ಬೆಳಗಾವಿ, ನ. 27: ಹಲವು ವರ್ಷಗಳಿಂದ ಕುಟುಂಬದ ಸದಸ್ಯರ ನಡುವೆ ನಡೆಯುತ್ತಿದ್ದ 10 ಎಕರೆ ಜಮೀನಿನ ಹಂಚಿಕೆ ವಿವಾದ ವಿಕೋಪಕ್ಕೆ ತಿರುಗಿ, ಅತ್ತೆ ಮತ್ತು ಅಳಿಯನನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಯರಗಟ್ಟಿ ತಾಲೂಕಿನ ಜೀವಾಪುರ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.
ಬಸವ್ವ ಭೀಮಪ್ಪ ನಾಯ್ಕರ (60) ಹಾಗೂ ಅವರ ತಮ್ಮನ ಮಗ ರಮೇಶ ಹಣಮಂತ ನಾಯ್ಕರ (29) ಕೊಲೆಯಾದವರು. ಬಸವ್ವ ಅವರ ಸಹೋದರಿಯರ ಮಕ್ಕಳಾದ ರವಿ ಮತ್ತು ಪುಂಡಲೀಕ ಎಂಬುವವರ ವಿರುದ್ಧ ಕೊಲೆ ಆರೋಪ ಕೇಳಿಬಂದಿದ್ದು, ಇಬ್ಬರ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಗುರುವಾರ ರಾತ್ರಿ 9ರಿಂದ 9.30ರ ನಡುವಿನ ಅವಧಿಯಲ್ಲಿ ಈ ಜೋಡಿ ಕೊಲೆ ನಡೆದಿದ್ದು, ಶುಕ್ರವಾರ ಬೆಳಕಿಗೆ ಬಂದಿದೆ.
ಕುಟುಂಬದ ಅಣ್ಣತಮ್ಮಂದಿರು ಹಾಗೂ ಅಕ್ಕತಂಗಿಯರ ನಡುವೆ 10 ಎಕರೆ ಜಮೀನಿನ ಹಂಚಿಕೆ ವಿಚಾರವಾಗಿ ಹಲವು ವರ್ಷಗಳಿಂದ ವಿವಾದವಿತ್ತು. ಇದೇ ಕಾರಣಕ್ಕೆ ಕುಟುಂಬದ ಸದಸ್ಯರ ನಡುವೆ ಆಗಾಗ ಜಗಳಗಳು ನಡೆಯುತ್ತಿದ್ದವು. ಬಗೆಹರಿಯದೆ ಉಳಿದಿದ್ದ ಆಸ್ತಿ ವಿವಾದ ಇದೀಗ ಇಬ್ಬರ ಜೀವ ಬಲಿಪಡೆಯಲು ಕಾರಣವಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಬಸವ್ವ ಅವರ ಅಕ್ಕನ ಮಗ ಹಾಗೂ ತಂಗಿಯ ಮಗ ಸೇರಿಕೊಂಡು ಬಸವ್ವ ಮತ್ತು ರಮೇಶ ಅವರ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಮಾರ್ಚ್ನಲ್ಲೇ ಕೊಲೆ ಯತ್ನ ಪ್ರಕರಣ
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖಾಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದ್ದಾರೆ.
ಘಟನೆ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಕುಟುಂಬದಲ್ಲಿ ಹಲವು ವರ್ಷಗಳಿಂದ ಆಸ್ತಿ ವಿವಾದವಿತ್ತು. ರವಿ ಮತ್ತು ಪುಂಡಲೀಕ ಎಂಬುವವರು ಕೊಲೆ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇದೇ ವರ್ಷದ ಮಾರ್ಚ್ನಲ್ಲಿ ರವಿ ವಿರುದ್ಧ ಕೊಲೆ ಯತ್ನದ ಪ್ರಕರಣವೂ ದಾಖಲಾಗಿತ್ತು. ಹತ್ಯೆಯಲ್ಲಿ ಇನ್ನಿತರರು ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಗ್ರಾಮದಲ್ಲಿ ಪೊಲೀಸ್ ನಿಗಾ
ರಾಮದುರ್ಗ ಡಿವೈಎಸ್ಪಿ ಮಡಿವಾಳರ ನೇತೃತ್ವದಲ್ಲಿ ಮುರಗೋಡ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ ಹಾಗೂ ವಿಧಿವಿಜ್ಞಾನ ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದೆ.
ಒಂದೇ ಕುಟುಂಬದ ಇಬ್ಬರು ಹತ್ಯೆಯಾಗಿರುವುದರಿಂದ ಜೀವಾಪುರ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.