ವಾಷಿಂಗ್ಟನ್, ನ. 26: ತಂತ್ರಜ್ಞಾನ ದಿಗ್ಗಜ ಐಬಿಎಂ ತನ್ನ ಸಲಹಾ ಸೇವಾ ವಿಭಾಗದ ಬಹುತೇಕ ಹುದ್ದೆಗಳಿಗೆ ಅಮೆರಿಕದ ಉದ್ಯೋಗ ವೀಸಾ ಹಾಗೂ ಗ್ರೀನ್ ಕಾರ್ಡ್ ಪ್ರಾಯೋಜಕತ್ವವನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಇದರಿಂದ ಭಾರತೀಯ ತಂತ್ರಜ್ಞಾನ ವೃತ್ತಿಪರರಲ್ಲಿ ಆತಂಕ ಮೂಡಿದೆ.
ಬಾಧಿತ ಉದ್ಯೋಗಿಗಳು ಅಮೆರಿಕ ತೊರೆದು ಬೇರೆ ದೇಶದಲ್ಲಿ ಕಂಪನಿಯ ಉದ್ಯೋಗ ಮುಂದುವರಿಸಬೇಕು ಅಥವಾ ಡಿ. 31ರೊಳಗೆ ಉದ್ಯೋಗ ತೊರೆಯಬೇಕು ಎಂಬ ಆಯ್ಕೆ ನೀಡಲಾಗಿದೆ.
ಈ ವಿಭಾಗದಲ್ಲಿ ಜಾಗತಿಕವಾಗಿ 1.50 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳಿದ್ದಾರೆ. ಆದರೆ ಎಷ್ಟು ಮಂದಿ ಬಾಧಿತರಾಗಲಿದ್ದಾರೆ ಎಂಬುದನ್ನು ಕಂಪನಿ ಬಹಿರಂಗಪಡಿಸಿಲ್ಲ.
ಸ್ಥಳಾಂತರದ ಕುರಿತು ನಿರ್ಧರಿಸಲು ಉದ್ಯೋಗಿಗಳಿಗೆ 3 ವಾರಗಳ ಕಾಲಾವಕಾಶ ನೀಡಲಾಗಿದೆ. ಸ್ಥಳಾಂತರಕ್ಕೆ ಒಪ್ಪದವರಿಗೆ 3 ತಿಂಗಳ ವೇತನಕ್ಕೆ ಸಮಾನವಾದ ಪರಿಹಾರ ನೀಡಲಾಗುವುದು ಎಂದು ವರದಿಯಾಗಿದೆ.
ಗ್ರಾಹಕರ ಬೇಡಿಕೆ, ವ್ಯವಹಾರದ ಅಗತ್ಯಗಳು ಹಾಗೂ ನುರಿತ ಉದ್ಯೋಗಿಗಳ ಲಭ್ಯತೆಯನ್ನು ಪರಿಗಣಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಐಬಿಎಂ ತಿಳಿಸಿದೆ.
ಭಾರತದಲ್ಲಿ 1,125 ಉದ್ಯೋಗಾವಕಾಶಗಳು
ಅಮೆರಿಕದಿಂದ ಸ್ಥಳಾಂತರಗೊಳ್ಳುವ ಉದ್ಯೋಗಿಗಳಿಗೆ ಭಾರತ ಪ್ರಮುಖ ತಾಣವಾಗುವ ಸಾಧ್ಯತೆಯಿದೆ. ಅಮೆರಿಕದ ಹೊರಗೆ ಐಬಿಎಂ ಪಟ್ಟಿ ಮಾಡಿರುವ 1,278 ಸಲಹಾ ಸೇವಾ ಹುದ್ದೆಗಳಲ್ಲಿ 1,125 ಹುದ್ದೆಗಳು ಭಾರತದಲ್ಲಿವೆ.
ಆದರೆ ಸ್ಥಳಾಂತರಗೊಳ್ಳುವ ಉದ್ಯೋಗಿಗಳಿಗೆ ಪ್ರಸ್ತುತ ಹುದ್ದೆ ಮತ್ತು ವೇತನಕ್ಕೆ ಸಮಾನವಾದ ಅವಕಾಶಗಳು ದೊರೆಯಲಿವೆಯೇ ಎಂಬುದನ್ನು ಕಂಪನಿ ಸ್ಪಷ್ಟಪಡಿಸಿಲ್ಲ.
ಟ್ರಂಪ್ ಆಡಳಿತ ಉದ್ಯೋಗ ಆಧಾರಿತ ವಲಸೆ ನಿಯಮಗಳನ್ನು ಬಿಗಿಗೊಳಿಸುತ್ತಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಕೆಲವು ಹೊಸ ಎಚ್-1ಬಿ ವೀಸಾ ಅರ್ಜಿಗಳಿಗೆ 1 ಲಕ್ಷ ಡಾಲರ್ ಶುಲ್ಕ ವಿಧಿಸುವ ಕ್ರಮವೂ ಭಾರತೀಯ ವೃತ್ತಿಪರರಲ್ಲಿ ಅನಿಶ್ಚಿತತೆ ಮೂಡಿಸಿದೆ.
ಕೃತಕ ಬುದ್ಧಿಮತ್ತೆ ಹಾಗೂ ಸ್ವಯಂಚಾಲಿತ ವ್ಯವಸ್ಥೆಗಳ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೊಸ ತಂತ್ರಜ್ಞಾನ ಕೌಶಲ್ಯಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಲಿದೆ ಎಂದು ಉದ್ಯಮ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.