ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ನಿಂತಿದ್ದ ಲಾರಿಗೆ ಟಿಟಿ ಅಪ್ಪಳಿಸಿ 13 ಯಾತ್ರಾರ್ಥಿಗಳ ಸಾವು

 

ಬ್ಯಾಡಗಿ : ಸವದತ್ತಿ ರೇಣುಕಾ ಯಲ್ಲಮ್ಮನ ದೇವಸ್ಥಾನಕ್ಕೆ ಭೆಟ್ಟಿ ನೀಡಿ ತಮ್ಮ ಊರಿಗೆ ಮರಳುತ್ತಿದ್ದವರ ಟೆಂಪೋ ಟ್ರಾವೆಲರ್ (ಟಿಟಿ) ವಾಹನವೊಂದು ಅಪಘಾತಕ್ಕೀಡಾಗಿ ಮಕ್ಕಳು ಸೇರಿದಂತೆ 13 ಜನ ಸಾವನ್ನಪ್ಪಿರುವ ಭೀಕರ ದುರಂತ ಸಂಭವಿಸಿದೆ.‌

ಈ ಘಟನೆಯು ಹಾವೇರಿ ಜಿಲ್ಲೆಯ ಬ್ಯಾಡಗಿಯ ಗುಂಡೇನಹಳ್ಳಿ ಕ್ರಾಸ್‌ ಬಳಿ ಪೂನಾ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಶುಕ್ರವಾರ ಬೆಳಗಿನ ಜಾವ 3.30 ರ ಹೊತ್ತಿಗೆ ಸಂಭವಿಸಿದೆ.

ಮೃತರೆಲ್ಲರೂ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಎಮ್ಮೆಹಟ್ಟಿ ಗ್ರಾಮದವರು. ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ಹಿಂದಿನಿಂದ ಟಿಟಿ ವಾಹನ ಅಪ್ಪಳಿಸಿದೆ.‌ ಅಪಘಾತದ ರಭಸಕ್ಕೆ ಟಿಟಿ ವಾಹನ ಸಂಪೂರ್ಣ ನುಜ್ಜು ಗುಜ್ಜಾಗಿದೆ.

ಅಪಘಾತದಲ್ಲಿ ಮೃತಪಟ್ಟವರ ವಿವರ

ಪರಶುರಾಮ ( 45 ), ಭಾಗ್ಯ (40), ನಾಗೇಶ ( 50), ವಿಶಾಲಾಕ್ಷಿ ( 45), ಸುಭದ್ರಾ ಭಾಯಿ ( 65), ಪುಣ್ಯ( 50), ಮಂಜುಳಾ ಭಾಯಿ ( 57), ಆದರ್ಶ ( 23) ಡ್ರೈವರ್,  ಮಾನಸಾ ( 24), ರೂಪಾ ( 40), ಮಂಜುಳಾ ( 50) ಇನ್ನು ಘಟನೆಯಲ್ಲಿ ಮೃತಪಟ್ಟ 4 ವರ್ಷದ ಹಾಗೂ 6 ವರ್ಷದ ಮಕ್ಕಳ ಹೆಸರು ತಿಳಿದು ಬಂದಿಲ್ಲ.‌

ಕೃಷಿಕರಾಗಿದ್ದ ನಾಗೇಶ ಮತ್ತು ಅಂಗನವಾಡಿ ಶಿಕ್ಷಕಿಯಾಗಿದ್ದ ವಿಶಾಲಾಕ್ಷಿ ದಂಪತಿಗಳು ತಮ್ಮ ಪುತ್ರ ಆದರ್ಶಗೆ ಬ್ಯಾಂಕ್ ಸಾಲ ಮಾಡಿ ಟೆಂಪೋ ಟ್ರಾವೆಲರ್ ವಾಹನ ಕೊಡಿಸಿದ್ದರು. ಹೊಸ ವಾಹನದ ಪೂಜೆ ಮಾಡಿಸಲು ದೇವಸ್ಥಾನಗಳ ಪ್ರವಾಸ ಕೈಗೊಂಡಿದ್ದರು. ಸೋಮವಾರ ಚಿಂಚೋಳಿಯ ಮಾಯಕ್ಕ ದೇವಸ್ಥಾನದಲ್ಲಿ ವಾಹನದ ಪೂಜೆ ಮಾಡಿಸಿ ನಂತರ ಮಹಾರಾಷ್ಟ್ರದ ತುಳಜಾ ಭವಾನಿ ದೇವಸ್ಥಾನಕ್ಕೆ ಭೆಟ್ಟಿ ನೀಡಿ ಗುರುವಾರ ಸವದತ್ತಿಯ ಯಲ್ಲಮ್ಮ ದೇವಿಯ ದರ್ಶನ ಪಡೆದು ಮರಳಿ ತಮ್ಮ ಊರಿಗೆ ಹಿಂದಿರುಗುತ್ತಿದ್ದಾಗ ಈ ದುರಂತ ಸಂಭವಿಸಿದೆ.

ರಸ್ತೆ ಬದಿ ನಿಲ್ಲಿಸಿದ್ದ ಟ್ರಕ್ ಚಾಲಕನ ವಿರುದ್ಧ ಕೂಡ ಬ್ಯಾಡಗಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಅಪಘಾತದಲ್ಲಿ ಆಸ್ಪತ್ರೆಯಲ್ಲಿರುವ ಗಾಯಾಳು ಅರ್ಪಿತಾ (18) ಎಂಬಾಕೆ ಸೇರಿದಂತೆ ಮತ್ತೋರ್ವ ಚಿಕಿತ್ಸೆ ಪಡೆಯುತ್ತಿದ್ದಾರೆ. ವಾಹನದಲ್ಲಿ ಸಿಲುಕಿದ್ದ ಮೃತದೇಹಗಳನ್ನು ಹೊರ ತೆಗೆದಿರುವ ಅಗ್ನಿಶಾಮಕ ಇಲಾಖೆ ಸಿಬ್ಬಂದಿ, ಆಸ್ಪತ್ರೆಗೆ ಸಾಗಿಸಿದ್ದಾರೆ.‌ ಬ್ಯಾಡಗಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.