LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಕಾಲಮಿತಿಯಲ್ಲಿ ಎಸ್‌ಐಆರ್‌ ಪೂರ್ಣಗೊಳಿಸಿ: ಅಧಿಕಾರಿಗಳಿಗೆ ಅನ್ಬುಕುಮಾರ ಸೂಚನೆ

ಬೆಳಗಾವಿ, ಜುಲೈ 20: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಿ, ಶೇ.100ರಷ್ಟು ಗುರಿ ಸಾಧಿಸಲು ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮನೆ–ಮನೆಗೆ ಭೇಟಿ ನೀಡಿ ಕಾರ್ಯವನ್ನು ಚುರುಕುಗೊಳಿಸಬೇಕು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಎಸ್‌ಐಆರ್‌ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಈ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದ್ದು, ಮತದಾರರ ಪಟ್ಟಿಯ ನಿಖರತೆ ಮತ್ತು ಪರಿಷ್ಕರಣೆಗೆ ಇದು ಅತ್ಯಗತ್ಯವಾಗಿದೆ ಎಂದು ಹೇಳಿದರು.

ಎಸ್‌ಐಆರ್‌ಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಗೆ ಸಕಾಲದಲ್ಲಿ ಒದಗಿಸಬೇಕು. ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆ ಕಾಪಾಡುವ ಉದ್ದೇಶದಿಂದ ಪ್ರತಿ ಹಂತದ ಮಾಹಿತಿಯನ್ನು ಅಧಿಕೃತವಾಗಿ ಹಂಚಿಕೊಳ್ಳಬೇಕು ಎಂದು ನಿರ್ದೇಶಿಸಿದರು.

ರಾಜಕೀಯ ಪಕ್ಷಗಳಿಂದ ಸಲ್ಲಿಕೆಯಾಗುವ ದೂರುಗಳು, ಆಕ್ಷೇಪಣೆಗಳು ಹಾಗೂ ಅರ್ಜಿಗಳನ್ನು ನಿಯಮಾನುಸಾರ ದಾಖಲಿಸಿ, ಅವುಗಳ ದಾಖಲೆಗಳನ್ನು ವ್ಯವಸ್ಥಿತವಾಗಿ ಸಂಗ್ರಹಿಸಬೇಕು. ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಅವುಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು ಎಂದು ತಿಳಿಸಿದರು.

ಎಸ್‌ಐಆರ್‌ ಪ್ರಕ್ರಿಯೆಯ ಪ್ರಗತಿ ಹಾಗೂ ಎದುರಾಗುವ ಸಮಸ್ಯೆಗಳ ಕುರಿತು ವಾರಕ್ಕೊಮ್ಮೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ, ಅವರ ಸಲಹೆ ಮತ್ತು ಆಕ್ಷೇಪಣೆಗಳನ್ನು ದಾಖಲಿಸಿಕೊಂಡು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಮತದಾರರು ದೀರ್ಘಕಾಲದಿಂದ ಮನೆಗಳಲ್ಲಿ ವಾಸವಿಲ್ಲದಿದ್ದರೆ, ಅಂತಹ ಪ್ರಕರಣಗಳ ಕುರಿತು ಸಮೀಪದ ಪೊಲೀಸ್ ಠಾಣೆಯಿಂದ ಮಾಹಿತಿ ಪಡೆದು ಪರಿಶೀಲನೆ ನಡೆಸಬಹುದು ಎಂದರು.

ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾತನಾಡಿ, ಚುನಾವಣಾ ಆಯೋಗದ ಎಲ್ಲ ಮಾರ್ಗಸೂಚಿಗಳು ಮತ್ತು ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಯಾವುದೇ ಲೋಪವಾಗದಂತೆ ಕರ್ತವ್ಯ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯ ಬಳಿಕ ಅನ್ಬುಕುಮಾರ್, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹಾಗೂ ಅಧಿಕಾರಿಗಳು ಖಾಸಬಾಗದ ಸರ್ಕಾರಿ ಶಾಲೆ ಸಂಖ್ಯೆ–3ಕ್ಕೆ ಭೇಟಿ ನೀಡಿ, ಬಿಎಲ್‌ಒಗಳೊಂದಿಗೆ ಎಸ್‌ಐಆರ್‌ ಪ್ರಗತಿ ಕುರಿತು ಮಾಹಿತಿ ಪಡೆದು ಪರಿಶೀಲನೆ ನಡೆಸಿದರು.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST