ಅಥಣಿ : ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಮತ್ತು ವಿಧಾನ ಪರಿಷತ್ ಸದಸ್ಯ ಲಕ್ಷಣ ಸವದಿಯವರ ರಾಜಕೀಯ ಸಮರ ಇನ್ನೊಂದು ಹಂತಕ್ಕೇರಿದ್ದು, “ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾದರೆ ಸುಮ್ಮನಿರೊಲ್ಲ” ಎಂದು ಸವದಿ ಹೇಳಿದರೆ, “ಮಹೇಶ ಕುಮಠಳ್ಳಿಯ ತ್ಯಾಗದಿಂದ ಬಿಜೆಪಿ ಸರಕಾರ ರಚನೆಯಾಗಿದೆ. ಅವರಿಗೆ ಅಥಣಿಯಿಂದ ಸ್ಪರ್ಧೆಗೆ ಅವಕಾಶ ನೀಡದಿದ್ದರೆ ನಾನು ರಾಜಕೀಯ ನಿವೃತ್ತಿ ಪಡೆಯುವೆ” ಎಂದು ರಮೇಶ ಜಾರಕಿಹೊಳಿ ಹೇಳಿದ್ದಾರೆ.
ಮಹೇಶ ಕುಮಠಳ್ಳಿ ಅಥಣಿಯಿಂದ ಸ್ಪರ್ಧೆ ಕುರಿತು ರಮೇಶ ಜಾರಕಿಹೊಳಿ ಹಲವು ವಿಚಾರ ಹಂಚಿಕೊಂಡಿದ್ದು, ಕುಮಠಳ್ಳಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವುದು ನಿಶ್ಚಿತ. ಸವದಿ ಅವರಿಗೆ ಕನಿಷ್ಠ ಜ್ಞಾನ ಬೇಕು. ಕುಮಠಳ್ಳಿ ತ್ಯಾಗದಿಂದ ಬಿಜೆಪಿ ಸರ್ಕಾರವಾಗಿದೆ. ಸವದಿ ಈಗಾಗಲೇ ಪರಿಷತ್ ಸದಸ್ಯರಾಗಿ ಇನ್ನೂ 5 ವರುಷದ ಅವಧಿ ಹೊಂದಿದ್ದಾರೆ. ಮತ್ತೆ ಯಾವ ಕಾರಣಕ್ಕೆ ಅವರು ಚುನಾವಣೆಗೆ ಸ್ಪರ್ಧೆ ಮಾಡುತ್ತಾರೆ ಎಂಬುದು ತಿಳಿಯುತ್ತಿಲ್ಲ ಎಂದರು.
ಅಥಣಿಯಲ್ಲಿ ಈ ಕುರಿತು ಮಾತನಾಡಿದ ಜಾರಕಿಹೊಳಿ, ಬಿಜೆಪಿ ಪಕ್ಷದಲ್ಲಿ ಯಾವುದೇ ಭಿನ್ನಮತವಿಲ್ಲ, ಹಾಲಿ ಶಾಸಕ ಮಹೇಶ ಕುಮಠಳ್ಳಿಗೆ ಪಕ್ಷದ ವರಿಷ್ಠರು ಹಾಗೂ ಹೈಕಮಾಂಡ್ ಟಿಕೆಟ್ ನೀಡುತ್ತಾರೆ. ಒಂದು ವೇಳೆ ಟಿಕೆಟ್ ನೀಡದಿದ್ದರೆ ತಾವೂ ಗೋಕಾಕ ಮತಕ್ಷೇತ್ರದಿಂದ ಸ್ಪರ್ಧೆ ಮಾಡದೇ ರಾಜಕೀಯ ನಿವೃತ್ತಿ ಹೊಂದುವದಾಗಿ ತಿಳಿಸಿದರು.
ಅಥಣಿಯಿಂದ ನಾಲ್ಕು ಬಾರಿ ಗೆದ್ದು ಐದನೇ ಬಾರಿ ಕಾಂಗ್ರೆಸ್ ನ ಕುಮಠಳ್ಳಿಯಿಂದ ಸೋತಿದ್ದ ಸವದಿ ಅವರು, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ಉಪಮುಖ್ಯಮಂತ್ರಿಯಾಗಿದ್ದರು. ಬದಲಾದ ರಾಜಕೀಯ ಸ್ಥಿತ್ಯಂತರದಿಂದ ಕುಮಠಳ್ಳಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿ ಅಥಣಿ ಕ್ಷೇತ್ರದಿಂದ ಉಪಚುನಾವಣೆಗೆ ಸ್ಪರ್ಧಿಸಿದ್ದರು. ವಿಪರ್ಯಾಸವೆಂದರೇ ತಮ್ಮನ್ನು ಸೋಲಿಸಿದ್ದ ಕುಮಠಳ್ಳಿಯನ್ನೇ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿಯನ್ನು ಹೊಂದಿ ಅದನ್ನು ಯಶಸ್ವಿಯಾಗಿ ಸವದಿ ನಿಭಾಯಿಸಿದರು. ಅದಕ್ಕಾಗಿ ಯಾವ ಸಂವೈಧಾನಿಕ ಹುದ್ದೆಯಲ್ಲಿರದಿದ್ದರೂ ಯಾರೂ ಊಹಿಸಲು ಆಗದ ಉಪಮುಖ್ಯಮಂತ್ರಿ ಹುದ್ದೆ ಪಡೆದರು.
ನಂತರ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವ ಅವರ ಅವಧಿ ಇನ್ನೂ 5 ವರ್ಷವಿದೆ. ಪರಿಷತ್ ಗಿಂತ ವಿಧಾನಸಭಾ ಸದಸ್ಯತ್ವದ ಮೇಲೇ ಗಮನವಿಟ್ಟಿರುವ ಅವರು ಬರುವ ಚುನಾವಣೆಯಲ್ಲಿ ಪುನಃ ಅಥಣಿಯಿಂದ ಸ್ಪರ್ಧಿಸಲು ಬಯಸಿದ್ದಾರೆ. ತಾವು ಗೆದ್ದ ನಂತರ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ, ಆ ಸ್ಥಾನಕ್ಕೆ ಕುಮಠಳ್ಳಿಯವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ಹೊರುವದಾಗಿ ಹೇಳುತ್ತಿದ್ದಾರೆ.
ಆದರೆ, ಜಿಲ್ಲೆಯ ರಾಜಕೀಯ ಕ್ಷೇತ್ರವನ್ನು ತಮ್ಮ ಹತೋಟಿಯಲ್ಲಿಟ್ಟುಕೊಳ್ಳಬೇಕೆಂಬ ಜಾರಕಿಹೊಳಿ ಸಹೋದರರಿಗೆ ಸವದಿ ಅಡ್ಡಗಾಲಾಗಿದ್ದಾರೆ. ಹುಕ್ಕೇರಿ ಶಾಸಕ ಉಮೇಶ ಕತ್ತಿ ನಿಧನಾನಂತರ ಜಿಲ್ಲೆಯ ರಾಜಕಾರಣದಲ್ಲಿ ಹಲವು ಬದಲಾವಣೆಗಳಾಗಿದ್ದು ಜಿಲ್ಲೆಯ ಮೇಲಿನ ಹತೋಟಿಗೆ ಜಾರಕಿಹೊಳಿ ಮತ್ತು ಸವದಿ ಕುಟುಂಬಗಳು ಕಿತ್ತಾಡುತ್ತಿವೆ.
ಸವದಿ ಇತ್ತೀಚಿಗೆ ಅಥಣಿಯಲ್ಲಿ ಮುಸ್ಲಿಂ ಸಮಾಜದವರ ಸಭೆ ಏರ್ಪಡಿಸಿ ಅವರ ಬೆಂಬಲ ಕೋರಿದ್ದರು. ತಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾದರೆ ಸುಮ್ಮನಿರುವುದಿಲ್ಲ ಎಂದು ಅಪರೋಕ್ಷವಾಗಿ ರಮೇಶ ಜಾರಕಿಹೊಳಿ ವಿರುದ್ಧ ಹೇಳಿಕೆ ನೀಡಿದ್ದರು.
ಸವದಿ ಪುತ್ರ ಕೂಡ ಜಾರಕಿಹೊಳಿ ವಿರುದ್ಧ ಹೇಳಿಕೆ ನೀಡಿ “ಅತಿಯಾದರೆ ಕಷ್ಟ, ಎಚ್ಚರಿಕೆಯಾಗಿರಿ” ಎಂದು ಹೇಳಿಕೆ ನೀಡಿದ್ದಾರೆ.