ಹೊಸದಿಲ್ಲಿ, ನ. 26: ಬ್ರಿಟನ್ನ ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾಕ್ರೋಚ್ ಚಳವಳಿ ಕುರಿತು ಮಾತನಾಡಲು ತೆರಳುತ್ತಿದ್ದ ಕಾಕ್ರೋಚ್ ಜನತಾ ಪಾರ್ಟಿಯ ಸಹ ಸಂಚಾಲಕ ಸೌರವ್ ದಾಸ್ ವಿರುದ್ಧ ಮುಂಬಯಿ ಪೊಲೀಸರು ಲುಕ್ಔಟ್ ಸುತ್ತೋಲೆ ಹೊರಡಿಸಿದ್ದಾರೆ ಎಂದು ಕೇಂದ್ರ ಸರ್ಕಾರ ಗುರುವಾರ ಹೊಸದಿಲ್ಲಿ ಹೈಕೋರ್ಟಗೆ ತಿಳಿಸಿದೆ.
ವಿದೇಶ ಪ್ರಯಾಣಕ್ಕೆ ನಿರ್ಬಂಧ ವಿಧಿಸಿರುವ ಕ್ರಮವನ್ನು ಪ್ರಶ್ನಿಸಿ ದಾಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಮಿತ್ ಮಹಾಜನ್, ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿದರು. ಮುಂದಿನ ವಿಚಾರಣೆಯನ್ನು ಡಿ. 9ಕ್ಕೆ ನಿಗದಿಪಡಿಸಿದರು.
ನ. 23ರಂದು ಮುಂಬಯಿ ಪೊಲೀಸರು ದಾಸ್ ವಿರುದ್ಧ ಲುಕ್ಔಟ್ ಸುತ್ತೋಲೆ ಹೊರಡಿಸಿದ್ದಾರೆ. ಈ ಸಂಬಂಧ ಕಾರಣ ಕೇಳಿ ನೋಟಿಸ್ ನೀಡಲಾಗಿದ್ದು, ಅದಕ್ಕೆ ಅವರು ಇನ್ನೂ ಉತ್ತರಿಸಿಲ್ಲ ಎಂದು ಕೇಂದ್ರ ಸರ್ಕಾರದ ಪರ ವಕೀಲರು ತಿಳಿಸಿದರು.
ಆದರೆ ಲುಕ್ಔಟ್ ಸುತ್ತೋಲೆ ಜಾರಿಗೊಳಿಸಿರುವ ಬಗ್ಗೆ ತಮ್ಮ ಕಕ್ಷಿದಾರರಿಗೆ ಯಾವುದೇ ಮಾಹಿತಿ ನೀಡಿಲ್ಲ. ಅದರ ಉದ್ದೇಶ ಮತ್ತು ಕಾರಣಗಳನ್ನೂ ತಿಳಿಸಿಲ್ಲ ಎಂದು ದಾಸ್ ಪರ ವಕೀಲರು ವಾದಿಸಿದರು.
ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಕಾಕ್ರೋಚ್ ಚಳವಳಿ ಕುರಿತು ಮಾತನಾಡುವ ಉದ್ದೇಶದಿಂದ ನ. 23ರ ರಾತ್ರಿ ಲಂಡನ್ಗೆ ಪ್ರಯಾಣಿಸಲು ಹೊಸದಿಲ್ಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ತಮ್ಮನ್ನು ವಿಮಾನ ಹತ್ತುವ ಮುನ್ನ ವಲಸೆ ತಪಾಸಣಾ ಕೇಂದ್ರದಲ್ಲಿ ತಡೆಹಿಡಿಯಲಾಯಿತು ಎಂದು ದಾಸ್ ಅರ್ಜಿಯಲ್ಲಿ ಆರೋಪಿಸಿದ್ದಾರೆ.