
ಬೆಂಗಳೂರು, ನ. 27: ಪೆಟ್ರೋಲ್‌ನಲ್ಲಿ ನಿಗದಿತ ಶೇ. 20ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಬೆರೆಸಲಾಗುತ್ತಿದೆ ಎಂಬ ಪ್ರಕರಣದ ಬೆನ್ನಲ್ಲೇ ತೈಲ ಕಂಪನಿಗಳ ಟರ್ಮಿನಲ್‌ಗಳಲ್ಲಿಯೂ ಮಾಪನ ವ್ಯತ್ಯಾಸ ಪತ್ತೆಯಾಗಿದೆ. ಬೆಂಗಳೂರು ಹೊರವಲಯದ ದೇವನಗೊಂಡಿಯಲ್ಲಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಟರ್ಮಿನಲ್‌ನಲ್ಲಿ ಪ್ರತಿ 3,000 ಲೀಟರ್ ಮಾಪನಕ್ಕೆ 14 ಲೀಟರ್ ಹೆಚ್ಚುವರಿ ಎಥೆನಾಲ್ ಹಾಗೂ 4ರಿಂದ 6 ಲೀಟರ್ ಕಡಿಮೆ ಪೆಟ್ರೋಲ್ ಪೂರೈಕೆಯಾಗುತ್ತಿರುವುದು ಪರಿಶೀಲನೆಯಲ್ಲಿ ಕಂಡುಬಂದಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ.
ಪೆಟ್ರೋಲ್ ಬಂಕ್‌ಗಳಲ್ಲಿನ ಅಕ್ರಮಗಳ ವಿರುದ್ಧ ಕ್ರಮ ಕೈಗೊಂಡ ಬೆನ್ನಲ್ಲೇ ಎಥೆನಾಲ್ ಮಿಶ್ರಣ ಮಾಡುವ ತೈಲ ಕಂಪನಿಗಳ ಟರ್ಮಿನಲ್‌ಗಳ ತಪಾಸಣೆಯನ್ನು ರಾಜ್ಯದ ಕಾನೂನು ಮಾಪನಶಾಸ್ತ್ರ ಇಲಾಖೆ ತೀವ್ರಗೊಳಿಸಿದೆ.
ನ. 25ರಂದು ಬೆಂಗಳೂರು ಹಾಗೂ ಮೈಸೂರು ವಿಭಾಗಗಳ ಕಾನೂನು ಮಾಪನಶಾಸ್ತ್ರ ಜಂಟಿ ನಿಯಂತ್ರಕರ ತಂಡ ದೇವನಗೊಂಡಿ ಟರ್ಮಿನಲ್‌ಗೆ ಭೇಟಿ ನೀಡಿ, ಪ್ರಮಾಣೀಕೃತ ಮಾಪಕದ ಮೂಲಕ ಅಲ್ಲಿನ ದ್ರವ ಹರಿವು ಮಾಪನ ಉಪಕರಣಗಳನ್ನು ಪರೀಕ್ಷಿಸಿದೆ.
ಟರ್ಮಿನಲ್‌ನ ಬೇ ಸಂಖ್ಯೆ 9ರಲ್ಲಿ ಅಳವಡಿಸಲಾಗಿರುವ 19061056 ಕ್ರಮಸಂಖ್ಯೆಯ ಮಾಪನ ಉಪಕರಣದಲ್ಲಿ ಪ್ರತಿ 3,000 ಲೀಟರ್‌ಗೆ 14 ಲೀಟರ್ ಹೆಚ್ಚುವರಿ ಎಥೆನಾಲ್ ಪೂರೈಕೆಯಾಗುತ್ತಿರುವುದು ಕಂಡುಬಂದಿದೆ. ಇದೇ ವಿಭಾಗದಲ್ಲಿ ಪ್ರತಿ 3,000 ಲೀಟರ್‌ಗೆ 4ರಿಂದ 6 ಲೀಟರ್ ಕಡಿಮೆ ಪೆಟ್ರೋಲ್ ಪೂರೈಕೆಯಾಗುತ್ತಿರುವುದೂ ಪತ್ತೆಯಾಗಿದೆ.
ಬೇ ಸಂಖ್ಯೆ 4ರಲ್ಲಿ ಅಳವಡಿಸಲಾಗಿರುವ ಇಸಿ 20010954 ಕ್ರಮಸಂಖ್ಯೆಯ ಮಾಪನ ಉಪಕರಣದಲ್ಲಿ ಪ್ರತಿ 3,000 ಲೀಟರ್‌ಗೆ 3 ಲೀಟರ್ ಹೆಚ್ಚುವರಿ ಎಥೆನಾಲ್ ಪೂರೈಕೆಯಾಗುತ್ತಿರುವುದು ಬೆಳಕಿಗೆ ಬಂದಿದೆ.
ಈ ಎಲ್ಲ ವ್ಯತ್ಯಾಸಗಳು ಕಾನೂನು ಮಾಪನಶಾಸ್ತ್ರ ಕಾಯ್ದೆ ಮತ್ತು ನಿಯಮಗಳಡಿ ಅನುಮತಿಸಲಾದ ಮಿತಿಯನ್ನು ಮೀರಿವೆ ಎಂದು ಇಲಾಖೆ ತಿಳಿಸಿದೆ.
ಮಾಪನ ಉಪಕರಣಗಳ ಬಳಕೆಗೆ ನಿರ್ಬಂಧ
ಮಾನದಂಡಗಳಿಗೆ ಅನುಗುಣವಾಗಿಲ್ಲದ ಮಾಪನ ಉಪಕರಣಗಳ ಬಳಕೆಯಿಂದ ಗ್ರಾಹಕರು, ತೈಲ ವಿತರಕರು ಹಾಗೂ ಇತರ ಪಾಲುದಾರರ ಹಿತಾಸಕ್ತಿಗೆ ಧಕ್ಕೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ದೇವನಗೊಂಡಿ ಟರ್ಮಿನಲ್‌ನ ಉಪ ಮಹಾಪ್ರಬಂಧಕರಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿದೆ.
ಎಥೆನಾಲ್ ಮತ್ತು ಪೆಟ್ರೋಲ್ ಮಾಪನದಲ್ಲಿ ಕಂಡುಬಂದ ವ್ಯತ್ಯಾಸಗಳಿಗೆ ಕಾರಣಗಳನ್ನು ವಿವರಿಸಬೇಕು. ಮಾಪನ ಉಪಕರಣಗಳ ನಿಖರತೆ ಖಚಿತಪಡಿಸಿಕೊಳ್ಳಲು ಕೈಗೊಂಡ ಕ್ರಮಗಳು, ಇತ್ತೀಚಿನ ಮಾಪನ ಪ್ರಮಾಣೀಕರಣ ಪತ್ರಗಳು ಹಾಗೂ ನಿರ್ವಹಣಾ ದಾಖಲೆಗಳನ್ನು ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.
ಲೋಪಗಳನ್ನು ಸರಿಪಡಿಸಲು ಮತ್ತು ಕಾನೂನು ನಿಯಮಗಳ ಪಾಲನೆಗಾಗಿ ಕೈಗೊಳ್ಳಲಿರುವ ಕ್ರಮಗಳ ವಿವರಗಳೊಂದಿಗೆ ನೋಟಿಸ್ ತಲುಪಿದ 7 ದಿನಗಳೊಳಗೆ ಲಿಖಿತ ವಿವರಣೆ ಸಲ್ಲಿಸುವಂತೆ ಸೂಚಿಸಲಾಗಿದೆ.
ಮಾಪನ ಉಪಕರಣಗಳ ನಿಖರತೆ ಹಾಗೂ ಕಾನೂನುಬದ್ಧ ಮಾನದಂಡಗಳ ಪಾಲನೆ ದೃಢಪಡುವವರೆಗೆ ಅವುಗಳನ್ನು ವಾಣಿಜ್ಯ ವಹಿವಾಟಿಗೆ ಬಳಸಬಾರದು ಎಂದು ನಿರ್ದೇಶಿಸಲಾಗಿದೆ.
ನಿಗದಿತ ಅವಧಿಯೊಳಗೆ ಸಮರ್ಪಕ ವಿವರಣೆ ನೀಡದಿದ್ದರೆ ಕಾನೂನು ಮಾಪನಶಾಸ್ತ್ರ ಕಾಯ್ದೆ 2009 ಮತ್ತು ಸಂಬಂಧಿತ ನಿಯಮಗಳಡಿ ಹೆಚ್ಚಿನ ಕಾನೂನು ಹಾಗೂ ಇಲಾಖಾ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಲಾಗಿದೆ.