು.
ಈ ವೇಳೆ ಕಸಬಾಪೇಟೆ ಪೊಲೀಸ್ ಠಾಣೆ ಪೊಲೀಸ್ ಸಬ್ ಇನ್ಸಪೆಕ್ಟರ್ ಅಡೆಪ್ಪ ಬನ್ನಿ ಅವರನ್ನು ಹುಬ್ಬಳ್ಳಿ ಧಾರವಾಡ ಸಿಸಿಬಿಗೆ ವರ್ಗಾವಣೆ ಮಾಡಿ, ಸಿಸಿಬಿ ಪೊಲೀಸ್ ಇನ್ಸ್ಪೆಕ್ಟರ್ ಆರ್ ಎಚ್ ಹಳ್ಳೂರು ಅವರನ್ನು ಕಸಬಾಪೇಟೆ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲು ಆಯುಕ್ತ ಲಾಬೂರಾಮ ಆದೇಶ ಹೊರಡಿಸಿದ್ದಾರೆ.