ಹಾವೇರಿ, ನ. 26: ಸಿನಿಮಾ ಚಿತ್ರೀಕರಣಕ್ಕೆ ಬಳಸುವ ನಕಲಿ ನೋಟುಗಳನ್ನು ಬ್ಯಾಂಕಿನ ನಗದು ಜಮಾ ಯಂತ್ರದ ಮೂಲಕ ಚಲಾವಣೆಗೆ ತರಲು ಯತ್ನಿಸಿದ ಇಬ್ಬರು ರಾಣೇಬೆನ್ನೂರಿನಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಮೇಡ್ಲೇರಿ ಗ್ರಾಮದ ಸುರೇಶ ಬಿಲ್ಲಾಳ ಹಾಗೂ ಮಾಲತೇಶ ಮೈಲಾರ ಬಂಧಿತ ಆರೋಪಿಗಳಾಗಿದ್ದು, ಇವರಿಂದ 5 ಲಕ್ಷ ರೂ. ಮುಖಬೆಲೆಯ 1,000 ನಕಲಿ ನೋಟುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ರಾಣೇಬೆನ್ನೂರು ನಗರದ ರಾಷ್ಟ್ರೀಯ ಬ್ಯಾಂಕೊಂದರ ಎಟಿಎಂ ಕೇಂದ್ರದಲ್ಲಿ ಆರೋಪಿಗಳು 500 ರೂ. ಮುಖಬೆಲೆಯ 76 ನಕಲಿ ನೋಟುಗಳನ್ನು ಜಮೆ ಮಾಡಲು ಯತ್ನಿಸಿದ್ದರು. ನಗದು ಜಮಾ ಯಂತ್ರದ ತಾಂತ್ರಿಕ ವ್ಯವಸ್ಥೆಯಿಂದಾಗಿ ವಂಚನೆ ಯತ್ನ ಬಯಲಾಗಿದೆ.
ಆರೋಪಿಗಳಿಗೆ ಇಷ್ಟೊಂದು ಪ್ರಮಾಣದ ಸಿನಿಮಾ ನೋಟುಗಳು ಎಲ್ಲಿಂದ ದೊರೆತವು ಹಾಗೂ ಈ ಹಿಂದೆ ಬೇರೆಡೆ ಇಂತಹ ನೋಟುಗಳನ್ನು ಚಲಾವಣೆ ಮಾಡಿದ್ದಾರೆಯೇ ಎಂಬ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.