ಬೆಳಗಾವಿ : ಭಾರತೀಯ ಸಂಸ್ಕೃತಿ ಇಡೀ ಜಗತ್ತಿನಲ್ಲಿ ಶ್ರೇಷ್ಠವಾದ ಸಂಸ್ಕೃತಿಯಾಗಿದೆ. ದೇಶದಲ್ಲಿನ ಪ್ರತಿ ಭಾಗದಲ್ಲಿ ವಿವಿಧ ಬಗೆಯ ಸಂಸ್ಕೃತಿಗಳಿವೆ. ಜಾತಿ, ಬೇಧ, ಭಾವ ತಾರತಮ್ಯ ಬಿಟ್ಟು ಭಾರತೀಯ ಸಂಸ್ಕೃತಿ ಉಳಿಸಬೇಕಿದೆ ಎಂದು ಬೆಳಗಾವಿ ಉತ್ತರ ವಿಧಾನಸಭಾ ಮತಕ್ಷೇತ್ರದ ಶಾಸಕ ಅನೀಲ ಬೆನಕೆ ಅವರು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಬುಧವಾರ ನಡೆದ ಚಿಗುರು ಕಾರ್ಯಕ್ರಮ-2022ರ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇಡೀ ಜಗತ್ತಿನಲ್ಲಿ ಭಾರತೀಯ ಸಂಸ್ಕೃತಿಯ ಅಧ್ಯಯನಕ್ಕೆ ವಿವಿಧ ದೇಶದಿಂದ ಜನರು ಬರುತ್ತಾರೆ. ಇದು ನಮ್ಮ ಭಾರತ ದೇಶದ ಹೆಮ್ಮೆಯಾಗುತ್ತದೆ. ಅನೇಕ ದೇಶಗಳು ವಿಭಜನೆಯಾಗಿವೆ ಆದರೆ ಭಾರತ ದೇಶದ ಅಖಂಡತೆಗೆ ಮುಖ್ಯ ಕಾರಣ ನಮ್ಮ ದೇಶದ ಸಂಸ್ಕೃತಿಯಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಶಾಲೆಯಲ್ಲಿ ಯಾವುದೇ ಮಾಧ್ಯಮದ ಮೂಲಕ ಶಿಕ್ಷಣ ಪಡೆದು ರ್ಯಾಂಕ್ ಗಳಿಸುವುದು ಮಾತ್ರ ಗಮನದಲ್ಲಿ ಇರಿಸದೇ ದೇಶದ ಸಂಸ್ಕೃತಿಯನ್ನು ಎತ್ತಿ ಹಿಡಿದು, ಅದರ ಉಳಿವಿಗೆ ನಿರಂತರ ಶ್ರಮಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳು ಸಂಸ್ಕೃತಿಯ ಬಗ್ಗೆ ಅರಿಯಬೇಕು:
ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯ ಅರಿವು ಮೂಡಿಸಿ, ಸಂಸ್ಕೃತಿಯ ಉಳಿವಿಗಾಗಿ ಚಿಗುರು ಕಾರ್ಯಕ್ರಮ ರಾಜ್ಯ ಸರ್ಕಾರದಿಂದ ನಡೆಸಲಾಗುತ್ತಿದೆ. ದೇಶದಲ್ಲಿರುವ ವಿವಿಧ ಸಂಸ್ಕೃತಿಯನ್ನು ಪ್ರತಿಯೊಬ್ಬರೂ ಗೌರವಿಸಬೇಕು. ಪರಸ್ಪರ ಗೌರವಿಸಿ, ಪ್ರೀತಿಯಿಂದ ನಡೆದುಕೊಳ್ಳುವುದು ಸಂಸ್ಕೃತಿಯ ಮೂಲ ಉದ್ದೇಶವಾಗಿದೆ ಎಂದು ತಿಳಿಸಿದರು.
ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಇತಿಹಾಸದ ಬಗ್ಗೆ ಮೊದಲು ಅರಿಯಬೇಕು ಇತಿಹಾಸ ಅರಿವು ಇದ್ದರೆ ಮಾತ್ರ ಸಂಸ್ಕೃತಿ ಉಳಿಸಿ, ಬೆಳೆಸಲು ಸಾಧ್ಯ ಎಂದು ಶಾಸಕ ಬೆನಕೆ ಹೇಳಿದರು.
ಸಾಂಸ್ಕೃತಿಕ ಕಾರ್ಯಕ್ರಮ:
ಶಾಲಾ ಮಕ್ಕಳಿಂದ ಸುಗಮ ಸಂಗೀತ, ಏಕಪಾತ್ರಾಭಿನಯ, ಸಮೂಹಗೀತೆ, ಭರತನಾಟ್ಯ, ಜಾನಪದ ನೃತ್ಯ, ವಚನಸಂಗೀತ, ಭಾವಗೀತೆ, ಸಾಮೂಹಿಕ ನೃತ್ಯ, ಸೇರಿದಂತೆ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ವಿವಿಧ ಶಾಲಾ ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಬಸವರಾಜ ನಲತವಾಡ, ಶಿಕ್ಷಣಾಧಿಕಾರಿ ವಾಯ್. ಜಿ. ಭಜಂತ್ರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ಉಪಸ್ಥಿತರಿದ್ದರು, ಪ್ರತಾಪ ಕುಮಾರ ನಿರೂಪಿಸಿ, ವಂದಿಸಿದರು.