ಬೆಂಗಳೂರು, ನ. 26: ಶಿಕ್ಷಣ ಹಕ್ಕು ಕಾಯ್ದೆಯನ್ನು ಸಮಗ್ರವಾಗಿ ಜಾರಿಗೊಳಿಸುವುದು ಹಾಗೂ ಸರ್ಕಾರಿ ಶಾಲೆಗಳನ್ನು ಖಾಸಗಿ ಸಂಸ್ಥೆಗಳು ಅಥವಾ ವ್ಯಕ್ತಿಗಳಿಗೆ ದತ್ತು ನೀಡುವ ನೀತಿಯನ್ನು ಕೈಬಿಡುವಂತೆ ಆಗ್ರಹಿಸಿ ನಡೆಯುತ್ತಿರುವ ಧರಣಿ ಸ್ಥಳಕ್ಕೆ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತ ಪ್ರಭುಲಿಂಗ ಕವಳಿಕಟ್ಟಿ ಭೇಟಿ ನೀಡಿ ಹೋರಾಟಗಾರರ ಅಹವಾಲು ಆಲಿಸಿದರು.
ಈ ಸಂದರ್ಭದಲ್ಲಿ ಶಿಕ್ಷಣ ತಜ್ಞ ನಿರಂಜನಾರಾಧ್ಯ ಅವರು ಸರ್ಕಾರಿ ಶಾಲೆಗಳ ಸ್ಥಿತಿಗತಿ, ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯಲ್ಲಿನ ಸಮಸ್ಯೆಗಳು ಹಾಗೂ ದತ್ತು ನೀತಿಯ ಪರಿಣಾಮಗಳ ಕುರಿತು ಆಯುಕ್ತರ ಗಮನ ಸೆಳೆದರು.
ಶಿಕ್ಷಣ ಪ್ರತಿಯೊಂದು ಮಗುವಿನ ಮೂಲಭೂತ ಹಕ್ಕು, ಅದು ಭಿಕ್ಷೆಯಲ್ಲ. ಸರ್ಕಾರಿ ಶಾಲೆಗಳನ್ನು ಖಾಸಗಿಯವರಿಗೆ ದತ್ತು ನೀಡುವುದು ಅಲ್ಲಿನ ಮಕ್ಕಳ ಸ್ವಾಭಿಮಾನಕ್ಕೆ ಧಕ್ಕೆ ತರುವ ಕ್ರಮವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯಲ್ಲಿನ ಸಮಸ್ಯೆಗಳನ್ನು ಪರಿಹರಿಸುವ ಬದಲು ಶಾಲೆಗಳನ್ನು ಖಾಸಗಿ ವಲಯಕ್ಕೆ ದತ್ತು ನೀಡಲು ಸರ್ಕಾರ ಮುಂದಾಗಿರುವುದು ಕಳವಳಕಾರಿಯಾಗಿದೆ. ಶಾಲೆಗಳ ನಿರ್ವಹಣೆ, ಶಿಕ್ಷಕರ ನೇಮಕ ಹಾಗೂ ಮೂಲಸೌಕರ್ಯ ಕಲ್ಪಿಸುವುದು ಸರ್ಕಾರದ ಜವಾಬ್ದಾರಿ. ಈ ಜವಾಬ್ದಾರಿಯನ್ನು ಖಾಸಗಿ ವಲಯಕ್ಕೆ ವರ್ಗಾಯಿಸುವುದನ್ನು ಒಪ್ಪಲು ಸಾಧ್ಯವಿಲ್ಲ. ಎರಡೂ ಬೇಡಿಕೆಗಳು ಈಡೇರುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು.
ಹೋರಾಟಗಾರರ ಅಹವಾಲು ಆಲಿಸಿದ ಆಯುಕ್ತ ಕವಳಿಕಟ್ಟಿ, ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ವಾಸ್ತವ ಸ್ಥಿತಿ ಹಾಗೂ ನೆಲಮಟ್ಟದ ಸಮಸ್ಯೆಗಳನ್ನು ಅರಿತುಕೊಳ್ಳಲು ಧರಣಿ ಸ್ಥಳಕ್ಕೆ ಬಂದಿರುವುದಾಗಿ ತಿಳಿಸಿದರು.
ಇಲಾಖೆಯ ಜವಾಬ್ದಾರಿ ವಹಿಸಿಕೊಂಡು ಕೇವಲ 10 ದಿನಗಳಾಗಿವೆ. ಇಲಾಖೆಯ ಅಧಿಕಾರಿಗಳಿಂದ ದೊರೆಯುವ ವರದಿಗಳಷ್ಟೇ ಸಾಕಾಗುವುದಿಲ್ಲ. ಹೊರಗಿನ ವಾಸ್ತವ ಸ್ಥಿತಿಯನ್ನೂ ಅರಿತುಕೊಳ್ಳುವುದು ಅಗತ್ಯವಾಗಿದೆ. ಶಿಕ್ಷಣ ಕ್ಷೇತ್ರದ ಸಂಘಟನೆಗಳು ಸ್ವತಂತ್ರವಾಗಿ ಪರಿಶೀಲಿಸಿ ಹಲವು ಸೂಕ್ಷ್ಮ ವಿಚಾರಗಳನ್ನು ಗಮನಕ್ಕೆ ತಂದಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಕೆಲವು ಸಂದರ್ಭಗಳಲ್ಲಿ ಅಧಿಕಾರಿಗಳಿಂದ ಎಲ್ಲ ಸಮಸ್ಯೆಗಳೂ ಮುಕ್ತವಾಗಿ ಬೆಳಕಿಗೆ ಬರುವುದಿಲ್ಲ. ಅಂತಹ ಸಂದರ್ಭದಲ್ಲಿ ಶಿಕ್ಷಣ ತಜ್ಞರು ಹಾಗೂ ಸಂಘಟನೆಗಳ ಮಾರ್ಗದರ್ಶನ ಇಲಾಖೆಗೆ ನೆರವಾಗಲಿದೆ. ಹೋರಾಟಗಾರರ ಮಾಹಿತಿಯನ್ನು ಗಂಭೀರವಾಗಿ ಪರಿಗಣಿಸಿ, ಅವರ ಸಹಕಾರದೊಂದಿಗೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ತಿಳಿಸಿದರು.
500 ಶಾಲೆಗಳ ಅಭಿವೃದ್ಧಿಗೆ 2,500 ಕೋಟಿ ರೂ.
ಬಾಹ್ಯ ನೆರವಿನ ಅನುದಾನದ ಮೂಲಕ 500 ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳನ್ನು 2,500 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಯೋಜನೆ ರೂಪಿಸಲಾಗಿದೆ ಎಂದು ಕವಳಿಕಟ್ಟಿ ತಿಳಿಸಿದರು.
ಶಾಲೆಗಳ ಅಭಿವೃದ್ಧಿ ಎಂದರೆ ಕೇವಲ ಕಟ್ಟಡ ಮತ್ತು ತರಗತಿ ಕೊಠಡಿಗಳ ನಿರ್ಮಾಣವಲ್ಲ. ಮಕ್ಕಳಿಗೆ ಅಗತ್ಯವಾದ ಪೂರಕ ಸೌಲಭ್ಯಗಳು, ಆಟದ ವ್ಯವಸ್ಥೆ ಹಾಗೂ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಅನುಕೂಲಕರ ವಾತಾವರಣ ನಿರ್ಮಿಸುವುದು ಯೋಜನೆಯ ಉದ್ದೇಶವಾಗಿದೆ.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಮೂಲಕವೂ ಹಲವು ಶಾಲೆಗಳ ಮೂಲಸೌಕರ್ಯ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಕಾರ್ಯದಲ್ಲಿ ಶಿಕ್ಷಣ ಕ್ಷೇತ್ರದ ಸಂಘಟನೆಗಳ ಸಹಕಾರವನ್ನೂ ನಿರೀಕ್ಷಿಸುವುದಾಗಿ ಹೇಳಿದರು.
ಸರ್ಕಾರದ ಗಮನಕ್ಕೆ ಆಕ್ಷೇಪಗಳು
ಸರ್ಕಾರಿ ಶಾಲೆಗಳ ದತ್ತು ಯೋಜನೆಯಲ್ಲಿನ ನ್ಯೂನತೆಗಳು ಹಾಗೂ ಸರ್ಕಾರದ ಜವಾಬ್ದಾರಿಯನ್ನು ಖಾಸಗಿ ವಲಯಕ್ಕೆ ವಹಿಸುವುದಕ್ಕೆ ಹೋರಾಟಗಾರರು ವ್ಯಕ್ತಪಡಿಸಿರುವ ಆಕ್ಷೇಪಗಳನ್ನು ಯಥಾವತ್ತಾಗಿ ಸರ್ಕಾರಕ್ಕೆ ತಲುಪಿಸಲಾಗುವುದು ಎಂದು ಕವಳಿಕಟ್ಟಿ ಭರವಸೆ ನೀಡಿದರು.
ಎಲ್ಲ ಮಕ್ಕಳಿಗೂ ಸಮಾನ ಅವಕಾಶ ಹಾಗೂ ಗುಣಮಟ್ಟದ ಶಿಕ್ಷಣ ದೊರೆಯುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುವುದು. ಹೋರಾಟಗಾರರ ಬೇಡಿಕೆಗಳನ್ನು ಶಿಕ್ಷಣ ಸಚಿವರು ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ಮುಂದಿನ ದಿನಗಳಲ್ಲಿ ಶಿಕ್ಷಣ ತಜ್ಞರು ಹಾಗೂ ಹೋರಾಟಗಾರರೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಹೋರಾಟಗಾರರು ತಮ್ಮ ಎರಡು ಪ್ರಮುಖ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಆಯುಕ್ತರಿಗೆ ಸಲ್ಲಿಸಿದರು. ಧರಣಿ ಸ್ಥಳಕ್ಕೆ ಭೇಟಿ ನೀಡಿ ಅಹವಾಲು ಆಲಿಸಿದ ಆಯುಕ್ತರಿಗೆ ನಿರಂಜನಾರಾಧ್ಯ ಕೃತಜ್ಞತೆ ಸಲ್ಲಿಸಿದರು.