ಹೊಸದಿಲ್ಲಿ, ೧೭-: ಎಎಪಿ ನಾಯಕ ಮನೀಶ ಸಿಸೋಡಿಯಾ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ಹಲವಾರು ಸುಳ್ಳು ಪ್ರಕರಣಗಳನ್ನು ದಾಖಲಿಸಿ ಸುದೀರ್ಘ ಕಾಲ ಜೈಲಿನಲ್ಲಿಡಲು ಯೋಜಿಸಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಗುರುವಾರ ಆರೋಪಿಸಿದ್ದಾರೆ.
ದೆಹಲಿ ಸರ್ಕಾರದ ಫೀಡ್ಬ್ಯಾಕ್ ಘಟಕಕ್ಕೆ (ಎಫ್ಬಿಯು) ಸಂಬಂಧಿಸಿದಂತೆ ರಾಜಕೀಯ ಗೂಢಾಚಾರದ ಆರೋಪದ ಮೇಲೆ ಸಿಸೋಡಿಯಾ ಮತ್ತು ಇತರರ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿದ ನಂತರ ಕೇಜ್ರಿವಾಲ್ ಈ ಹೇಳಿಕೆ ನೀಡಿದ್ದಾರೆ.
‘ಮನೀಶ್ ಸಿಸೋಡಿಯಾ ವಿರುದ್ಧ ಹಲವಾರು ಸುಳ್ಳು ಪ್ರಕರಣಗಳನ್ನು ದಾಖಲಿಸಿ ಸುದೀರ್ಘ ಅವಧಿಗೆ ಕಸ್ಟಡಿಯಲ್ಲಿ ಇಡುವುದು ಪ್ರಧಾನಿಯವರ ಯೋಜನೆಯಾಗಿದೆ. ಇದೊಂದು ದೇಶಕ್ಕೆ ದುಃಖಕರ ಸಂಗತಿಯಾಗಿದೆ’ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ದೆಹಲಿ ಸರ್ಕಾರದ ವ್ಯಾಪ್ತಿಗೆ ಒಳಪಡುವ ವಿವಿಧ ಇಲಾಖೆಗಳು ಮತ್ತು ಸ್ವಾಯತ್ತ ಸಂಸ್ಥೆಗಳು, ಸಂಸ್ಥೆಗಳು ಮತ್ತು ಘಟಕಗಳ ಕಾರ್ಯನಿರ್ವಹಣೆಯ ಕುರಿತು ಸಂಬಂಧಿತ ಮಾಹಿತಿ ಮತ್ತು ಪ್ರತಿಕ್ರಿಯೆಯನ್ನು ಸಂಗ್ರಹಿಸಲು 2015ರಲ್ಲಿ ಫೀಡ್ಬ್ಯಾಕ್ ಘಟಕವನ್ನು ಸ್ಥಾಪಿಸಲು ಎಎಪಿಯು ಪ್ರಸ್ತಾಪಿಸಿತ್ತು ಮತ್ತು ಅಲ್ಲದೆ ಇದು ಬೇಹುಗಾರಿಕೆ ಮಾಡಲು ಬಳಕೆಯಾಗುತ್ತಿತ್ತು ಎಂದು ಸಿಬಿಐ ಹೇಳಿದೆ.